ಬೆಂಗಳೂರು: ಸಂಪ್‌ನಲ್ಲಿತ್ತು 2.68 ಕೋಟಿಯ ರಕ್ತಚಂದನ, ನಾಲ್ವರು ರೈತರು ಸೇರಿ ಐವರ ಸೆರೆ
ಬಂಧಿತ ಆರೋಪಿಗಳಿಂದ 2.68 ಕೋಟಿ ರು. ಮೌಲ್ಯದ 1.6 ಟನ್ ರಕ್ತ ಚಂದನ ಜಪ್ತಿ
ಬೆಂಗಳೂರು(ಜು.27): ರಕ್ತ ಚಂದನ ಮಾರಾಟ ದಂಧೆಯಲ್ಲಿ ತೊಡಗಿದ್ದ ನಾಲ್ವರು ರೈತರು ಸೇರಿದಂತೆ ಐದು ಮಂದಿಯನ್ನು ಸೆರೆ ಹಿಡಿದು ಅವರಿಂದ 2.68 ಕೋಟಿ ರು. ಮೌಲ್ಯದ ಒಂದೂವರೆ ಟನ್ ರಕ್ತ ಚಂದನವನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾಮಾಕ್ಷಿಪಾಳ್ಯದ ವೃಷಭಾವತಿನಗರದ ವಿನೋದ್, ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರದ ಲಕ್ಷ್ಮಯ್ಯ, ಸುಬ್ಬಣ್ಣನಪಾಳ್ಯದ ಸಂಜಯ್, ಹಾಸನದ ಪೆದ್ದನಹಳ್ಳಿಯ ಪಿ.ಡಿ.ರಾಜು ಹಾಗೂ ತುಮಕೂರಿನ ಶೆಟ್ಟಿಗೆಹಳ್ಳಿಯ ಕೃಷ್ಣ ಬಂಧಿತರಾಗಿದ್ದು, ಆರೋಪಿಗಳಿಂದ 2.68 ಕೋಟಿ ರು. ಮೌಲ್ಯದ 1.6 ಟನ್ ರಕ್ತ ಚಂದನ ಜಪ್ತಿಯಾಗಿದೆ. ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಅಜಯ್ ಸೇರಿದಂತೆ ನಾಲ್ವರ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜು.22ರಂದು ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ ಸಮೀಪದ ಟಿಂಬರ್ ಲೇಔಟ್‌ನ ಯಾರ್ಡ್‌ನಲ್ಲಿ ಬೈಕ್‌ನಲ್ಲಿ ರಕ್ತ ಚಂದನ ಮರದ ತುಂಡುಗಳನ್ನು ತಂದು ವಿನೋದ್ ಹಾಗೂ ಅಜಯ್ ಮಾರಾಟಕ್ಕೆ ಯತ್ನಿಸಿದ್ದರು. ಈ ಬಗ್ಗೆ ಯಾರ್ಡ್ ಕೆಲಸಗಾರರಿಂದ ಮಾಹಿತಿ ಪಡೆದ ಇನ್ಸ್‌ಪೆಕ್ಟರ್ ಶಂಕರ್ ನಾಯಕ್ ತಂಡವು, ಕೂಡಲೇ ಟಿಂಬರ್ ಯಾರ್ಡ್‌ಗೆ ತೆರಳಿ ರಕ್ತ ಚಂದನ ದಂಧೆಕೋರರ ಬಂಧಿಸಲು ಮುಂದಾಗಿದೆ. ಈ ಹಂತದಲ್ಲಿ ಅಜಯ್ ತಪ್ಪಿಸಿಕೊಂಡಿದ್ದು, ವಿನೋದ್ ಪೊಲೀಸರಿಗೆ ಸಿಕ್ಕಿಬಿದ್ದ. ಬಳಿಕ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದು ವಿಚಾರಣೆಗೊಳಪಡಿಸಿದಾಗ ಇನ್ನುಳಿದವರು ಸಿಕ್ಕಿಬಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
Bengaluru; ಖಾಸಗಿ ಟ್ರಾನ್ಸ್‌ಪೋರ್ಟ್‌ನಿಂದ ರಕ್ತಚಂದನ ಸ್ಮಗ್ಲಿಂಗ್
