ಬೆಂಗಳೂರು ಅಂಗಡಿ ಮಾಲೀಕರೇ ಹುಷಾರು: ನೀರಿನ ಬಾಟಲಿಗೆ 2 ರೂ. ಹೆಚ್ಚು ಕೇಳಿದ್ದಕ್ಕೆ ಬೇಕರಿಯೇ ಧ್ವಂಸ!
ಕುಡಿಯುವ ನೀರಿನ ಬಾಟಲಿಗೆ ನಿಗದಿತ ಬೆಲೆಗಿಂತ 2 ರೂ. ಹೆಚ್ಚಾಗಿ ಕೇಳಿದ್ದಕ್ಕೆ ಇಡೀ ಬೇಕರಿಯನ್ನೇ ಧ್ವಂಸಗೊಳಿಸಿದ ಘಟನೆ ಬೆಂಗಳೂರಿನ ಲಿಂಗರಾಜಪುರದಲ್ಲಿ ನಡೆದಿದೆ.
ಬೆಂಗಳೂರು (ಏ.25): ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಅಂಗಡಿ ಮತ್ತು ಬೇಕರಿ ಮಾಲೀಕರು ಬಹುತೇಕ ವಸ್ತುಗಳ ನಿಗದಿತ (ಎಂಆರ್‌ಪಿ) ಬೆಲೆಗಳಿಗಿಂತ 2 ರೂ. ಗಳಿಂದ 5 ರೂ. ಹೆಚ್ಚು ಹಣವನ್ನು ಪಡೆಯುವುದು ಮಾಮೂಲಿ ಆಗಿದೆ. ಹೀಗೆ, ಬೆಂಗಳೂರಿನ ಲಿಂಗರಾಜಪುರದ ಬೇಕರಿಯಲ್ಲಿ ನೀರಿನ ಬಾಟಲಿಗೆ 2 ರೂ. ಹೆಚ್ಚಿಗೆ ಕೇಳಿದ್ದಕ್ಕೆ ಇಡೀ ಬೇಕರಿಯನ್ನೇ ಧ್ವಂಸಗೊಳಿಸಿದ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಹಾಲು, ನೀರು, ಕೂಲ್‌ಡ್ರಿಂಕ್ಸ್ ಸೋಪು ಇತ್ಯಾದಿನ ದಿನಬಳಕೆ ವಸ್ತುಗಳ ಮೇಲೆ ನಮೂದಿಸಿರುವ ಗರಿಷ್ಠ ಚಿಲ್ಲರೆ ಬೆಲೆಗಿಂತ (Maximum retail price- MRP) ಹೆಚ್ಚಿನ ಚಿಲ್ಲರೆ ಹಣವನ್ನು ಕೇಳುವುದು ಮಾಮೂಲಿಯಾಗಿದೆ. ಆದರೆ, ಇದು ಗ್ರಾಹಕರಿಗೆ ಮಾಡುತ್ತಿರುವ ಅನ್ಯಾಯ ಎಂದೂ ಹೇಳಬಹುದು. ಈ ಬಗ್ಗೆ ಜನರು ಒಂದೆರಡು ರೂಪಾಯಿಗೆ ಜಗಳ ಮಾಡುವುದೇಕೆ ಎಂದು ಮನಸ್ಸಿನಲ್ಲಿಯೇ ಗೊಣಗಿಕೊಂಡು ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ಹೀಗೆ ಎಲ್ಲ ವ್ಯಾಪಾರಿಗಳು ಗರಿಷ್ಠ ಲಾಭದಾಸೆಗೆ ಮುಂದಾಗಿದ್ದು, ಅಂತಹದೇ ಮಹಿಳೆಗೆ ಇಲ್ಲೊಬ್ಬ ಪುಡಿರೌಡಿ ತಕ್ಕ ಶಾಸ್ತಿಯನ್ನೇ ಮಾಡಿದ್ದಾನೆ.
ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಮತ್ತೊಂದು ಭೀಕರ ಅಪಘಾತ: ಟಿಪ್ಪರ್ ಹರಿದು ಬೈಕ್ ಸವಾರ ಸಾವು
ಬೆಂಗಳೂರಿನ ಲಿಂಗರಾಜಪುರದಲ್ಲಿ ಬೇಕರಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಮಹಿಳೆ 10 ರೂ. ನೀರಿನ ಬಾಟಲಿಗೆ 12 ರೂ. ಕೊಡುವಂತೆ ಕೇಳಿದ್ದಾಳೆ. ಆದರೆ, ನೀರು ಕುಡಿದ ವ್ಯಕ್ತಿ ಕೇವಲ 10 ರೂ. ಕೊಟ್ಟು ಇನ್ನು 2 ರೂ. ಹೆಚ್ಚಿಗೆ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಮಹಿಳೆ ಎರಡು ರೂಪಾಯಿ ಹೆಚ್ಚಿಗೆ ವಸೂಲಿ ಮಾಡುವ ಉದ್ದೇಶದಿಂದ ಆತನನ್ನು ತಡೆದು ನೀವು ಹೆಚ್ಚಿನ ಚಿಲ್ಲರೆ ಹಣವನ್ನು ಕೊಟ್ಟು ಹೋಗಲೇಬೇಕು ಎಂದು ಜೋರಾಗಿ ಮಾತನಾಡಿದ್ದಾರೆ. ಇದರಿಂದ ಕೋಪಗೊಂಡ ಗ್ರಾಹಕ ಬೇಕರಿಯಲ್ಲಿ ಮುಂದೆ ಜೋಡಿಸಲಾಗಿದ್ದ ವಿವಿಧ ಸಾಮಗ್ರಿಗಳ ಗಾಜಿನ ಬಾಟಲಿಯನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿ, ನಂತರ ಮಹಿಳೆ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಇದರಿಂದ ಆತಂಕಗೊಂಡ ಮಹಿಳೆ ಆ ಕ್ಷಣದಲ್ಲಿ ಸುಮ್ಮನಾಗಿದ್ದಾಳೆ.
