ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಮತ್ತೊಂದು ಭೀಕರ ಅಪಘಾತ: ಟಿಪ್ಪರ್ ಹರಿದು ಬೈಕ್ ಸವಾರ ಸಾವು
ಬೆಂಗಳೂರು ನಗರದ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಬೈಕ್ ಸವಾರರ ಮೇಲೆ ಟಿಪ್ಪರ್ ಲಾರಿ ಹರಿದು ಒಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಬೆಂಗಳೂರು (ಏ.25): ರಾಜ್ಯ ರಾಜಧಾನಿ ಬೆಂಗಳೂರು ನಗರದ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಬೈಕ್ ಸವಾರರ ಮೇಲೆ ಟಿಪ್ಪರ್ ಲಾರಿ ಹರಿದು ಒಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಕಳೆದೊಂದು ತಿಂಗಳ ಹಿಂದೆ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ (Bengaluru Mysuru Express way) ನಾಯಂಡಹಳ್ಳಿ ಜಂಕ್ಷನ್‌ನಲ್ಲಿಯೇ ಸಿಮೆಂಟ್ ಲೋಡ್ ಸಾಗಿಸುತ್ತಿದ್ದ ಲಾರಿಯೊಂದು ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆಯ ಮೇಲೆ ಹರಿದು ಸಾವನ್ನಪ್ಪಿದ್ದರು. ಆದರೆ, ಇಂದು ಬೆಳಗ್ಗೆಯೂ ಕೂಡ ಟಿಪ್ಪರ್ ಲಾರಿಯೊಂದು ನಿಧಾನವಾಗಿ ಟಿವಿಎಸ್ ಎಕ್ಸ್‌ಎಲ್ ಬೈಕ್‌ನಲ್ಲಿ ಹೋಗುವ ಇಬ್ಬರು ವ್ಯಕ್ತಿಗಳಿಗೆ ಗುದ್ದಿದೆ. ಇನ್ನು ಕೆಳಗೆ ಬಿದ್ದ ಒಬ್ಬ ವ್ಯಕ್ತಿಯ ಮೇಲೆ ಲಾರಿಯ ಚಕ್ರವು ಹತ್ತಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ವ್ಯಕ್ತಿಯ ಮೇಲೆ ಕಾಲಿನ ಮೇಲೆ ಲಾರಿ ಹರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ.
ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಭೀಕರ ಅಪಘಾತ: ಮಹಿಳೆ ತಲೆಮೇಲೆ ಹರಿದ ಲಾರಿ
ಅಪಘಾತದ ಬೆನ್ನಲ್ಲೇ ಚಾಲಕ ಪರಾರಿ: ಇಂದು ಬೆಳಗ್ಗೆ ನಿತ್ಯ ಕಾರ್ಯನಿಮಿತ್ತ ಎಕ್ಸ್ ಎಲ್ ಬೈಕ್ ನಲ್ಲಿ ಇಬ್ಬರು ಯುವಕರು ಹೋಗುತ್ತಿದ್ದರು. ಆದರೆ, ಈ ವೇಳೆ ಹಿಂಬದಿಯಿಂದ ಅತಿವೇಗದಿಂದ ಬಂದಿದ್ದ ಟಿಪ್ಪರ್ ಲಾರಿ ಚಾಲಕ ನಿಯಂತ್ರಣ ಸಿಗದೆ ಎಕ್ಸ್ ಎಲ್ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಲಾರಿ ಕೆಳಗೆ ಸಿಲುಕಿದ್ದ ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ. ಅಪಘಾತ ಬೆನ್ನಲ್ಲೇ ಲಾರಿಯನ್ನು ಅಲ್ಲಿಯೇ ಬಿಟ್ಟು ಚಾಲಕ ಪರಾರಿ ಆಗಿದ್ದಾನೆ. ಈ ಘಟನೆ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ರಸ್ತೆಯಲ್ಲೇ ಅಪ್ಪಚ್ಚಿಯಾದ ದೇಹ: ಇನ್ನು ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿ ಲಾರಿ ಡಿಕ್ಕಿ ಹೊಡೆದು ಕೆಳಗೆ ಬಿದ್ದಾಕ್ಷಣ ಆತನ ಮೇಲೆ ಬೃಹತ್ ಗಾತ್ರದ ಟಿಪ್ಪರ್ ಲಾರಿ ಹರಿದ ಪರಿಣಾಮವಾಗಿ ಚಕ್ರದಡಿಗೆ ಸಿಲುಕಿದ ಯವಕನ ದೇಹ ಸಂಪೂರ್ಣವಾಗಿ ರಸ್ತೆಯಲ್ಲಿ ಅಪ್ಪಚ್ಚಿಯಾಗಿದೆ. ದೇಹದ ಬಹುತೇಕ ಭಾಗಗಳು ರಸ್ತೆಯಲ್ಲಿಯೇ ಬಿದ್ದಿದ್ದವು. ಇನ್ನು ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ಕರೆಸಿದ ಪೊಲೀಸರು, ಮೃತದೇಹವನ್ನು ಸ್ಥಳೀಯರ ನೆರವಿನೊಂದಿಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಟಿಪ್ಪರ್ ಲಾರಿಯ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ. ಆದರೆ, ಮೃತ ಹಾಗೂ ಗಾಯಾಳುವಿನ ವಿವರ ಇನ್ನೂ ಪತ್ತೆಯಾಗಿಲ್ಲ.
