ಬೆಂಗಳೂರಿನಲ್ಲಿ ಡೇಟಿಂಗ್ ಆ್ಯಪ್ ಮೂಲಕ ಯುವಕರನ್ನು ಪರಿಚಯಿಸಿಕೊಂಡು, ಮಂಪರು ಔಷಧ ನೀಡಿ ದೋಚುತ್ತಿದ್ದ ಜೋಡಿಯನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಸಾಲ ತೀರಿಸಲು ಕಳ್ಳತನಕ್ಕೆ ಇಳಿದಿದ್ದ ಕವಿಪ್ರಿಯಾ ಮತ್ತು ಆಕೆಯ ಬಾಯ್‌ಫ್ರೆಂಡ್ ಹರ್ಷವರ್ಧನ್, ಮೊದಲ ಪ್ರಯತ್ನದಲ್ಲೇ ಸಿಕ್ಕಿಬಿದ್ದಿದ್ದಾರೆ.

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು: ಅವರಿಬ್ಬರೂ ಐಟಿ ಕಂಪನಿಯ ಉದ್ಯೋಗಿಗಳು. ಒಳ್ಳೆ ಕೆಲಸ, ಕೈ ತುಂಬಾ ಸಂಬಳ ಇದ್ರು, ಅಡ್ಡದಾರಿಯಲ್ಲಿ ದುಡ್ಡು ಮಾಡುವ ಚಟ ಇಬ್ಬರಿಗೂ ಇತ್ತು. ವೀಕೆಂಡ್ ಪಾರ್ಟಿ ಮೋಜು ಮಸ್ತಿ ಅಂತ ಎಂಜಾಯ್ ಮಾಡ್ತಿದ್ದ ಆ ಜೋಡಿ ಹಣದ ದುರಾಸೆಗೆ ಬಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಪ್ರೀತಿಯ ನೆಪದಲ್ಲಿ ಯುವಕರನ್ನು ಬಲೆಗೆ ಬೀಳಿಸಿ ಕಳ್ಳತನ ಮಾಡುತ್ತಿದ್ದ ಜೋಡಿಯನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.

ಡೇಟಿಂಗ್ ಆ್ಯಪ್ ಮೂಲಕ ಯುವಕನಿಗೆ ವಂಚಿಸಿ, ಹಣ ಮತ್ತು ಚಿನ್ನ ದೋಚಿದ್ದ ಖತರ್ನಾಕ್ ಜೋಡಿ ಪೊಲೀಸರ ಬಲೆ ಬಿದ್ದಿದ್ದಾರೆ. ತಮಿಳುನಾಡು ಮೂಲದ ಕವಿಪ್ರಿಯಾ ಹಾಗೂ ಆಕೆಯ ಬಾಯ್‌ಫ್ರೆಂಡ್ ಹರ್ಷವರ್ಧನನನ್ನ ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಈ ಜೋಡಿ ಇಬ್ಬರು ಕೂಡ ತಮಿಳುನಾಡು ಮೂಲದವರಾಗಿದ್ದು, ನಗರದ ಸಾಪ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ರು. ಡೇಟಿಂಗ್ ಆ್ಯಪ್ ನಲ್ಲಿ ಪುಲ್ ಆ್ಯಕ್ಟಿವ್ ಆಗಿದ್ದ ಈ ಜೋಡಿ ನಗರದ ಯುವಕನಿಗೆ ಡೇಟಿಂಗ್ ಆ್ಯಪ್ ನಲ್ಲಿ ಬಲೆ ಬೀಸಿದ್ದರು.

