ಬೆಂಗಳೂರಿನ ಕಾಡುಗೋಡಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾರು ಚಾಲಕನಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದ ಬೈಕ್ ಸವಾರ ಅರ್ಬಾಜ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿಯು ವೃತ್ತಿಪರ ಅಪರಾಧಿಯಾಗಿದ್ದು, ಈತನ ಮೇಲೆ ಈಗಾಗಲೇ ನಾಲ್ಕು ಗಂಭೀರ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು (ಜ.18): ಸಿಲಿಕಾನ್ ಸಿಟಿ ಬೆಂಗಳೂರಿನ ವೈಟ್‌ಫೀಲ್ಡ್ ವಿಭಾಗದ ಕಾಡುಗೋಡಿಯಲ್ಲಿ ರೌಡಿಸಂ ಪ್ರವೃತ್ತಿ ಮಿತಿಮೀರಿದೆ. ಕಳೆದ ಜ. 16ರ ಸಂಜೆ 6 ಗಂಟೆ ಸುಮಾರಿಗೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾರು ಚಾಲಕ ಮತ್ತು ಬೈಕ್ ಸವಾರನ ನಡುವೆ ಗಲಾಟೆ ನಡೆದಿದೆ. ಈ ವೇಳೆ ಬೈಕ್‌ನಲ್ಲಿ ಬಂದಿದ್ದ ಅರ್ಬಾಜ್ ಖಾನ್ (25) ಎಂಬಾತ, ತನ್ನ ಸೊಂಟದಲ್ಲಿದ್ದ ಡ್ರ್ಯಾಗರ್ (ಚಾಕು) ತೆಗೆದು ನಡುರಸ್ತೆಯಲ್ಲೇ ಕಾರು ಚಾಲಕನಿಗೆ ಪ್ರಾಣ ಬೆದರಿಕೆ ಹಾಕಿದ್ದಾನೆ. ಈ ಭೀಕರ ದೃಶ್ಯ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಪೊಲೀಸರ ಮಿಂಚಿನ ಕಾರ್ಯಾಚರಣೆ: ಆರೋಪಿ ಅರೆಸ್ಟ್
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕಾಡುಗೋಡಿ ಪೊಲೀಸರು, ಸಿಸಿಟಿವಿ ಮತ್ತು ಡ್ಯಾಶ್ ಕ್ಯಾಮ್ ದೃಶ್ಯಾವಳಿಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಆರೋಪಿ ಅರ್ಬಾಜ್ ಖಾನ್‌ನನ್ನು ಬಂಧಿಸಿದ್ದಾರೆ. KA53JB3274 ನೋಂದಣಿ ಸಂಖ್ಯೆಯ ಬೈಕ್‌ನಲ್ಲಿ ಬಂದಿದ್ದ ಅರೋಪಿ, ಆರ್ ಟಿ ನಗರದಲ್ಲಿ ಮೀನು ಮಾರಾಟದ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆದರೆ, ಈತನ ಹಿನ್ನೆಲೆ ಕೆದಕಿದ ಪೊಲೀಸರಿಗೆ ಆಘಾತಕಾರಿ ಸತ್ಯಗಳು ಲಭ್ಯವಾಗಿವೆ.
ಅರ್ಬಾಜ್ ಖಾನ್ ಒಬ್ಬ 'ಹಳೇ ಕ್ರಿಮಿನಲ್'
ಬಂಧಿತ ಅರ್ಬಾಜ್ ಖಾನ್ ಕೇವಲ ಮೀನು ಮಾರಾಟಗಾರನಲ್ಲ, ಬದಲಾಗಿ ವೃತ್ತಿಪರ ಅಪರಾಧಿ ಎಂಬುದು ಬಯಲಾಗಿದೆ. ಈತನ ಮೇಲೆ ಈಗಾಗಲೇ ವಿವಿಧ ಠಾಣೆಗಳಲ್ಲಿ ನಾಲ್ಕು ಗಂಭೀರ ಪ್ರಕರಣಗಳು ದಾಖಲಾಗಿವೆ. ಗೋವಿಂದಪುರದಲ್ಲಿ ಡಕಾಯಿತಿ, ಫ್ರೇಜರ್ ಟೌನ್ ಮತ್ತು ಎಸ್.ಆರ್. ನಗರದಲ್ಲಿ ಹಲ್ಲೆ ಪ್ರಕರಣಗಳು ಹಾಗೂ ಅಶೋಕ್ ನಗರ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನದ ಆರೋಪ ಈತನ ಮೇಲಿದೆ. ಇಷ್ಟೆಲ್ಲಾ ಅಪರಾಧ ಕೃತ್ಯ ಎಸಗಿದ್ದರೂ ಈತ ರಾಜಾರೋಷವಾಗಿ ಹೊರಗೆ ಓಡಾಡುತ್ತಿದ್ದುದು ಆತಂಕಪಡುವಂತದ್ದೇ.
ಮೊದಲ ನಾಲ್ಕು ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ವಿಧಿಸಿದ್ದರೆ ಇಂದು ಈ ಪ್ರಕರಣ ನಡೆಯುತ್ತಿರಲಿಲ್ಲ. ಈ ಪ್ರಕರಣವೂ ಹಿಂದಿನ ಪ್ರಕರಣಗಳ ಸಾಲಿಗೆ ಸೇರಿ ಮತ್ತೆ ಇಂಥದ್ದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಮುಂದುವರಿಯುವುದಿಲ್ಲ ಎಂಬುದಕ್ಕೆ ಗ್ಯಾರಂಟಿ ಇಲ್ಲ. ಬಂಧಿಸುವುದು ಬಿಡುಗಡೆ ಮಾಡುವುದು, ಅಪರಾಧ ಕೃತ್ಯಗಳಲ್ಲಿ ಮತ್ತೆ ತೊಡಗುವುದು ಸಾರ್ವಜನಿಕರಿಗೆ ತೊಂದರೆ ಕೊಡುವುದು ಮುಂದುವರಿಯುತ್ತೆ? ಪೊಲೀಸ್ ಇಲಾಖೆ ಈಗಲಾದ್ರೂ ಗಂಭೀರವಾಗಿ ಪರಿಗಣಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕಿದೆ.


