ಬೆಂಗಳೂರಿನ ಟೆಕ್ಕಿಯೊಬ್ಬರು ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಸುಂದರಿಯ ಪ್ರೀತಿಯ ಬಲೆಗೆ ಬಿದ್ದು, ಆನ್‌ಲೈನ್ ಟ್ರೇಡಿಂಗ್‌ನಲ್ಲಿ ₹1.66 ಕೋಟಿ ಕಳೆದುಕೊಂಡಿದ್ದಾರೆ. ಮದುವೆಯ ಭರವಸೆ ನೀಡಿ ವಂಚಿಸಿದ ಯುವತಿ ವಿರುದ್ಧ ಇದೀಗ ಪೊಲೀಸ್ ದೂರು ದಾಖಲಾಗಿದೆ.

ಹಾಯ್… ಫ್ರೆಂಡ್ ಆಗೋಣವಾ? ಸುಂದರಿ ಕಳಿಸಿದ ಈ ಒಂದು ಮೆಸೇಜ್‌ನಿಂದ ಬೆಂಗಳೂರು ಟೆಕ್ಕಿಯೊಬ್ಬ ಕೋಟಿ ಕೋಟಿ ಹಣ ಕಳೆದುಕೊಳ್ಳಬೇಕಾಯ್ತು. ಅಪರಿಚಿತರೊಂದಿಗೆ ಡೇಟಿಂಗ್‌, ಆನ್‌ಲೈನ್ ಟ್ರೇಡಿಂಗ್ ಮಾಡಬಾರದು ಅಂತಾ ಎಷ್ಟೇ ಎಚ್ಚರಿಕೆ ನೀಡಿದರೂ, ಯುವ ಪೀಳಿಗೆ ಕೇಳುತ್ತಿಲ್ಲ. ಇನ್ನೂ ಸುಲಭವಾಗಿ ಮೋಸದ ಬಲೆಗೆ ಬೀಳುತ್ತಿದ್ದಾರೆ. ಅದರಲ್ಲೂ ಸುಂದರ ಹುಡುಗಿಯೊಬ್ಬಳ ಸ್ನೇಹದ ಬಲೆಗೆ ಬಿದ್ದರೆ, ಎಂಥ ಬುದ್ಧಿವಂತನೂ ಯೋಚನೆ ಮಾಡುವ ಶಕ್ತಿ ಕಳೆದುಕೊಳ್ಳುತ್ತಾನೆ ಎಂಬುದಕ್ಕೆ ಈ ಪ್ರಕರಣವೇ ಒಂದು ತಾಜಾ ಉದಾಹರಣೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಿಯಾ ಜೊತೆ ಸ್ನೇಹ… ನಂತರ ಪ್ರೀತಿ, ಹಣ..!

ಸೌರವ್ ದುಬೆ ಎಂಬ ಟೆಕ್ಕಿಗೆ ಫೆಬ್ರವರಿ 15ರಂದು Tantan ಡೇಟಿಂಗ್ ಆ್ಯಪ್‌ನಲ್ಲಿ ‘ರಿಯಾ ಅಗರ್ವಾಲ್’ ಎಂಬ ಯುವತಿಯ ಪರಿಚಯವಾಗುತ್ತೆ. ಮೊದ ಮೊದಲು ಹಾಯ್ ಬಾಯ್ ಅನ್ನೋ ಸಾಮಾನ್ಯ ಚಾಟ್‌ಗಳಿಂದ ಶುರುವಾದ ಇಬ್ಬರ ನಡುವಿನ ಮಾತುಕತೆ ಬರುಬರುತ್ತಾ ಆಡಿಯೋ-ವಿಡಿಯೋ ಕಾಲ್‌ಗಳವರೆಗೆ ಹೋಗಿದೆ. ಯಾವಾಗ ಸುಂದರಿ ಪ್ರತಿದಿನ ಸರಿಯಾದ ಹೊತ್ತಿಗೆ ವಿಡಿಯೋ ಕಾಲ್ ಮಾಡಲು ಶುರು ಮಾಡಿದಳೋ ಆಗಿನಿಂದ ರಿಯಾ ನಿಧಾನವಾಗಿ ಸೌರವ್‌ ದುಬೆಯನ್ನ ಬಲೆಗೆ ಹಾಕುವಲ್ಲಿ ಯಶಸ್ವಿಯಾದಳು. ಐ ಲವ್‌ ಯು ಸೋ ಮಚ್ ಎನ್ನುತ್ತಾ 'ನಾವು ಮದುವೆಯಾಗಬಹುದು' ಎಂಬ ಮಾತುಗಳಿಂದ ಅವನಿಗೆ ಬಣ್ಣ ಬಣ್ಣದ ಕನಸು ಕಟ್ಟಿಬಿಟ್ಟಳು.ಮೊದಲೇ ಸುಂದರಿಯಾಗಿದ್ದ ರಿಯಾ ಇವಳನ್ನು ಮದುವೆಯಾಗುವುದಾದರೆ ಏನಕ್ಕೂ ಸಿದ್ಧ ಎಂಬಂತೆ ಟೆಕ್ಕಿ ವರ್ತಿಸತೊಡಗಿದ!