ಸಂಪೂರ್ಣ ಘಟನೆ ವಿವರ ಇಲ್ಲಿದೆ ನೋಡಿ: ಕುಮಾರ್ ಎಂಬಾತ ಬೇಕರಿಯಲ್ಲಿನ ವಸ್ತುಗಳನ್ನು ಒಡೆದುಹಾಕಿ ದಾಂಧಲೆ ವ್ಯಕ್ತಿಯಾಗಿದ್ದಾನೆ. ಇನ್ನು ಬೇಕರಿಯನ್ನು ನಡೆಸುತ್ತಿದ್ದ ಮಹಿಳೆಯನ್ನು ಭಾರತಿ ಎಂದು ಗುರುತಿಸಲಾಗಿದೆ. ಗ್ಯಾಸ್ ಸಿಲಿಂಡರ್ ಸಪ್ಲೈಮಾಡುತ್ತಿದ್ದ ಕುಮಾರ್, ಬೇಕರಿ ಯಲ್ಲಿ 10 ರೂಪಾಯಿ ವಾಟರ್ ಬಾಟೆಲ್ ಖರೀದಿಸಿದ್ದನು. ಬೇಕರಿ ಮಾಲೀಕಳಾದ ಭಾರತಿ 12 ರೂಪಾಯಿ ಕೊಡುವಂತೆ ಕೇಳಿದ್ದಳು. ಬಾಟೆಲ್ ಮೇಲೆ 10 ರೂ. ಇದೆ ಎರಡು ರುಪಾಯಿ ಯಾಕೆ ಜಾಸ್ತಿ ಕೊಡಬೇಕು ಎಂದು ಜಗಳ ಮಾಡಿದ್ದಾನೆ. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆ ಶುರುವಾಗಿತ್ತು. ಕೋಪಗೊಂಡ ಕುಮಾರ್ ಬೇಕರಿಯಲ್ಲಿದ್ದ ವಸ್ತುಗಳನ್ನ ಬಿಸಾಡಿ ದಾಂಧಲೆ ಮಾಡಿದ್ದಾನೆ. ಘಟನೆ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎನ್ ಸಿಆರ್ ದಾಖಲು ಆಗಿದೆ. ಎರಡೂ ಕಡೆಯಿಂದ ದೂರು ದಾಖಲಿಸಿಕೊಂಡಿರುವ ಬಾಣಸವಾಡಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ಕರ್ನಾಟಕ ಸರ್ಕಾರದ ಮುಸ್ಲಿಂ ಮೀಸಲಾತಿ ರದ್ದತಿಗೆ ಸುಪ್ರೀಂ ಕೋರ್ಟ್ ತಡೆ
ಪುಡಿ ರೌಡಿಗಳ ಪುಂಡಾಟವೆಂದು ಪ್ರಚಾರ: ಇನ್ನು ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುವ ಮೊದಲು ಪುಡಿ ರೌಡಿಗಳ ಅಟ್ಟಹಾಸವೆಂದೇ ಕೇಳಿಬಂದಿತ್ತು. ಹೀಗಾಗಿ, ನಗರದಲ್ಲಿ ಮತ್ತೆ ಪುಂಡರ ಅಟ್ಟಹಾಸ ಶುರುವಾಗಿದೆ. ಬೇಕರಿ ಓನರ್ ಮೇಲೆ ಪುಡಿರೌಡಿಗಳಿಂದ ಹಲ್ಲೆ ಮಾಡಿ ದಾಂಧಲೆ ನಡೆಸಲಾಗಿದೆ. ನಿನ್ನೆ ಸಂಜೆ 5ಗಂಟೆ ವೇಳೆಗೆ ಬೇಕರಿಯೊಂದರಲ್ಲಿ ಕುಡಿಯುವ ನೀರಿನ ಬಾಟಲಿಗೆ 2 ರೂ. ಹೆಚ್ಚಿಗೆ ಕೇಳಿದ್ದಕ್ಕೆ ಬೇಕರಿಯಲ್ಲಿದ್ದ ಎಲ್ಲ ಸಾಮಗ್ರಿಗಳನ್ನು ಪಡೆದುಹಾಕಿ ಹಲ್ಲೆ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ, ಪೊಲೀಸ್ ಠಾಣೆಗೆ ದೂರು ದಾಖಲಾಗುತ್ತಿದ್ದಂತೆ ನಡೆದ ಘಟನೆಯ ಸತ್ಯಾಂಶ ಹೊರಬಿದ್ದಿದೆ.