ರಸ್ತೆಗಳ ಮೇಲೆ ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಹಾಕಿ ಟೈರ್ ಪಂಕ್ಚರ್ ಮಾಡುವ ದಂಧೆ ಬೆಂಗಳೂರಿನಲ್ಲಿ ಹೆಚ್ಚುತ್ತಿದೆ. ಪಂಕ್ಚರ್ ಆದ ಸ್ಥಳದಲ್ಲೇ ರಿಪೇರಿ ಅಂಗಡಿಗಳು ಇರುವುದು ಅನುಮಾನ ಹುಟ್ಟಿಸುತ್ತದೆ. ವಾಹನ ಸವಾರರು ಎಚ್ಚರಿಕೆಯಿಂದಿರಬೇಕು.
ವಾಹನವೊಂದು ಕೆಸರಿನಲ್ಲಿ ಹೂತು ಹೋಗುತ್ತದೆ. ಬಳಿಕ ಅಲ್ಲಿಯೇ ಹತ್ತಿರದಲ್ಲಿದ್ದ ಅಂಗಡಿಯ ಹುಡುಗ ಓಡೋಡಿ ಬಂದು ಕೆಸರಿನಲ್ಲಿ ಹೂತಿದ್ದ ಟಯರ್ ಮೇಲಕ್ಕೆ ಎತ್ತುತ್ತಾನೆ. ವಾಹನ ಸವಾರನಿಗೆ ಖುಷಿಯಾಗಿ ಒಂದಿಷ್ಟು ದುಡ್ಡು ಕೊಟ್ಟು ಕಳಿಸುತ್ತಾನೆ. ಬಳಿಕ ಏನ್ ಕೆಲಸ ಮಾಡಿಕೊಂಡಿದಿಯಪ್ಪಾ ಎಂದು ಪ್ರಶ್ನಿಸಿದಾಗ ಆ ಹುಡುಗ, ರಸ್ತೆಯ ಮೇಲೆ ನೀರು ಹಾಕುವುದು ಸಾರ್... ಎನ್ನುತ್ತಾನೆ! ಇದು ಸಿನಿಮಾ ಒಂದರಲ್ಲಿ ಹಾಸ್ಯದ ರೂಪದಲ್ಲಿ ಕಂಡುಬರುವ ದೃಶ್ಯ. ಸಿನಿಮಾ ಪ್ರೇಕ್ಷಕರನ್ನು ನಕ್ಕು ನಗಿಸಲು ಸಿನಿಮಾದಲ್ಲಿ ಈ ಒಂದು ದೃಶ್ಯವನ್ನು ಸೇರಿಸಲಾಗಿದೆಯಷ್ಟೇ. ಆದರೆ ಬೆಂಗಳೂರಿನಂಥ ಮಹಾನಗರದ ವಾಹನ ಸವಾರರಿಗೆ ಇದು ನಗಿಸುವ ದೃಶ್ಯವಲ್ಲ, ಬದಲಿಗೆ ಗೋಳಿನ ಕಥೆಯಾಗಿದೆ!
