Boulders Roll Down on Car:ಹಿಮಾಚಲ ಪ್ರದೇಶದ ರಸ್ತೆಯೊಂದರಲ್ಲಿ ವಾಹನ ಚಾಲನೆ ಮಾಡುತ್ತಿದ್ದಾಗ ಬಂಡೆಯೊಂದು ವಾಹನದ ಮುಂದೆಯೇ ಉರುಳಿ ಹೋದಂತಹ ಘಟನೆ ನಡೆದಿದ್ದು, ಈ ದೃಶ್ಯ ವಾಹನದ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ. ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಹಿಮಾಚಲ ಪ್ರದೇಶದಲ್ಲಿ ಕಾರು ಸಾಗುತ್ತಿದ್ದಾಗಲೇ ಬೆಟ್ಟದಿಂದ ಉರುಳಿದ ಬಂಡೆಕಲ್ಲು
ಬೆಟ್ಟಗುಡ್ಡಗಳಿಂದ ಕೂಡಿದ ಹಿಮಾಚಲದ ರಸ್ತೆಗಳು ತುಂಬಾ ಅಪಾಯಕಾರಿ. ಕಿರಿದಾದ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವುದೇ ಒಂದು ಸಾಹಸ. ಸ್ವಲ್ಪ ಹೆಚ್ಚು ಕಡಿಮೆ ಆದರೂ ವಾಹನಗಳು ಪ್ರಪಾತಕ್ಕೆ ಬೀಳೋದು ಗ್ಯಾರಂಟಿ. ಹೀಗಿರುವಾಗ ಹಿಮಾಚಲ ಪ್ರದೇಶಗಳಲ್ಲಿ ವಾಹನ ಚಾಲನೆ ಮಾಡುತ್ತಿದ್ದಾಗ ಬಂಡೆಯೊಂದು ವಾಹನದ ಮುಂದೆಯೇ ಉರುಳಿ ಹೋದಂತಹ ಘಟನೆ ನಡೆದಿದ್ದು, ಈ ದೃಶ್ಯ ವಾಹನದ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ. ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಕಾರಿನ ಬಂಪರ್ ಮೇಲೆ ಬಿದ್ದು ಪ್ರಪಾತಕ್ಕೆ ಉರುಳಿದ ಬಂಡೆ: ಸಾವು ಜಸ್ಟ್ ಮಿಸ್
ಟ್ವಿಟ್ಟರ್‌ನಲ್ಲಿ ನಿಖಿಲ್ ಸೈನಿ ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ರಸ್ತೆಯ ಮೇಲೆ ಕಾರುಗಳು ಸಾಗುವುದನ್ನು ನೋಡಬಹುದು. ಎರಡು ಕಾರುಗಳು ಮುಂದೆ ಪಾಸಾಗಿದ್ದು, ಮೂರನೇ ಕಾರು ಪಾಸಾಗುತ್ತಿದ್ದಾಗಲೇ ಬಂಡೆಯೊಂದು ಉರುಳುತ್ತಾ ಬಂದು ಕಾರಿನ ಬಂಪರ್ ಮೇಲೆ ಬಿದ್ದು ಉರುಳಿ ಹೋಗಿದೆ. ಸ್ವಲ್ಪ ಹಿಂದೆ ಬಿದ್ದಿದ್ದರು ಕಾರಿನಲ್ಲಿದ್ದವರೆಲ್ಲರೂ ಮಸಣ ಸೇರುತ್ತಿದ್ದಿದ್ದು, ಗ್ಯಾರಂಟಿ ಈ ಭಯಾನಕ ದೃಶ್ಯಾವಳಿ ಕಾರಿನ ಡ್ಯಾಶ್‌ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯಲ್ಲಿ ಕಾರಿನ ಬಂಪರ್ ಸಂಪೂರ್ಣ ಜಖಂ ಆಗಿದೆ.
ಟ್ವಿಟ್ಟರ್‌ನಲ್ಲಿ ವೀಡಿಯೋ ಹಂಚಿಕೊಂಡಿರುವ ನಿಖಿಲ್ ಸೈನಿಯವರು ಹೀಗೆ ಬರೆದಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಮಳೆಗಾಲ ಮುಗಿದಿದ್ದರೂ ರಸ್ತೆಗಳು ಇನ್ನೂ ಸಂಪೂರ್ಣವಾಗಿ ಸುರಕ್ಷಿತವಾಗಿಲ್ಲ! ಇದು ದುರಂತವಾಗುತಿತ್ತು. ಆದರೆ ದೇವರ ದಯೆಯಿಂದ ಕಾರಿನ ಮುಂಭಾಗ ಮಾತ್ರ ಹಾನಿಗೊಳಗಾಗಿದೆ. ಈ ಬಂಡೆಗಳು ಕಾರುಗಳನ್ನು ಕಾಗದದಂತೆ ಸೆಕೆಂಡುಗಳಲ್ಲಿ ಪುಡಿಮಾಡಬಲ್ಲವು ಹಿಮಾಚಲ ಪ್ರದೇಶ ಕಿನ್ನೌರ್‌ನ ನಾಥಪಾ ಪಾಯಿಂಟ್‌ನಲ್ಲಿ ಘಟನೆ ನಡೆದಿದೆ ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋ ನೋಡಿದ ಅನೇಕರು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ವೇಳೆ ಕಾರಿನಲ್ಲಿ ಎಷ್ಟು ಜನರಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ.
