ಬೆಂಗ್ಳೂರಲ್ಲಿ ಮಾರಾಟ ಮಾಡಲು ತಮಿಳುನಾಡಿನಲ್ಲಿ ಬಚ್ಚಿಟ್ಟಿದ್ದ ರಕ್ತಚಂದನ ಜಪ್ತಿ
ವಿಚಾರಣೆ ವೇಳೆ ಆರೋಪಿ ಇಮ್ತಿಯಾಜ್ ನೀಡಿದ ಮಾಹಿತಿ ಮೇರೆಗೆ ತಮಿಳುನಾಡಿಗೆ ತೆರಳಿದ ಪೊಲೀಸರ ತಂಡ
ಬೆಂಗಳೂರು(ಅ.30): ರಕ್ತಚಂದನ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಾದ ಬೊಮ್ಮನಹಳ್ಳಿಯ ಇಮ್ತಿಯಾಜ್ ಷರೀಫ್ ಮತ್ತು ಕೃಷ್ಣಗಿರಿಯ ಸೈಯದ್ ನೂರುದ್ದೀನ್ ಅವರಿಂದ 400 ಕೆ.ಜಿ. ರಕ್ತಚಂದನ ಮರದ ತುಂಡುಗಳನ್ನು ಜಪ್ತಿ ಮಾಡಲಾಗಿದೆ. ತಲೆ ಮರೆಸಿಕೊಂಡಿರುವ ಆಂಧ್ರಪ್ರದೇಶ ಮೂಲದ ಮತ್ತೊಬ್ಬ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅ.16ರಂದು ಸಂಜೆ ವಾಟಾಳ್ ನಾಗರಾಜ್ ರಸ್ತೆಯ ರೇಷ್ಮೆ ಭವನದ ಬಳಿ ಆರೋಪಿ ಇಮ್ತಿಯಾಜ್ ಷರೀಫ್ ಬ್ಯಾಗ್ ಹಿಡಿದು ಅನುಮಾನಾಸ್ಪದವಾಗಿ ನಿಂತಿದ್ದನ್ನು ಗಮನಿಸಿರುವ ಗಸ್ತು ಪೊಲೀಸರು, ಆತನನ್ನು ವಶಕ್ಕೆ ಪಡೆದು ಬ್ಯಾಗ್ ಪರೀಶೀಲಿಸಿದಾಗ 11 ಕೆ.ಜಿ. ತೂಕದ ರಕ್ತಚಂದನದ ತುಂಡುಗಳು ಪತ್ತೆಯಾಗಿವೆ. ಬಳಿಕ ಆತನನ್ನು ವಿಚಾರಣೆಗೆ ಒಳಪಡಿಸಿದಾಗ, ಗಿರಾಕಿಗೆ ರಕ್ತಚಂದನ ಮಾರಾಟ ಮಾಡಲು ಸ್ಯಾಂಪಲ್ ತೋರಿಸಲು ಬಂದಿದ್ದಾಗಿ ಬಾಯ್ಬಿಟ್ಟಿದ್ದಾನೆ. ಈತನ ನೀಡಿದ ಮಾಹಿತಿ ಮೇರೆಗೆ ಆರೋಪಿ ಸೈಯದ್ ನೂರುದ್ದೀನ್‌ನನ್ನು ಬಂಧಿಸಲಾಗಿದೆ.
ಬೆಂಗಳೂರು: ಸಂಪ್‌ನಲ್ಲಿತ್ತು 2.68 ಕೋಟಿಯ ರಕ್ತಚಂದನ, ನಾಲ್ವರು ರೈತರು ಸೇರಿ ಐವರ ಸೆರೆ
ವಿಚಾರಣೆ ವೇಳೆ ಆರೋಪಿ ಇಮ್ತಿಯಾಜ್ ನೀಡಿದ ಮಾಹಿತಿ ಮೇರೆಗೆ ತಮಿಳುನಾಡಿಗೆ ತೆರಳಿದ ಪೊಲೀಸರ ತಂಡ, ಅಲ್ಲಿನ ಕೃಷ್ಣಗಿರಿ ಹೊರವಲಯದ ಶೆಡ್‌ವೊಂದರಲ್ಲಿ ಆರೋಪಿಗಳು ಬಚ್ಚಿಟ್ಟಿದ್ದ 399 ಕೆ.ಜಿ. ತೂಕದ ರಕ್ತಚಂದನದ ತುಂಡುಗಳನ್ನು ಜಪ್ತಿ ಮಾಡಿದ್ದಾರೆ. ಈ ರಕ್ತ ಚಂದನ ಮಾರಾಟ ದಂಧೆಯಲ್ಲಿ ಹಲವರು ಭಾಗಿಯಾಗಿರುವ ಸಾಧ್ಯತೆಯಿದೆ. ಆರೋಪಿಗಳು ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬನಿಂದ ಈ ರಕ್ತಚಂದನದ ತುಂಡುಗಳನ್ನು ಖರೀಸಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ತಲೆಮರೆಸಿಕೊಂಡಿರುವ ಆಂಧ್ರಪ್ರದೇಶ ಮೂಲದ ವ್ಯಕ್ತಿಯ ಬಂಧನದ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.