ಹೌದು. ಈ ಸಿನಿಮಾದಲ್ಲಿ ರಸ್ತೆಯ ಮೇಲೆ ನೀರು ಹಾಕಿ ಕೆಸರು ಮಾಡಿದರೆ, ರಿಯಲ್ ಲೈಫ್‌ನಲ್ಲಿ ರಸ್ತೆಯ ಮೇಲೆ ಅದೂ ಹೆದ್ದಾರಿಗಳ ಮೇಲೆ ಹೊಸ ಹೊಸ ಮೊಳೆಗಳನ್ನಿಟ್ಟು ಟಯರ್ ಪಂಕ್ಚರ್ ಮಾಡುವ ದೊಡ್ಡ ಮಾಫಿಯಾ ನಡೆಯುತ್ತಿದೆ! ಹಲವಾರು ವರ್ಷಗಳಿಂದ ಕೆಲವು ಪ್ರದೇಶಗಳಲ್ಲಿ ಈ ಮಾಫಿಯಾ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ. ಟಯರ್‍ಗಳಿಗೆ ಮೊಳೆ ಹೊಕ್ಕು ಟಯರ್ ಪಂಕ್ಚರ್ ಮಾಡುವುದೇ ಇವರ ಕಾಯಕ. ಕಚೇರಿಗೆ ಹೋಗುವ ಸಮಯದಲ್ಲಿ ಇಲ್ಲವೇ, ತುರ್ತು ಕೆಲಸದ ನಿಮಿತ್ತ ಹೋಗುವ ಸಂದರ್ಭಗಳಲ್ಲಿ ಹೀಗೆ ಟಯರ್ ಪಂಕ್ಚರ್ ಆದರೆ ಅಂಥ ಸವಾರರ ಗೋಳು ಕೇಳುವುದೇ ಬೇಡ. ಅಂಥ ಪರಿಸ್ಥಿತಿ ಈಗ ಕೆಲವು ಪ್ರದೇಶಗಳಲ್ಲಿ ಕಂಡುಬರುತ್ತಿದೆ. ಇದರ ಬಗ್ಗೆ ಇದಾಗಲೇ ದೂರುಗಳನ್ನು ಕೆಲವರು ಕೊಟ್ಟಿದ್ದರೂ, ಅದು ಬಗೆಹರಿಯದ ಸಮಸ್ಯೆಯಾಗಿಯೇ ಉಳಿದಿದೆ.
ಕ್ರಿಸ್‌ಮಸ್ ಡ್ರಿಂಕ್ಸ್ ಮತ್ತಿನಲ್ಲಿ ಫ್ರೆಂಡ್‌ಗೆ ಮುತ್ತು ಕೊಟ್ಟ ನಿವೇದಿತಾ: ಫೋಟೋ ನೋಡಿ ಟ್ರೋಲಿಗರು ಕೇಳ್ಬೇಕಾ?
ಟಯರ್ ಪಂಕ್ಚರ್ ಆದರೆ ಅದನ್ನು ರಿಪೇರಿ ಮಾಡಿಸಲು ಎಲ್ಲಿ ಹೋಗುವುದಪ್ಪಾ ಎಂದು ತಲೆಬಿಸಿ ಮಾಡಿಕೊಳ್ಳುವ ಅಗತ್ಯವೇ ಬರುವುದಿಲ್ಲ. ಆ ಸಮಯದಲ್ಲಿ ನೀವು ಹೇಳಿದ್ದಷ್ಟು ದುಡ್ಡು ಕೊಟ್ಟು ರಿಪೇರಿ ಮಾಡಿಸಿಕೊಳ್ಳಲು ಸಿದ್ಧವಿರುತ್ತೀರಿ ಅಲ್ಲವೆ? ಅಂಥವರಿಗಾಗಿಯೇ ಟಯರ್ ಪಂಕ್ಚರ್ ಆಗಿರುವ ಸಮೀಪದಲ್ಲಿಯೇ ಟಯರ್ ಪಂಕ್ಚರ್ ರಿಪೇರಿ ಅಂಗಡಿ ಕಂಡು ಬರುತ್ತದೆ. ಆದ್ದರಿಂದ ನೀವು ಹೆಚ್ಚು ಆಯಾಸ ಪಡಬೇಕಾಗಿ ಬರುವುದಿಲ್ಲ. ಅಲ್ಲಿರುವ ಹುಡುಗರೇ ಬಂದು ಗಾಡಿಯನ್ನು ತೆಗೆದುಕೊಂಡು ಹೋಗಿ ರಿಪೇರಿ ಮಾಡಿಕೊಡುತ್ತಾರೆ. ಆದರೆ ಟಯರ್ ಸ್ವಲ್ಪ ದೂರ ಹೋಗಿ ಪಂಕ್ಚರ್ ಆದರೆ ಮಾತ್ರ ನಿಮ್ಮನ್ನು ಕಾಪಾಡಲು ಯಾರೂ ಬರುವುದಿಲ್ಲ. ಪುನಃ ಅವರಿವರನ್ನು ಕೇಳಿ, ಗಾಡಿಯನ್ನು ಅಲ್ಲೇ ಬಿಟ್ಟು ಬರಬೇಕು. ಆಗಲೂ ಚಿಂತೆ ಬೇಡ. ಇದೇ ರಿಪೇರಿ ಅಂಗಡಿಯವರು ನಿಮ್ಮ ಸೇವೆಗೆ ಸಿದ್ಧರಾಗಿ ನಿಂತಿರುತ್ತಾರೆ!