ಅನೇಕರು ಕಾರಿನಲ್ಲಿದ್ದವರ ಅದೃಷ್ಟ ಚೆನ್ನಾಗಿತ್ತು ಎಂದಿದ್ದಾರೆ. ಕಾಣದ ಶಕ್ತಿಗಳು ಕಾರಿನಲ್ಲಿದ್ದವರನ್ನು ದುರಂತದಿಂದ ಪಾರು ಮಾಡಿವೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. 19 ಸೆಕೆಂಡ್‌ಗಳ ಡ್ಯಾಶ್‌ಕ್ಯಾಮ್ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗ್ತಿದೆ. ಇಲ್ಲಿನ ಬಿಲಾಸ್‌ಪುರದಲ್ಲಿ 15 ಜನರ ಬಲಿ ಪಡೆದ ಭೂಕುಸಿತ ಘಟನೆಯ ನಂತರ ಈ ಘಟನೆ ನಡೆದಿದೆ.
ಭೂಕುಸಿತಕ್ಕೆ ಸಿಲುಕಿದ ಖಾಸಗಿ ಬಸ್: 15 ಜನರು ಬಲಿ
ಇತ್ತೀಚೆಗೆ ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿ ಖಾಸಗಿ ಬಸ್ಸೊಂದು ಭಾರಿ ಭೂಕುಸಿತಕ್ಕೆ ಸಿಲುಕಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ . ಈ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ರಸ್ತೆಗಳು ಭೂಕುಸಿತಕ್ಕೆ ಒಳಗಾಗುತ್ತಿವೆ. ದುರಂತಕ್ಕೀಡಾದ ಬಸ್ 25ರಿಂದ 30 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಮತ್ತು ಮರೋಟನ್‌ನಿಂದ ಘುಮಾರ್ವಿನ್‌ಗೆ ಹೋಗುತ್ತಿದ್ದಾಗ ಸಂಜೆ 6:30 ರ ಸುಮಾರಿಗೆ ಭೂಕುಸಿತ ಸಂಭವಿಸಿದೆ. ದುರಂತದಲ್ಲಿ ಬಸ್‌ನ ಚಾಲಕ ಮತ್ತು ನಿರ್ವಾಹಕ ಸೇರಿದಂತೆ 15 ಜನರು ಸಾವನ್ನಪ್ಪಿದರು. ಘಟನೆಯ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಹತ್ತಿರದ ಸಂಬಂಧಿಕರಿಗೆ 2 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ.
ಹಿಮಾಚಲ ಪ್ರದೇಶದ ಎತ್ತರದ ಭಾಗಗಳಲ್ಲಿ ಹಿಮಪಾತವಾದರೆ, ಮಧ್ಯ ಮತ್ತು ತಗ್ಗು ಬೆಟ್ಟಗಳಲ್ಲಿ ಮಧ್ಯಂತರವಾಗಿ ಹಗುರದಿಂದ ಮಧ್ಯಮ ಮಳೆಯಾಗಿದ್ದು, ತಾಪಮಾನ ಕಡಿಮೆಯಾಗಿದೆ. ಮುಂಬರುವ ದಿನಗಳಲ್ಲಿ ತಗ್ಗು ಮತ್ತು ಮಧ್ಯದ ಬೆಟ್ಟಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಹಗುರ ಮಳೆ ಮತ್ತು ಎತ್ತರದ ಬೆಟ್ಟಗಳಲ್ಲಿ ಹಿಮ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ಹೊಟ್ಟೆಯಿಂದ ಹೇಗೆ ಹೊರಗೆ ಬಂದೆ ಎಂದು ಕೇಳಿದ ಮಗು: ಅಮ್ಮನ ಉತ್ತರ ಕೇಳಿದ ಮಗು ಹೇಳಿದ್ದೇನು?
ಇದನ್ನೂ ಓದಿ: ಇಂಗ್ಲೆಂಡ್‌ನ ಹಿಂದೂ ಶಾಲೆಗೆ ಅತ್ಯುತ್ತಮ ರೇಟಿಂಗ್ ನೀಡಿದ ಯುಕೆ ಶಿಕ್ಷಣ ಇಲಾಖೆ