ಯುವಕ ಕೂಡ ಸಾಪ್ಟ್ವೇರ್ ಇಂಜಿನಿಯರ್ ಆಗಿದ್ದು, ಕೈ ತುಂಬ ಸಂಬಳ ಪಡೆಯುತ್ತಿದ್ದ. ಯುವಕನ ಮಾಹಿತಿ ಸಂಗ್ರಹಿಸಿದ ಯುವತಿ ಆತನ ಜೊತೆ ಫ್ರೆಂಡ್ ಶಿಫ್ ಶುರುವಿಟ್ಟಿದ್ದಳು. ಇಬ್ಬರು ಕೂಡ ಒಂದು ತಿಂಗಳ ಪರಿಚಿತರಾಗಿದ್ದು, ನವೆಂಬರ್ ಒಂದರಂದು ಇಂದಿರಾನಗರದ ಲಾಡ್ಜ್ ವೊಂದರಲ್ಲಿ‌ ಭೇಟಿಯಾಗಿದ್ದರು. ಇಬ್ಬರು ಒಟ್ಟಿಗೆ ಪಾರ್ಟಿ ಮಾಡಿ ಊಟ ಮಾಡಿದ್ದಾರೆ. ನಂತರ ಸ್ವಲ್ಪ ಹೊತ್ತಿಗೆ ಯುವಕ ಪ್ರಜ್ನೆ ತಪ್ಪಿ ನಿದ್ದೆಗೆ ಜಾರಿದ್ದಾನೆ. ಈ ವೇಳೆ ಕವಿಪ್ರಿಯಾ ಮತ್ತು ಆತನ ಲವರ್ ಯುವಕನ ಮೇಲಿದ್ದ ಬ್ರಾಸ್ ಲೈಟ್, ಚೈನ್ ಹಾಗೂ ಹಣ ದೋಚಿ ಎಸ್ಕೇಪ್ ಆಗಿದ್ದಾರೆ.

ಡೇಟಿಂಗ್ ಆ್ಯಪ್‌ನಲ್ಲಿ ಕಳ್ಳತನಕ್ಕೆ ರೂಪಿಸಿದ ಪ್ಲಾನ್

ಆ್ಯಪ್‌ಗಳ ಮೂಲಕ ಸಾಲ ಮಾಡಿಕೊಂಡು ಲಕ್ಷಾಂತರ ರೂಪಾಯಿಗಳ ಹಣಕಾಸು ಸಂಕಷ್ಟಕ್ಕೆ ಸಿಲುಕಿದ್ದ ಕವಿಪ್ರಿಯಾ–ಹರ್ಷವರ್ಧನ್ ಜೋಡಿ, ಸಾಲ ತೀರಿಸಲು ಕಳ್ಳತನ ಮಾಡುವ ಪ್ಲಾನ್ ರೂಪಿಸಿದ್ದರು. ಈ ಬಗ್ಗೆ ಅವಕಾಶ ಹುಡುಕುತ್ತಿದ್ದ ಕವಿಪ್ರಿಯಾ ತನ್ನ ಫೋಟೊವನ್ನು ಡೇಟಿಂಗ್ ಆ್ಯಪ್ Happn ನಲ್ಲಿ ಹಾಕಿ ಯುವಕರನ್ನು ಟಾರ್ಗೆಟ್‌ ಮಾಡಿ ಬಲೆ ಬೀಸಿದ್ದಳು. ಫೋಟೊ ನೋಡಿದ ಓರ್ವ ಯುವಕ ಆಕೆಯನ್ನು ಸಂಪರ್ಕಿಸಿದ್ದು, ಇಬ್ಬರ ನಡುವಿನ ಸಂಭಾಷಣೆ ನಿಧಾನವಾಗಿ ಸ್ನೇಹಕ್ಕೆ ತಿರುಗಿತು.

ನವೆಂಬರ್ 1ರ ಭೇಟಿ – ರೆಸ್ಟೋರೆಂಟ್‌ನಿಂದ ಲಾಡ್ಜ್‌ಗೆ

ಇಬ್ಬರೂ ನವೆಂಬರ್ 1ರಂದು ಇಂದಿರಾನಗರದ ರೆಸ್ಟೋರೆಂಟ್‌ ಒಂದರಲ್ಲಿ ಭೇಟಿಯಾದರು. ಮಾತುಕತೆ ನಡುವೆ ಮದ್ಯಪಾನ ಮಾಡಿದ ನಂತರ ಕವಿಪ್ರಿಯಾ ಆ ಯುವಕನನ್ನು ಸಮೀಪದ ಲಾಡ್ಜ್‌ವೊಂದಕ್ಕೆ ಕರೆದೊಯ್ದಳು. ಮಧ್ಯರಾತ್ರಿ ಊಟವನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತರಿಸಿ, ಬಳಿಕ ಯುವಕನಿಗೆ ನೀರು ಕುಡಿಯಲು ಕೊಟ್ಟಳು. ಆ ನೀರಿನಲ್ಲಿ ಆಕೆ ಮಂಪರು ಔಷಧ ಬೆರೆಸಿದ್ದರಿಂದ ಕವಿಪ್ರಿಯಾ ಕೊಟ್ಟ ನೀರನ್ನು ಕುಡಿದ ಕೆಲವೇ ಕ್ಷಣಗಳಲ್ಲಿ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದನ್ನೇ ಬಂಡವಾಳ ಮಾಡಿಕೊಂಡ ಕವಿಪ್ರಿಯಾ, ಯುವಕನ ಬಳಿಯಿದ್ದ ಅಮೂಲ್ಯ ವಸ್ತುಗಳನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದಾಳೆ.