ಇದೀಗ ಅದರ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರು ಮಾತ್ರವಲ್ಲದೇ ಕೆಲವು ನಗರಗಳ ಕೆಲವು ಪ್ರದೇಶಗಳಲ್ಲಿ ಇದೊಂದು ರೀತಿಯ ದಂಧೆಯಾಗಿ ಮಾರ್ಪಟ್ಟಿದೆ. ರಘು ಜೆಕೆಎಸ್ ಎನ್ನುವವರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಬಾಲಕನ ಜೊತೆ ಅವರ ಅಪ್ಪ ಗಾಡಿ ತಳ್ಳಿಕೊಂಡು ಹೋಗುವುದನ್ನು ನೋಡಬಹುದು. ಬೆಂಗಳೂರಿನ ನೈಸ್ ಜಂಕ್ಷನ್ ಬಳಿ ಇದು ನಡೆದಿದೆ ಎನ್ನುವುದು ವಿಡಿಯೋದಲ್ಲಿ ನೋಡಬಹುದು. ಇದೇ ಪರಿಸ್ಥಿತಿ ಇಲ್ಲಿಂದ ಹೋಗುವ ಬಹುತೇಕ ಸವಾರರಿಗೆ ಆಗುತ್ತಲೇ ಇರುತ್ತದೆ. ಸಮೀಪವೇ ಪಂಕ್ಚರ್ ಶಾಪ್ ಇದ್ದು, ಅಲ್ಲಿ ರಿಪೇರಿ ಮಾಡಿಕೊಂಡು ಹೋಗುವ ಅನಿವಾರ್ಯತೆ ಇದೆ. ಈ ಬಗ್ಗೆ ಈ ವಿಡಿಯೋದಲ್ಲಿ ವಾಹನ ಸವಾರರಿಗೆ ಎಚ್ಚರಿಕೆ ನೀಡಲಾಗಿದೆ. ಆದರೂ ವಾಹನ ಸವಾರರು ಏನೂ ಮಾಡಲಾಗದ ಅನಿವಾರ್ಯತೆ. ರಸ್ತೆಯ ಮೇಲೆ ಮೊಳೆ ಇದೆಯೋ ಇಲ್ಲವೋ ನೋಡಿ ನೋಡಿ ಗಾಡಿ ಓಡಿಸಲಂತೂ ಸಾಧ್ಯವಿಲ್ಲ. ಆದರೂ ಕೆಲವೊಂದು ಪ್ರದೇಶಗಳಿಗೆ ಹೋಗುವಾಗ ಎಚ್ಚರಿಕೆ ವಹಿಸುವುದು ಒಳಿತು ಎನ್ನುವುದು ಈ ವಿಡಿಯೋದಿಂದ ತಿಳಿದುಬರುತ್ತದೆ.
ಮನೆಯೊಳಗೇ ನುಗ್ಗಿದ ಚಿರತೆ: ನಾಯಿ ಬೊಗಳಿದ್ರೂ ಏಳಲಿಲ್ಲ ಮನೆಯವರು! ಮುಂದೇನಾಯ್ತು? ಶಾಕಿಂಗ್ ವಿಡಿಯೋ ವೈರಲ್
