ಸ್ಯಾಂಡಲ್‌ವುಡ್‌ ನಿರ್ಮಾಪಕ ಹಾಗೂ ನಟ ರಾಕ್‌ಲೈನ್‌ ವೆಂಕಟೇಶ್‌ ಅವರ ತಮ್ಮನ ಮನೆಗೆ ಕನ್ನ ಹಾಕಿದ ಖದೀಮರು 5 ಕೆ.ಜಿ. ತೂಕದ ಚಿನ್ನಾಭರಣವನ್ನು ಹೊತ್ತೊಯ್ದಿದ್ದಾರೆ.

ಬೆಂಗಳೂರು (ಅ.30): ಸ್ಯಾಂಡಲ್‌ವುಡ್‌ ನಿರ್ಮಾಪಕ ಹಾಗೂ ನಟ ರಾಕ್‌ಲೈನ್‌ ವೆಂಕಟೇಶ್‌ ಅವರ ತಮ್ಮನ ಮನೆಗೆ ಕನ್ನ ಹಾಕಿದ ಖದೀಮರು 5 ಕೆ.ಜಿ. ತೂಕದ ಚಿನ್ನಾಭರಣವನ್ನು ಹೊತ್ತೊಯ್ದಿದ್ದಾರೆ ಎಂದು ಸ್ವತಃ ರಾಕ್‌ಲೈನ್‌ ವೆಂಕಟೇಶ್‌ ತಮ್ಮನೇ ದೂರು ನೀಡಿದ್ದಾರೆ.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ರಾಕ್ ಲೈನ್ ವೆಂಕಟೇಶ್ ತಮ್ಮನ ಮನೆಯಲ್ಲಿ ಕಳ್ಳತನವಾಗಿದೆ. ಯುರೋಪ್‌ ಪ್ರವಾಸಕ್ಕೆ ಕುಟುಂಬ ಸಮೇತವಾಗಿ ಹೋಗಿದ್ದ ವೇಳೆ ಕಳ್ಳರು ಕೈಚಳಕ ತೋರಿಸಿದ್ದಾರೆ. ವೆಂಕಟೇಶ್‌ ಅವರ ತಮ್ಮ ಹಾಗೂ ಕುಟುಂಬ ಸದಸ್ಯರು ಯುರೋಪ್ ಪ್ರವಾಸ ಮುಗಿಸಿಕೊಂಡು ನಿನ್ನೆ (ಭಾನುವಾರ) ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ 5 ಕೆ.ಜಿ. ಚಿನ್ನಾಭರಣ ಕಳ್ಳತನವಾಗಿದೆ ಎಂದು ದೂರು ನೀಡಲಾಗಿದೆ.

ಸ್ಯಾಂಡಲ್‌ವುಡ್‌ ನಟ ಜಗ್ಗೇಶ್‌ಗೆ ರಿಲೀಫ್‌: ಹುಲಿ ಉಗುರು ಪೆಂಡೆಂಟ್‌ ಕೇಸ್‌, ಅರಣ್ಯ ಇಲಾಖೆ ನೋಟಿಸ್‌ಗೆ ಹೈಕೋರ್ಟ್‌ ತಡೆ

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಹಾಲಕ್ಷ್ಮೀ ಲೇಔಟ್ ಠಾಣೆಯ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ. ಕಳ್ಳರ ಪತ್ತೆಗಾಗಿ ಟವರ್ ಡಂಪ್ ತೆಗೆದು ಆರೋಪಿಗಳಿಗಾಗಿ ಶೋಧ ಕಾರ್ಯ ಮಾಡಲಾಗುತ್ತಿದೆ. ಇನ್ನು ರಾಕ್‌ಲೈನ್‌ ವೆಂಕಟೇಶ್‌ ಅವರ ತಮ್ಮ ಮನೆಯಲ್ಲಿ ಕೆಲಸಕ್ಕೆ ಇದ್ದವರಿಂದಲೂ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮಹಾಲಕ್ಷ್ಮೀ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು, ಶೋಧ ಕಾರ್ಯವನ್ನು ಮುಂದುವರೆಸಲಾಗಿದೆ.