ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಶಂಕೆಯ ಮೇಲೆ ಬಂಧಿಸಲ್ಪಟ್ಟ ಜ್ಯೋತಿ ಮಲ್ಹೋತ್ರಾಳಿಗೆ ಮುಖ್ಯಮಂತ್ರಿಯ ಅಳಿಯ ಜೊತೆ ಲಿಂಕ್ ಇರುವುದಾಗಿ ಆರೋಪಿಸಲಾಗಿದೆ. ಜೊತೆಗೆ ಇನ್ನೋರ್ವ ಯುಟ್ಯೂಬರ್ ಅರೆಸ್ಟ್ ಆಗಿದ್ದಾನೆ. ಏನಿದು ಸ್ಟೋರಿ?
ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಶಂಕೆಯ ಮೇಲೆ ಬಂಧಿಸಲ್ಪಟ್ಟ ಹರಿಯಾಣದ ಜ್ಯೋತಿ ಮಲ್ಹೋತ್ರಾಳ ವಿಚಾರಣೆ ತೀವ್ರವಾಗಿದೆ. ಸದ್ಯ ಈಕೆಯ ಸುದ್ದಿ ತಣ್ಣಗಾಗುತ್ತಿದ್ದರೂ, ತನಿಖಾ ಸಂಸ್ಥೆ ಮಾತ್ರ ಭಯಾನಕ ಮಾಹಿತಿಗಳನ್ನು ಕಲೆ ಹಾಕುತ್ತಲಿದೆ. ಈಕೆಯ ಮೇಲೆ ವರ್ಷದಿಂದಲೂ ತನಿಖಾ ಸಂಸ್ಥೆ ಕಣ್ಣಿಟ್ಟಿತ್ತು. ಪಾಕಿಸ್ತಾನದ ಗೆಳೆಯ ಡ್ಯಾನಿಶ್ ಸ್ನೇಹಿತನ ಕೋಣೆಯಲ್ಲಿ ನಾಲ್ಕು ಗಂಟೆಗಳ ಕಾಲ ಈಕೆ ಇದ್ದು ನಡೆಸಿದ್ದ ಕೃತ್ಯದಿಂದ ಕೊನೆಗೂ ಅಸಲಿಯತ್ತು ಬಯಲಾಗಿ ಅರೆಸ್ಟ್ ಆಗಿದ್ದಾಳೆ ಈ ದೇಶದ್ರೋಹಿ! ಪಾಕಿಸ್ತಾನದ ಎರಡನೇ ಪ್ರವಾಸದ ಸಮಯದಲ್ಲಿ ಭದ್ರತಾ ತನಿಖಾ ಸಂಸ್ಥೆಗಳ ಗಮನಕ್ಕೆ ಬಂದಿದ್ದಳು. ಜ್ಯೋತಿ ಸುಮಾರು ಒಂದು ವರ್ಷ ಗುಪ್ತಚರ ಬ್ಯೂರೋ (ಐಬಿ) ಯ ಕಣ್ಗಾವಲಿನಲ್ಲಿದ್ದಳು. ಆಕೆಯ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿತ್ತು. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಜ್ಯೋತಿ ಪಾಕಿಸ್ತಾನ ಗುಪ್ತಚರ ಆಪರೇಟಿವ್ (ಪಿಐಒ) ಜೊತೆ ಸಂಪರ್ಕದಲ್ಲಿರುವುದು ತಿಳಿದು ಬಂದ ನಂತರವಷ್ಟೇ ತನಿಖೆಗೆ ಒಳಪಡಿಸಲಾಗಿದೆ.
ಇದೀಗ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಮತ್ತೋರ್ವ 'ದ್ರೋಹಿ' ಯುಟ್ಯೂಬರ್ ಜಸ್ಬೀರ್ ಸಿಂಗ್ನನ್ನು ಬಂಧಿಸಲಾಗಿದೆ. ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳು ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ಶಂಕಿತ ಸಂಪರ್ಕ ಹೊಂದಿರುವ ಪ್ರಮುಖ ಬೇಹುಗಾರಿಕೆ ಜಾಲವನ್ನು ಪಂಜಾಬ್ ಪೊಲೀಸರು ಪತ್ತೆಹಚ್ಚುವ ಮೂಲಕ, ರೂಪನಗರ ಮೂಲದ ಯೂಟ್ಯೂಬರ್ ಜಸ್ಬೀರ್ ಸಿಂಗ್ ನನ್ನು ಅರೆಸ್ಟ್ ಮಾಡಲಾಗಿದೆ. ಗುಪ್ತಚರ ಮಾಹಿತಿಯ ಮೇರೆಗೆ ಮೊಹಾಲಿಯಲ್ಲಿರುವ ರಾಜ್ಯ ವಿಶೇಷ ಕಾರ್ಯಾಚರಣೆ ಕೋಶ (SSOC) "ಜಾನ್ ಮಹಲ್" ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಿರ್ವಹಿಸುವ ಜಸ್ಬೀರ್ ಸಿಂಗ್ ಚಟುವಟಿಕೆಗಳ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಿದೆ. ಡ್ಯಾನಿಶ್ ಆಹ್ವಾನದ ಮೇರೆಗೆ ಜಸ್ಬೀರ್ ದೆಹಲಿಯಲ್ಲಿ ನಡೆದ ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ. ಅಲ್ಲಿ ಆತ ಪಾಕಿಸ್ತಾನಿ ಸೇನಾ ಅಧಿಕಾರಿಗಳು ಮತ್ತು ವ್ಲಾಗ್ಗರ್‌ಗಳನ್ನು ಭೇಟಿಯಾಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಮೂರು ಬಾರಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿರುವುದು ತಿಳಿದಿರುವುದೂ ಅಲ್ಲದೇ, ಆತನ ಎಲೆಕ್ಟ್ರಾನಿಕ್ ಸಾಧನಗಳು ಬಹು ಪಾಕಿಸ್ತಾನ ಮೂಲದ ಸಂಖ್ಯೆಗಳನ್ನು ಹೊಂದಿರುವುದು ತಿಳಿದಿದ್ದು, ಸದ್ಯ ಅವೆಲ್ಲಾ ವಿಧಿವಿಜ್ಞಾನ ಪರಿಶೀಲನೆಯಲ್ಲಿವೆ ಎಂದು ಪಂಜಾಬ್‌ನ ಉನ್ನತ ಪೊಲೀಸ್ ಅಧಿಕಾರಿ ಪೋಸ್ಟ್ ಮಾಡಿದ್ದಾರೆ.
