ಲಂಚಬಾಕ ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರ ದಾಳಿ ಮುಂದುವರೆದಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಬೆಸ್ಕಾಂ ಎಂಜಿನಿಯರ್‌ ಸೇರಿ ಇಬ್ಬರು ಬುಧವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು (ನ.10): ಲಂಚಬಾಕ ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರ ದಾಳಿ ಮುಂದುವರೆದಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಬೆಸ್ಕಾಂ ಎಂಜಿನಿಯರ್‌ ಸೇರಿ ಇಬ್ಬರು ಬುಧವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ವಿ.ನರೇಶ್‌ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಸುಮಂತ್‌ ಬಂಧಿತರಾಗಿದ್ದು, ಕಚೇರಿಯಲ್ಲೇ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ಸೆರೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿದ್ಯುತ್‌ ಸಂಪರ್ಕಕ್ಕೆ ಲಂಚ: ಕಗ್ಗದಾಸಪುರದಲ್ಲಿ ಹೆಚ್ಚಿನ ಪ್ರಸರಣ (ಹೈಟೆನ್ಷನ್‌) ಬದಲಿಗೆ ಕಡಿಮೆ ತೀವ್ರತೆಯ (ಲೊ ಟೆನ್ಷನ್‌) ವಿದ್ಯುತ್‌ ಸಂಪರ್ಕ ಬದಲಾವಣೆಗೆ ಕೋರಿ ಎಚ್‌ಎಎಲ್‌ನ ಬೆಸ್ಕಾಂ ಕಚೇರಿಗೆ ಕುಂದನಹಳ್ಳಿಯ ನಿವಾಸಿ, ವಿದ್ಯುತ್‌ ಗುತ್ತಿಗೆದಾರ ರವೀಂದ್ರ ಜೀತ್‌ ಸಿಂಗ್‌ ಅರ್ಜಿ ಸಲ್ಲಿಸಿದ್ದರು. ಆಗ ಎಇಇ ಎಂಜಿನಿಯರ್‌ ನರೇಶ್‌, ವಿದ್ಯುತ್‌ ಸಂಪರ್ಕಕ್ಕೆ ಅನುಮತಿ ನೀಡಲು 2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ರವೀಂದ್ರ ದೂರು ಸಲ್ಲಿಸಿದ್ದರು. ಅಂತೆಯೇ ಡಿವೈಎಸ್ಪಿ ಪ್ರಮೋದ್‌ ಹಾಗೂ ಇನ್‌ಸ್ಪೆಕ್ಟರ್‌ ಕುಮಾರಸ್ವಾಮಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬೆಸ್ಕಾಂ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಆರೋಪಿಯನ್ನು ಬಂಧಿಸಿದೆ.

