ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಡೆದ ಶರಣಮ್ಮ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮದುವೆ ಪ್ರಸ್ತಾಪಕ್ಕೆ ಸಂಬಂಧಿಸಿದ ಆಘಾತಕಾರಿ ಕಾರಣವನ್ನು ಪತ್ತೆಹಚ್ಚಿದ್ದಾರೆ. ಮೃತಳ ತಂಗಿಯನ್ನು ಪ್ರೀತಿಸುತ್ತಿದ್ದ ಆರೋಪಿ, ಆಕೆಯ ವಿಳಾಸ ನೀಡದಿದ್ದಕ್ಕೆ ಅಕ್ಕ ಶರಣಮ್ಮಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಬೆಂಗಳೂರು(ನ.30): ರಾಜಧಾನಿಯ ಶೇಷಾದ್ರಿಪುರಂನಲ್ಲಿ ನಿನ್ನೆ(ನ.29, ಶನಿವಾರ) ನಡೆದ ಶರಣಮ್ಮ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಕೊಲೆಗೆ ಕಾರಣವಾದ ಆಘಾತಕಾರಿ ಹಿನ್ನೆಲೆಯನ್ನು ಬಯಲು ಮಾಡಿದ್ದಾರೆ. ಆರೋಪಿಯನ್ನು ಶರಣಮ್ಮ ಅವರ ತಂಗಿ ಮದುವೆಯಾಗಲು ನಿರಾಕರಿಸಿದ್ದೆ ಈ ಬರ್ಬರ ಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ.
ಮೃತ ಶರಣಮ್ಮಳ ತಂಗಿಯ ಹಿಂದೆ ಬಿದ್ದಿದ್ದ ಹಂತಕ:
ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಜಯಪುರ ಮೂಲದ ಶರಣಮ್ಮ (23) ಎಂಬ ಮಹಿಳೆಯನ್ನು ಪರಿಚಿತ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ಶೇಷಾದ್ರಿಪುರಂ ಪೊಲೀಸರು ತನಿಖೆ ನಡೆಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಕೊಲೆ ಮಾಡಿದ ಆರೋಪಿ ವಿಜಯಪುರ ಜಿಲ್ಲೆಯ ಇಂಡಿ ಮೂಲದ ನಾಗಪ್ಪ ಎಂದು ಗುರುತಿಸಲಾಗಿದೆ. ಈತ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದ.
ಆರೋಪಿ ನಾಗಪ್ಪ ಕೊಲೆಯಾದ ಶರಣಮ್ಮ ಅವರ ತಂಗಿಯನ್ನು ಪ್ರೀತಿಸುತ್ತಿದ್ದ. ಆಕೆಯನ್ನು ಮದುವೆಯಾಗುವುದಾಗಿ ಆಕೆಯ ಕುಟುಂಬದವರಿಗೂ ತಿಳಿಸಿದ್ದ. ಆದರೆ, ಯುವತಿ (ಶರಣಮ್ಮಳ ತಂಗಿ) ನಾಗಪ್ಪನನ್ನು ಅವಾಯ್ಡ್ ಮಾಡಿದ್ದಳು. ಇತ್ತೀಚೆಗೆ ನಾಗಪ್ಪನ ಕಾಟಕ್ಕೆ ಬೇರೆಡೆ ಸ್ಥಳಾಂತರಗೊಂಡಿದ್ದಳು.
ತಂಗಿಯ ವಿಳಾಸ ಕೇಳಿ ಶರಣಮ್ಮಳ ಬಳಿ ಬಂದಿದ್ದ ಹಂತಕ:
ನಿನ್ನೆ (ಘಟನೆ ನಡೆದ ದಿನ) ನಾಗಪ್ಪ ಯುವತಿಯ ವಿಳಾಸ ಕೇಳಲು ಶರಣಮ್ಮಳ ಬಳಿ ಬಂದಿದ್ದನು. 'ನಿನ್ನ ತಂಗಿ ಎಲ್ಲಿದ್ದಾಳೆ, ಅಡ್ರೆಸ್ ಹೇಳು' ಎಂದು ಒತ್ತಾಯಿಸಿದ್ದಾನೆ. 'ವಿಳಾಸ ಗೊತ್ತಿಲ್ಲ' ಎಂದು ಶರಣಮ್ಮ ಹೇಳಿದ್ದಕ್ಕೆ, ಮೊದಲೇ ಖರೀದಿಸಿ, ತನ್ನ ಬೆನ್ನ ಹಿಂದೆ ಬಚ್ಚಿಟ್ಟುಕೊಂಡು ಬಂದಿದ್ದ ದೊಡ್ಡ ಚಾಕುವಿನಿಂದ ಆಕೆಯನ್ನು ಬರ್ಬರವಾಗಿ ಇರಿದು ಕೊಲೆ ಮಾಡಿದ್ದಾನೆ.
ಆರೋಪಿ ಬಂಧನ
ಹತ್ಯೆ ಮಾಡಿದ ಬಳಿಕ ಪರಾರಿಯಾಗಿದ್ದ ಆರೋಪಿ ನಾಗಪ್ಪನನ್ನು ತಡರಾತ್ರಿ ಪೊಲೀಸರು ಆತನ ಸ್ನೇಹಿತನ ಮನೆಯಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