ದೋಚಲಾದ ವಸ್ತುಗಳು:

₹6.89 ಲಕ್ಷ ಮೌಲ್ಯದ ಚಿನ್ನಾಭರಣಗಳು

₹12,000 ಮೌಲ್ಯದ ಹೆಡ್‌ಸೆಟ್

₹10,000 ನಗದು

ಸುಮಾರು 6.89 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 12 ಸಾವಿರ ರೂಪಾಯಿ ಮೌಲ್ಯದ ಹೆಡ್‌ಸೆಟ್ ಮತ್ತು 10 ಸಾವಿರ ರೂಪಾಯಿ ನಗದನ್ನು ದೋಚಿದ್ದ ಈ ಜೋಡಿ ಬ್ರಾಸ್ ಲೈಟ್ ನಗರಲದಲ್ಲಿ ಆಡ ಇಟ್ಟು ತಮಿಳುನಾಡು ಸೇರಿದ್ದರು. ಇಂದಿರಾನಗರ ಪೊಲೀಸರು ಕೇಸ್ ದಾಖಲಿಸಿ ತಮಿಳುನಾಡಿನಲ್ಲಿ ಈ ಜೋಡಿಯನ್ನ ಬಂಧಿಸಿ ಕರೆ ತಂದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಹೈ‌ಫೈ ಲೈಪ್ ಲೀಡ್ ಮಾಡಲು ಇದ್ದ ಬದ್ದ ಹಣ ಖರ್ಚು ಮಾಡಿದ ಈ ಜೋಡಿ, ಪುನಃ ಹಣ ಹೊಂದಿಸಲು ಡೇಟಿಂಗ್ ಆ್ಯಪ್ ಮೊರೆ ಹೋಗಿ ಅಮಾಯಕ ಯುವಕರಿಗೆ ಗಾಳ ಹಾಕುತ್ತಿದ್ರಂತೆ. ಅದ್ರೆ ಪ್ರಥಮ ಚುಂಬನಂ ದಂತ ಭಗ್ನಂ ಅನ್ನೋ ಹಾಗೇ ಮೊದಲ ಪ್ರಯತ್ನದಲ್ಲೆ ಪೊಲೀಸರ ಬಲೆಗೆ ಬಿದ್ದಿದ್ದಾರೆ‌.

ಸದ್ಯ ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿ ಇಬ್ಬರನ್ನ ಬಂಧಿಸಿದ್ದಾರೆ. ಚೆನ್ನೈನಲ್ಲಿ ಒಂದು ಆಭರಣ ಆಡವಿಟ್ಟಿದ್ದು, ಜಪ್ತಿ ಮಾಡಲು ತೆರಳಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಕವಿಪ್ರಿಯಾ ತನ್ನ ಬಾಯ್‌ಫ್ರೆಂಡ್ ಹರ್ಷವರ್ಧನನೊಂದಿಗೆ ಸೇರಿ ಈ ಹನಿಟ್ರ್ಯಾಪ್ ಅನ್ನು ಯೋಜಿಸಿರುವುದು ಬೆಳಕಿಗೆ ಬಂದಿದೆ. ಕೈ ತುಂಬ ಸಂಬಳ ಬರ್ತಿದ್ರು, ಮೋಜು ಮಸ್ತಿ ದುರಾಸೆಯಿಂದ ಇಬ್ಬರು ಟೆಕ್ಕಿಗಳು ಈಗ ಜೈಲು ಸೇರುವಂತಾಗಿದೆ.

ಇಬ್ಬರು ಆರೋಪಿ ಜೋಡಿಯನ್ನು ವಶಕ್ಕೆ ಪಡೆದು, ಕಳ್ಳತನಕ್ಕೆ ಬಳಸಿದ ವಿಧಾನ, ಮಂಪರು ಔಷಧದ ಮೂಲ ಮತ್ತು ಇತರ ದಾಖಲೆಗಳ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಬೆಳಕಿಗೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.