ನೀರಿನ ಸಂಪ್‌ನಲ್ಲಿತ್ತು ಒಂದು ಟನ್ ರಕ್ತಚಂದನ
ಟಿಂಬರ್ ಯಾರ್ಡ್‌ನಲ್ಲಿ ವಿನೋದ್ ಸಿಕ್ಕಿಬಿದ್ದ ಬಳಿಕ ಆತನ ಬಳಿ 17 ಕೆಜಿ ಮಾತ್ರ ರಕ್ತ ಚಂದನ ಪತ್ತೆಯಾಯಿತು. ಬಳಿಕ ವಿಚಾರಣೆ ವೇಳೆ ಹೆಸರಘಟ್ಟದ ಮನೆಯೊಂದರಲ್ಲಿ ರಕ್ತ ಚಂದನ ದಾಸ್ತಾನು ಮಾಡಲಾಗಿದೆ ಎಂದು ವಿನೋದ್ ಬಾಯ್ಬಿಟ್ಟ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ಮುಂದುವರೆಸಿದ ಪೊಲೀಸರು, ಹೆಸರಘಟ್ಟಮನೆಗೆ ತೆರಳಿ ಪರಿಶೀಲಿಸಿದಾಗ ಪ್ರಾರಂಭದಲ್ಲಿ ಎಲ್ಲೂ ರಕ್ತಚಂದನ ಪತ್ತೆಯಾಗಿಲ್ಲ. ಕೊನೆಗೆ ಆ ಮನೆ ಹೊರಾವರಣದ ತಗಡುಗಳಿಂದ ಮುಚ್ಚಿದ್ದ ನೀರಿಲ್ಲದ ಸಂಪ್ ಅನ್ನು ಶೋಧಿಸಿದಾಗ 1.6 ಟನ್ ರಕ್ತ ಚಂದನ ಪತ್ತೆಯಾಯಿತು. ಆದರೆ ಅಷ್ಟರಲ್ಲಿ ಆ ಮನೆಯಲ್ಲಿದ್ದ ನಾಲ್ವರು ಆರೋಪಿಗಳು ಓಡಿ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರೂ. 11.70 ಕೋಟಿ ಮೌಲ್ಯದ ರಕ್ತಚಂದನ ಜಪ್ತಿ: ಅಲ್ಲು ಅರ್ಜುನ್ ಪುಷ್ಪಾ ನೆನಪಿಸಿದ ದಾಳಿ
ಇದಾದ ಬಳಿಕ ವಿನೋದ್‌ನನ್ನು ಮತ್ತೆ ವಿಚಾರಣೆಗೊಳಪಡಿಸಿದಾಗ ನೈಸ್ ರಸ್ತೆಯಲ್ಲಿ ಮತ್ತೊಂದು ತಂಡ ರಕ್ತ ಚಂದನ ಮಾರಾಟಕ್ಕೆ ಬರಲಿದೆ ಎಂದು ಬಹಿರಂಗಪಡಿಸಿದ. ಆತನ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ರಾಜು, ಸಂಜಯ್, ಲಕ್ಷ್ಮಯ್ಯ ಹಾಗೂ ಕೃಷ್ಣ ಬಂಧಿತರಾದರು. ಇವರು ಬೈಕ್‌ನಲ್ಲಿ 113 ಕೆಜಿ ರಕ್ತ ಚಂದನ ತಂದು ನಗರದಲ್ಲಿ ಮಾರಾಟಕ್ಕೆ ಯೋಜಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆಂಧ್ರಪ್ರದೇಶದಿಂದ ರಕ್ತ ಚಂದನ
ತಾವು ಕೃಷಿಕರು. ಆಂಧ್ರಪ್ರದೇಶ ವ್ಯಕ್ತಿಯೊಬ್ಬರು ಹಣದಾಸೆ ತೋರಿಸಿ ರಕ್ತ ಚಂದನ ಮಾರಾಟಕ್ಕೆ ನಮ್ಮನ್ನು ಬಳಸಿಕೊಂಡರು ಎಂದು ಲಕ್ಷ್ಮಯ್ಯ ಹಾಗೂ ಆತನ ಮೂವರು ಸ್ನೇಹಿತರು ವಿಚಾರಣೆ ವೇಳೆ ಹೇಳಿದ್ದಾರೆ. ಆಂಧ್ರಪ್ರದೇಶದ ಚಿತ್ತೂರಿನಿಂದ ಅಕ್ರಮವಾಗಿ ನಗರಕ್ಕೆ ರಕ್ತ ಚಂದನ ಸಾಗಟವಾಗಿರುವುದು ಗೊತ್ತಾಗಿದೆ. ತಲೆಮರೆಸಿಕೊಂಡಿರುವ ಅಜಯ್ ತಂಡ ಪತ್ತೆಯಾದರೆ ರಕ್ತ ಚಂದನ ಸಾಗಾಣಿಕೆ ಮೂಲ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.