KSRTC bus sexual harassment case: ಬೆಂಗಳೂರಿನಿಂದ ತುಮಕೂರಿಗೆ ಪ್ರಯಾಣಿಸುತ್ತಿದ್ದ  ಬಸ್‌ನಲ್ಲಿ, ಜೀವನ್ ರಾಜ್ ಎಂಬ ಯುವಕ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆರೋಪಿ ಯುವತಿಯ ಬಟ್ಟೆಯ ಮೇಲೆ ವೀರ್ಯಪಾತ ಮಾಡಿದಾಗ, ಪ್ರಯಾಣಿಕರು ಆತನನ್ನು ಥಳಿಸಿದ್ದು, ನಂತರ ಪೊಲೀಸರು ಬಂಧಿಸಿದ್ದಾರೆ.

ತುಮಕೂರು (ಅ.13): ಬೆಂಗಳೂರಿನಿಂದ ತುಮಕೂರಿಗೆ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ (ಕೆಎ 06 ಎಫ್ 1235) 25 ವರ್ಷದ ಯುವಕ ಜೀವನ್ ರಾಜ್ ಎಂಬಾತನಿಂದ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳವಾದ ಘಟನೆ ನಡೆದಿದೆ.

ತುಮಕೂರು ನಗರ ನಿವಾಸಿಯಾದ ಜೀವನ್ ರಾಜ್, ಬಸ್‌ನಲ್ಲಿ ಸೀಟ್ ನಂಬರ್ 14ರಲ್ಲಿ ಕುಳಿತಿದ್ದ ಯುವತಿಯ ಪಕ್ಕದಲ್ಲಿ ನಿಂತು ಅನುಚಿತ ವರ್ತನೆ ತೋರಿದ್ದಾನೆ. ನೆಲಮಂಗಲದ ನವಯುಗ ಟೋಲ್ ಬಳಿ ಬಸ್ ಬರುತ್ತಿದ್ದಾಗ ಆರೋಪಿ ಯುವತಿಯ ಹೆಗಲ ಮೇಲೆ ಕೈಯಿಟ್ಟು, ಬಳಿಕ ಪ್ಯಾಂಟ್‌ನ ಜೀಪ್ ತೆಗೆದು ಹಸ್ತಮೈಥುನ ಮಾಡಿಕೊಂಡಿದ್ದಾನೆ. ಈ ವೇಳೆ ಯುವತಿಯ ಬಟ್ಟೆ ಮೇಲೆ ವೀರ್ಯ ಚೆಲ್ಲಿದೆ. ಇದರಿಂದ ಕೋಪಗೊಂಡ ಯುವತಿ ಜೀವನ್ ರಾಜ್ ವಿರುದ್ಧ ಗಲಾಟೆ ಆರಂಭಿಸಿದ್ದಾಳೆ. ಬಸ್‌ನಲ್ಲಿದ್ದ 60ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಕೆಲವರು ಆರೋಪಿಯನ್ನು ಥಳಿಸಿದ್ದಾರೆ. ಯುವತಿ ತಕ್ಷಣ ತನ್ನ ತಂದೆಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ. ತಂದೆ 112ಕ್ಕೆ ಕರೆ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿ ಬಂಧನ:

ಈ ವೇಳೆಗೆ ಬಸ್ ತುಮಕೂರು ಸಮೀಪದ ಕ್ಯಾತಸಂದ್ರ ಟೋಲ್‌ಗೆ ಬಂದಿತ್ತು. ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಜೀವನ್ ರಾಜ್‌ನನ್ನು ವಶಕ್ಕೆ ಪಡೆದಿದ್ದಾರೆ. ಸಂತ್ರಸ್ತ ಯುವತಿ ತುಮಕೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ವಿರುದ್ಧ ಬಿಎನ್‌ಎಸ್ ಕಲಂ 64 ಮತ್ತು 79 ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಈ ಘಟನೆಯಿಂದ ಬಸ್‌ನಲ್ಲಿದ್ದ ಇತರ ಪ್ರಯಾಣಿಕರಲ್ಲಿ ಆತಂಕ ಮೂಡಿದ್ದು, ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಮತ್ತೆ ಚರ್ಚೆಗೆ ಗ್ರಾಸವಾಗಿದೆ.