1 ಕೆಜಿ ಎಂಡಿಎಂಎ ಮಾದಕ ವಸ್ತು ಸಾಗಣೆ ಪ್ರಕರಣದಲ್ಲಿ ಬಂಧಿತನಾಗಿದ್ದ ನೈಜೀರಿಯಾ ಪ್ರಜೆಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಮಾದಕ ವಸ್ತು ಪ್ರಕರಣಗಳಲ್ಲಿ ಜಾಮೀನು ನೀಡುವುದು ನಿಯಮವಲ್ಲ, ಅದೊಂದು ವಿನಾಯಿತಿ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಬೆಂಗಳೂರು (ಮೇ.28): ಮಾದಕ ವಸ್ತುಗಳೊಂದಿಗೆ ಸಿಕ್ಕಿಬಿದ್ದ ಆರೋಪಿಗೆ ಜಾಮೀನು ನಿರಾಕರಿಸುವುದು ನಿಯಮ ಮತ್ತು ಜಾಮೀನು ಮಂಜೂರಾತಿಯು ಒಂದು ವಿನಾಯಿತಿ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಎಂಡಿಎಂಎ(MDMA) ಮಾದಕ ವಸ್ತು ಸಾಗಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ನೈಜೀರಿಯಾ ಪ್ರಜೆ(Nigerian citizen)ಗೆ ಜಾಮೀನು(bail) ನಿರಾಕರಿಸಿದೆ
ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠ ಈ ಆದೇಶ
ಪ್ರಕರಣ ಸಂಬಂಧ ಜಾಮೀನು ಕೋರಿ ನೈಜೀರಿಯಾದ ಪ್ರಜೆ ಕ್ರಿಶ್ಚಿಯನ್ ಸೊಪೋರುಚುಕ್ವು(Christian Soporuchukwu) ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠ ಈ ಆದೇಶ ನೀಡಿದೆ.ಪ್ರಕರಣದ ದಾಖಲೆಗಳ ಪ್ರಕಾರ ಆರೋಪಿ ಅಕ್ರಮವಾಗಿ ಭಾರತದಲ್ಲಿ ಉಳಿದಿದ್ದು, 1 ಕೆಜಿ ಎಂಡಿಎಂಎ ಸಹಿತ ಸಿಕ್ಕಿಬಿದ್ದಿದ್ದಾನೆ.
ದಾಳಿ ನಡೆಸಿದ ಪೊಲೀಸರು ಆರೋಪಿಯಿಂದ ಮಾದಕ ವಸ್ತುಗಳ ಜೊತೆಗೆ ಮಿನಿ ಎಲೆಕ್ಟ್ರಾನಿಕ್ ತೂಕ ಯಂತ್ರ, ಮೊಬೈಲ್ ಹಾಗೂ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಬಂಧನದ ಕಾರಣಗಳನ್ನು ಸರಿಯಾಗಿ ತಿಳಿಸದಿರುವುದು ಕೆಲ ಪ್ರಕರಣಗಳಲ್ಲಿ ಜಾಮೀನು ನೀಡಲು ಆಧಾರವಾಗಬಹುದು. ಆದರೆ, ಡ್ರಗ್ಸ್ ಪ್ರಕರಣಗಳಲ್ಲಿ ಕೇವಲ ತಾಂತ್ರಿಕ ಲೋಪಗಳ ಆಧಾರದ ಮೇಲೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ:
ಅರ್ಜಿದಾರ ಕ್ರಿಸ್ಟಿಯನ್ ಬಟ್ಟೆ ವ್ಯಾಪಾರಕ್ಕಾಗಿ ಬಿಸಿನೆಸ್ ವೀಸಾ(Business visa)ದ ಮೇಲೆ ಭಾರತಕ್ಕೆ ಬಂದಿದ್ದ. ಬಳಿಕ ಗೋವಾ, ದೆಹಲಿ ಮತ್ತು ಮುಂಬೈ ನಗರಗಳಲ್ಲಿ ವಾಸವಾಗಿದ್ದ.ಈ ವೇಳೆ ದಕ್ಷಿಣ ಆಫ್ರಿಕಾ ಮೂಲದ ಡ್ರಗ್ ಪೆಡ್ಲರ್‌ಗಳ ಪರಿಚಯ ಮಾಡಿಕೊಂಡು ಕಡಿಮೆ ದರದಲ್ಲಿ ಎಂಡಿಎಂಎ ಖರೀದಿಸಿ, ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ/ಬಿಟಿ ಉದ್ಯೋಗಿಗಳಿಗೆ ಪ್ರತಿ ಗ್ರಾಂಗೆ 15 ಸಾವಿರದಿಂದ 20 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ಆರೋಪಿಯನ್ನು ಬೇಗೂರು ಪೊಲೀಸರು 1ಕೆಜಿ ಎಂಡಿಎಂಎ ಕ್ರಿಸ್ಟಲ್‌ಗಳೊಂದಿಗೆ 2025ರ ಏ.6ರಂದು ಬಂಧಿಸಿದ್ದರು. ವಿಚಾರಣಾ ನ್ಯಾಯಾಲಯ ಈತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರನ್ನು ಬಂಧಿಸುವುದಕ್ಕೂ ಮುನ್ನ ಬಂಧನಕ್ಕೆ ಸೂಕ್ತ ಕಾರಣಗಳನ್ನು ತಿಳಿಸಿಲ್ಲ. ಆದ್ದರಿಂದ ಅರ್ಜಿದಾರರ ಬಂಧನ ಕಾನೂನುಬಾಹಿರವಾಗಿದ್ದು, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.