ಇದೇ ವೇಳೆ ಇನ್ನೊಂದು ಶಾಕಿಂಗ್ ವಿಷಯವೂ ರಿವೀಲ್ ಆಗಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಳಿಯ, ಪ್ರವಾಸೋದ್ಯಮ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಅವರ ಜೊತೆ ಜ್ಯೋತಿ ಮಲ್ಹೋತ್ರಾಗೆ ಭಾರಿ ಲಿಂಕ್ ಇದೆ ಎಂದು ಬಿಜೆಪಿ ಆರೋಪಿಸಿದೆ. ಜ್ಯೋತಿ ಮಲ್ಹೋತ್ರಾ ಕೇರಳದ ಕಣ್ಣೂರಿಗೆ ಭೇಟಿ ಕೊಟ್ಟಿದ್ದ ಸಮಯದಲ್ಲಿ ಕೇರಳ ಪ್ರವಾಸೋದ್ಯಮ ಇಲಾಖೆಯು ರಾಜ್ಯ ಪ್ರಾಯೋಜಿತ ಕಾರ್ಯಕ್ರಮದಡಿಯಲ್ಲಿ ಆತಿಥ್ಯ ವಹಿಸಿತ್ತು.ಪ್ರವಾಸೋದ್ಯಮ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಈ ವಿಭಾಗದ ನೇತೃತ್ವ ವಹಿಸಿದ್ದರು ಎಂದು ಬಿಜೆಪಿ ನಾಯಕ ಮತ್ತು ಕೇರಳ ರಾಜ್ಯ ಮಾಜಿ ಅಧ್ಯಕ್ಷ ಕೆ. ಸುರೇಂದ್ರನ್ ಅವರು ಆರೋಪಿಸಿದ್ದಾರೆ. ಜ್ಯೋತಿ ಅವರು ಪಾಕಿಸ್ತಾನದ ಜೊತೆ ಲಿಂಕ್ನಲ್ಲಿ ಇರುವ ಮಧ್ಯೆಯೇ ಕೇರಳ ಪ್ರವಾಸ ಮಾಡಿರುವುದು ಹಾಗೂ ಇದಕ್ಕೆ ರಿಯಾಸ್ ಅವರು ಜೊತೆಗಾರರಾಗಿ ಕೆಲಸ ಮಾಡಿದ್ದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ. ಪಾಕ್-ಗೂಢಚಾರಿಣಿ ಜ್ಯೋತಿ ಮಲ್ಹೋತ್ರಾಳ ಕಣ್ಣೂರು ಪ್ರವಾಸವನ್ನು ಕೇರಳ ಪ್ರವಾಸೋದ್ಯಮ ಪ್ರಾಯೋಜಿಸಿದ್ದು ಯಾಕೆ, ಅಲ್ಲಿ ಆಕೆ ಯಾರನ್ನು ಭೇಟಿಯಾದರು? ಅವರು ಎಲ್ಲಿಗೆ ಹೋಗಿದ್ದರು, ಅವರ ನಿಜವಾದ ಕಾರ್ಯಸೂಚಿ ಏನಿತ್ತು? ಪಾಕ್ ಸಂಪರ್ಕ ಹೊಂದಿರುವ ಗೂಢಚಾರಳಿಗೆ ಕೇರಳ ಏಕೆ ರೆಡ್ ಕಾರ್ಪೆಟ್ ಹಾಡಿದೆ ಎಂದು ಸುರೇಂದ್ರನ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಅಂದಹಾಗೆ, ಕಳೆದ ಮೂರು ವಾರಗಳಲ್ಲಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಿಂದ ಬೇಹುಗಾರಿಕೆಯ ಶಂಕೆಯ ಮೇಲೆ ಬಂಧಿಸಲಾದ 12 ಜನರಲ್ಲಿ ಜ್ಯೋತಿ ಮಲ್ಹೋತ್ರಾ ಕೂಡ ಒಬ್ಬರು, ಉತ್ತರ ಭಾರತದಲ್ಲಿ ಪಾಕಿಸ್ತಾನ ಸಂಪರ್ಕ ಹೊಂದಿರುವ ಗೂಢಚಾರ ಜಾಲದ ಉಪಸ್ಥಿತಿಯನ್ನು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