ಟ್ರೇಡಿಂಗ್ ಹೆಸರಿನಲ್ಲಿ ಕೋಟ್ಯಂತರ ವಂಚನೆ

ಪರಿಚಯ ಸ್ನೇಹವಾಯ್ತು, ಸ್ನೇಹ ಪ್ರೀತಿಯಾಗಿ ಬದಲಾಯ್ತು. ಇದೀಗ ಸುಂದರಿ ಮದುವೆಯಾಗುವ ಭರವಸೆ ನೀಡಿದ್ದರಿಂದ ಟೆಕ್ಕಿ ಇವಳ ಮಾತನ್ನ ಗಂಭೀರವಾಗಿ ನಂಬಿ ಕೂತಿದ್ದ. ಇದೇ ಸರಿಯಾದ ಸಮಯ ಎಂದುಕೊಂಡ ಸುಂದರಿ ರಿಯಾ ಪ್ರೀತಿಯ ಮಾತಿನ ನಡುವೆಯೇ ಟ್ರೇಡಿಂಗ್‌ನಲ್ಲಿ ಹಣ ಹೂಡಿದರೆ ಭಾರೀ ಲಾಭ ಸಿಗುತ್ತದೆ ಎಂದು ಟೆಕ್ಕಿಗೆ ನಂಬಿಸಿದ್ದಳು. ಅವಳ ಮಾತನ್ನು ನಂಬಿದ ಸೌರವ್ ಹಂತಹಂತವಾಗಿ ಹಣ ಹೂಡಲು ಆರಂಭಿಸಿದರು. ಅವರ ಪ್ರೇಮ ಪಾಶದ ಬಲೆಯೊಳಗೆ ಬಿದ್ದಿದ್ದ ಟೆಕ್ಕಿ ಕೇವಲ ಮೂರು ತಿಂಗಳಲ್ಲಿ ಅವರು ಬರೋಬ್ಬರಿ ₹1.66 ಕೋಟಿ ಹೂಡಿಕೆ ಮಾಡಿಬಿಟ್ಟಿದ್ದ! ಲಾಭ ಇಂದು ಬರುತ್ತೆ ನಾಳೆ ಬರುತ್ತೆ ಅಂತಾ ನಂಬಿಕೆಯಿಂದ ಕಾದಿದ್ದೇ ಬಂತು. ಆದರೆ ಲಾಭದ ಹೆಸರಿನಲ್ಲಿ ಮರಳಿ ಬಂದಿದ್ದು ಕೇವಲ ₹4,250 ಮಾತ್ರ. ಆಗಲೇ ತಾನು ಮೋಸ ಹೋಗಿದ್ದೇನೆ ಎಂಬ ಅನುಮಾನ ಸೌರವ್‌ಗೆ ಶುರುವಾಯಿತು.

ಹಣ ಕೇಳುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್!

ಹೂಡಿಕೆ ಮಾಡಿದ ಹಣವನ್ನು ವಾಪಸ್ ಕೇಳುತ್ತಿದ್ದಂತೆ ರಿಯಾ ಅಗರ್ವಾಲ್‌ನ ಮೊಬೈಲ್ ನಂಬರ್ ಏಕಾಏಕಿ ಸ್ವಿಚ್ ಆಫ್ ಆಯಿತು. ಮತ್ತೆ ಸಂಪರ್ಕ ಸಾಧ್ಯವಾಗದೇ ಸೌರವ್ ಬೆಚ್ಚಿಬಿದ್ದ. ಕೊನೆಗೆ ತಾನು ಭಾರೀ ಮೋಸದ ಜಾಲಕ್ಕೆ ಸಿಲುಕಿದ್ದೇನೆ ಎಂಬುದು ಅರಿವಾಗಿ ಸೀದಾ ಅಲ್ಲಿಂದ ಅಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಗೆ ಹೋಗಿ ನಡೆದ ಘಟನೆಯೆಲ್ಲ ಪೊಲೀಸರಿಗೆ ತಿಳಿಸಿ ದೂರು ನೀಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ‘ರಿಯಾ’ ಅನ್ನೋ ಸುಂದರಿ ಯಾರು? ಮೋಸ ಮಾಡುವುದೇ ಅವಳ ಕೆಲಸವಾ? ಅವಳ ನಿಜ ನಾಮ ಏನು? ಹೆಸರಿನ ಹಿಂದೆ ಯಾರು ಇದ್ದಾರೆ ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.