20 ದಿನಗಳ ಹಿಂದೆ ಇದೇ ಜಾಗದಲ್ಲಿ ಮಹಿಳೆ ಬಲಿ: ಇದೇ ತಿಂಗಳ ಆರಂಭದಲ್ಲಿ (ಏ.2ರಂದು) ನಾಯಡಹಳ್ಳಿ ಜಂಕ್ಷನ್‌ನಲ್ಲಿಯೇ ಭೀಕರ ಅಪಘಾತವೊಂದು ಸಂಭವಿಸಿತ್ತು. ಬೆಂಗಳೂರು- ಮೈಸೂರು ರಸ್ತೆಯ ಈ ನಾಯಂಡಹಳ್ಳಿ ಜಂಕ್ಷನ್ ಬಳಿ ಸಿಮೆಂಟ್ ಸಾಗಣೆ ಲಾರಿಯು ಬೈಕ್ ಸವಾರರ ಮೇಲೆ ಹರಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಮಗು ಮತ್ತು ಮತ್ತೊಬ್ಬ ಮಹಿಳೆಗೆ ಗಂಭೀರ ಗಾಯವಾಗಿತ್ತು. ಬೈಕ್‌ನಲ್ಲಿ ಅಜ್ಜಿ, ಮಗಳು ಹಾಗೂ ಮೊಮ್ಮಗು ಹೋಗುವಾಗ ಹಿಂದಿನಿಂದ ಬಂದ ಸಿಮೆಂಟ್ ಲಾರಿ ಗುದ್ದಿದೆ. ಬೈಕ್ ಚಲಾಯಿಸುತ್ತಿದ್ದ ಅನುಷಾ (34) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಇನ್ನು ಅಜ್ಜಿ ಮಂಜಮ್ಮ ಹಾಗೂ ಮಗುವಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬೆಂಗಳೂರು ನೈಸ್ ರಸ್ತೆಯಲ್ಲಿ ಬೈಕ್ ಟೈರ್ ಬಸ್ಟ್: ತಡೆಗೋಡೆಗೆ ಗುದ್ದಿ ಇಂಜಿನಿಯರ್ ಸಾವು
ಚಾಲನೆಯಲ್ಲಿದ್ದ ಲಾರಿ ಬಿಟ್ಟು ಓಡಿ ಹೋಗಿದ್ದ ಚಾಲಕ: ಸಿಮೆಂಟ್ ತುಂಬಿದ್ದ ಲಾರಿ ಚಾಲಕ ಮಹಿಳೆ ಮೇಲೆ ಲಾರಿಯನ್ನು ಹರಿಸುತ್ತಿದ್ದಂತೆಯೇ ಚಾಲನೆಯಲ್ಲಿದ್ದ ಲಾರಿಯನ್ನು ಬಿಟ್ಟು ಪರಾರಿ ಆಗಿದ್ದಾನೆ. ಇನ್ನು ಲಾರಿಯು ಬಂದು ಮುಂದೆ ನಿಂತಿದ್ದ ಕೆಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದು ನಿಂತಿತ್ತು. ಇನ್ನು ಅಪಘಾತ ನಡೆದ ಸ್ಥಳದಲ್ಲಿ ಲಾರಿಯಲ್ಲಿದ್ದ ಸಿಮೆಂಟ್ ಮೂಟೆಗಳು ಕೂಡ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇನ್ನು ಇಡೀ ರಸ್ತೆಯಲ್ಲಿ ಸುಮಾರು 1 ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಅಪಘಾತದ ದೃಶ್ಯವನ್ನು ನೋಡಲು ಸ್ಥಳದಲ್ಲಿ ನೂರಾರು ಜನರು ಸ್ಥಳದಲ್ಲಿ ಜಮಾವಣೆ ಆಗಿದ್ದು, ಇದರಿಂದ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿತ್ತು. ಇನ್ನು ಟ್ರಾಫಿಕ್ ನಿಯಂತ್ರಣಕ್ಕೆ ತರಲು ಪೊಲೀಸರು ಜನರ ಮೇಲೆ ಲಘು ಲಾಠಿ ಪ್ರಹಾರ ಮಾಡಿದ್ದರು.