ಬೆಂಗಳೂರಿನ ಅಂದ್ರಹಳ್ಳಿಯಲ್ಲಿ ಆಸ್ತಿಗಾಗಿ ಪತ್ನಿಯೇ ತನ್ನ ಸೋದರ ಮಾವನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ್ದಾಳೆ. ಮನೆಯನ್ನು ತನ್ನ ಹೆಸರಿಗೆ ಬರೆಯಲು ಒಪ್ಪದ ಕಾರಣ, ಪತಿ ವೆಂಕಟೇಶ್ ಅವರನ್ನು ಮೇಲಿಂದ ತಳ್ಳಿ ಹತ್ಯೆ ಮಾಡಲಾಗಿದೆ.
ಬೆಂಗಳೂರು: ಆಸ್ತಿಗಾಗಿ ಪತಿಯನ್ನೇ ತನ್ನ ಸೋದರ ಮಾವನ ಜೊತೆಗೆ ಸೇರಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಅಂದ್ರಹಳ್ಳಿ, ಮಂಜುನಾಥ ಬಡಾವಣೆಯಲ್ಲಿ ನಡೆದಿದೆ. ಮೃತನನ್ನು ವೆಂಕಟೇಶ್ (65) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಪಾರ್ವತಿ ಮತ್ತು ರಂಗಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೊದಲ ಪತ್ನಿಯನ್ನು ಬಿಟ್ಟು, ಪಾರ್ವತಿಯನ್ನು ಮದುವೆಯಾದ ವೆಂಕಟೇಶ್!
ಮಾಹಿತಿಯ ಪ್ರಕಾರ, ವೆಂಕಟೇಶ್ ಸುಮಾರು 10 ವರ್ಷಗಳ ಹಿಂದೆ ತನ್ನ ಮೊದಲ ಪತ್ನಿಯನ್ನು ಬಿಟ್ಟಿದ್ದ. ನಂತರ 6 ವರ್ಷಗಳ ಹಿಂದೆ ಪಾರ್ವತಿ ಎಂಬಾಕೆಯನ್ನು ಮದುವೆಯಾಗಿದ್ದ. ಇವರಿಬ್ಬರೂ ಅಂದ್ರಹಳ್ಳಿಯ ಮಂಜುನಾಥ ಬಡಾವಣೆಯಲ್ಲಿ ವಾಸಿಸುತ್ತಿದ್ದರು.
ಮನೆಗಾಗಿ ಆರಂಭವಾದ ಕಲಹ
ಕಳೆದ ಕೆಲ ತಿಂಗಳುಗಳಿಂದ ವೆಂಕಟೇಶ್–ಪಾರ್ವತಿ ದಂಪತಿಯ ನಡುವೆ ನಿರಂತರ ಗಲಾಟೆ ನಡೆಯುತ್ತಿತ್ತು. ಪತ್ನಿ ಪಾರ್ವತಿ, ತನ್ನ ಗಂಡನ ಹೆಸರಿನ ಮನೆಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ನಿರಂತರ ಜಗಳ ಮಾಡುತ್ತಿದ್ದಳು. ಮನೆಯನ್ನು ತನ್ನ ಹೆಸರಿಗೆ ಬರೆಯದಿದ್ದರೆ ಕನಿಷ್ಠ ₹6 ಲಕ್ಷ ರೂ ನಗದು ನೀಡಬೇಕು ಎಂದು ಪತಿ ಮೇಲೆ ಒತ್ತಡ ಹಾಕುತ್ತಿದ್ದಳಂತೆ. ಹೀಗಾಗಿ ಇಬ್ಬರ ಮಧ್ಯೆ ನಿರಂತರ ಜಗಳ ನಡೆಯುತ್ತಿತ್ತು. ಆದರೆ ವೆಂಕಟೇಶ್ ಇದಕ್ಕೆ ಒಪ್ಪಲಿಲ್ಲ. ಬದಲಿಗೆ, ₹2.5 ಲಕ್ಷ ಮಾತ್ರ ನೀಡುತ್ತೇನೆ ಎಂದು ಹೇಳಿದ್ದರಿಂದ ಕಲಹ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿತು.
ಕೊಲೆಗೂ ಮುನ್ನ ನಡೆದ ಜಗಳ
ಘಟನೆಯ ಹಿಂದಿನ ದಿನ ಕೂಡ ಪತಿ–ಪತ್ನಿಯ ನಡುವೆ ಇದೇ ವಿಷಯಕ್ಕಾಗಿ ಜಗಳ ನಡೆದಿತ್ತು. ರಾತ್ರಿ 9 ಗಂಟೆ ವೇಳೆಗೆ, ವೆಂಕಟೇಶ್ ಕೋಪಗೊಂಡು ಪತ್ನಿ ಪಾರ್ವತಿಯನ್ನು ಮನೆಯಿಂದ ಹೊರಹಾಕಿದ್ದ. ಆಕ್ರೋಶಗೊಂಡ ಪಾರ್ವತಿ ತಕ್ಷಣ ತನ್ನ ಸೋದರಮಾವ ರಂಗಸ್ವಾಮಿ (58) ಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದಳು. ರಂಗಸ್ವಾಮಿ ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದಾನೆ.
ಮೇಲಿಂದ ತಳ್ಳಿ ಕೊಂದ ಪಾಪಿಗಳು
ಪೊಲೀಸ್ ತನಿಖೆಯ ಪ್ರಕಾರ, ಪಾರ್ವತಿ ಮತ್ತು ರಂಗಸ್ವಾಮಿ ಇಬ್ಬರೂ ಸೇರಿ ವೆಂಕಟೇಶ್‌ನ್ನು ಮೇಲಿಂದ ಕೆಳಗೆ ತಳ್ಳಿದ್ದಾರೆ. ಬಿದ್ದ ರಭಸಕ್ಕೆ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರೂ, ಅದರಿಂದ ತೃಪ್ತಿಯಾಗದ ಆರೋಪಿಗಳು, ನೆಲದಲ್ಲಿ ರಕ್ತದ ಮಡುವಲ್ಲಿ ಬಿದ್ದಿದ್ದ ವೆಂಕಟೇಶ್ ಮೇಲೆ ಹಲ್ಲೆ ಮುಂದುವರಿಸಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪತ್ನಿ ಮತ್ತು ಸೋದರಮಾವ ಬಂಧನ
ಘಟನೆಯ ನಂತರ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬ್ಯಾಡರಹಳ್ಳಿ ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪಾರ್ವತಿ ಮತ್ತು ರಂಗಸ್ವಾಮಿಯನ್ನು ಬಂಧಿಸಿದ್ದಾರೆ. ಹತ್ಯೆ ಮತ್ತು ಸಂಚು ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಇಬ್ಬರನ್ನೂ ಪೊಲೀಸ್ ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