1.5 ಲಕ್ಷಕ್ಕೆ ನಕಲಿ ಪಾಸ್‌ಪೋರ್ಟ್‌ ದಂಧೆ ಬಯಲು: 9 ಮಂದಿ ಬಂಧನ

ನಿವೃತ್ತರನ್ನೂ ಬಿಡದೆ ಸುಲಿಗೆ: ನಿವೃತ್ತಿ ವೇತನ ಬಿಡುಗಡೆಗೆ .50 ಸಾವಿರ ಲಂಚ ಪಡೆಯುವಾಗ ಆರೋಗ್ಯ ಇಲಾಖೆಯ ನಿರ್ದೇಶಕರ ಕಚೇರಿಯ ಎಫ್‌ಡಿಸಿ ಸುಮಂತ್‌ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ವರ್ಷದ ಹಿಂದೆ ಸೇವೆಯಿಂದ ನಿವೃತ್ತರಾಗಿದ್ದ ವಿಜಯಪುರ ಜಿಲ್ಲೆಯ ಸಂಗಣ್ಣ ಬಸಪ್ಪ ಕೊರಬು ಅವರು, ನಿವೃತ್ತಿ ವೇತನ ಸಿಗದ ಕಾರಣಕ್ಕೆ ನಗರದ ಆರೋಗ್ಯ ಭವನದಲ್ಲಿರುವ ಆರೋಗ್ಯ ಇಲಾಖೆಯ ನಿರ್ದೇಶಕರ ಕೇಂದ್ರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆಗ ಎಫ್‌ಡಿಸಿ ಸುಮಂತ್‌, ನಿವೃತ್ತಿ ವೇತನ ಬಿಡುಗಡೆಗೆ 1 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದ. ಆದರೆ ಲಂಚ ಕೊಡಲು ಹಣ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ ಬಸಪ್ಪ ಅವರು, ಕೊನೆಗೆ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಅದರಂತೆ ಡಿವೈಎಸ್ಪಿ ಎಂ.ಎಚ್‌.ಸತೀಶ್‌ ಹಾಗೂ ಇನ್‌ಸ್ಪೆಕ್ಟರ್‌ ಕೆ.ಜಿ.ಸತೀಶ್‌ ನೇತೃತ್ವದ ತಂಡವು, ನಿವೃತ್ತ ವೇತನ ಬಿಡುಗಡೆಗೆ 1 ಲಕ್ಷಕ್ಕೆ ಮುಂಗಡವಾಗಿ 50 ಸಾವಿರ ಲಂಚ ಸ್ವೀಕರಿಸುವಾಗ ಎಫ್‌ಡಿಸಿಯನ್ನು ಸೆರೆ ಹಿಡಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎನ್‌.ಆರ್‌.ಪುರ ಸಿಪಿಐ ಲೋಕಾಯುಕ್ತ ಬಲೆಗೆ: ಹತ್ತು ಸಾವಿರ ರು. ಲಂಚ ತೆಗೆದುಕೊಳ್ಳುವ ಸಂದರ್ಭದಲ್ಲಿ ಎನ್‌.ಆರ್‌.ಪುರ ಸಿಪಿಐ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮಂಗಳವಾರ ನಡೆದಿದೆ. ಎನ್‌.ಆರ್‌.ಪುರ ಸಿಪಿಐ ವಸಂತ್‌ ಶಂಕರ್‌ ಭಾಗವತ್‌ ಲೋಕಾಯುಕ್ತ ಬಲೆಗೆ ಬಿದ್ದಿರುವವರು. ಎನ್‌.ಆರ್‌.ಪುರ ಪಟ್ಟಣದ ಬಸ್ತಿಮಠ ರಸ್ತೆಯ ಮಸ್ತಾನ್‌ ವಲಿ ಅವರಿಗೆ ಸೇರಿದ ಲಾರಿಯಲ್ಲಿ ಓವರ್‌ ಲೋಡ್‌ ಸಿಮೆಂಟ್‌ ತುಂಬಿಸಿಕೊಂಡು ಹೋಗುವಾಗ ಇತ್ತೀಚೆಗೆ ಲಾರಿಯನ್ನು ವಶಕ್ಕೆ ಪಡೆದುಕೊಂಡು ಬಿಡಲಾಗಿತ್ತು. ಲಾರಿ ಬಿಡುವ ಸಂದರ್ಭದಲ್ಲಿ ಸಿಪಿಐ .10 ಸಾವಿರ ಲಂಚ ಕೇಳಿದ್ದರು ಎನ್ನಲಾಗಿದೆ. 

Bengaluru: ಬಿಬಿಎಂಪಿಗೆ 130 ಕೋಟಿ ತೆರಿಗೆ ಮೋಸ!

ಈ ಸಂಬಂಧ ಮಸ್ತಾನ್‌ ವಲಿ ಅವರು ಲೋಕಾಯುಕ್ತ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಲೋಕಾಯುಕ್ತ ಡಿವೈಎಸ್‌ಪಿ ತಿರುಮಲೇಶ್‌, ಸಬ್‌ ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನ್‌, ಸಚಿನ್‌ಕುಮಾರ್‌ ನೇತೃತ್ವದಲ್ಲಿ ಮಂಗಳವಾರ ದಾಳಿ ನಡೆಸಲಾಯಿತು. ವಸಂತ್‌ ಶಂಕರ್‌ ಭಾಗವತ್‌ 10 ಸಾವಿರ ತೆಗೆದುಕೊಳ್ಳುವ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಸಂಬಂಧ ಸಿಪಿಐ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.