ದೆಹಲಿ, ಪಂಜಾಬ್‌ನಂತಹ ರಾಜ್ಯಗಳಲ್ಲಿ ಐಷಾರಾಮಿ ಕಾರುಗಳನ್ನು ಕದ್ದು, ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಸ್ಕೂಟರ್ ಕಳ್ಳತನದ ತನಿಖೆ ವೇಳೆ ಇಬ್ಬರು ಡೀಲರ್‌ಗಳನ್ನು ಬಂಧಿಸಲಾಗಿದೆ.

ಬೆಂಗಳೂರು: ದೆಹಲಿ, ಪಂಜಾಬ್‌, ಉತ್ತರ ಪ್ರದೇಶಗಳಲ್ಲಿ ಐಷಾರಾಮಿ ಕಾರುಗಳನ್ನು ಕದ್ದು, ಅವುಗಳನ್ನು ರಾಜ್ಯಕ್ಕೆ ತಂದು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಅಂತಾರಾಜ್ಯ ಕಾರುಗಳ್ಳರ ಜಾಲದ ಇಬ್ಬರು ಡೀಲರ್‌ಗಳನ್ನು ಗೋವಿಂದಪುರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಫ್ರೇಜರ್‌ ಟೌನ್‌ ನಿವಾಸಿ ಸೈಯದ್ ನಿಜಾಮ್ ಹಾಗೂ ತೆಲಂಗಾಣದ ಮೊಹಮ್ಮದ್ ಮುಜಾಫರ್ ಅಲಿಯಾಸ್ ಸಮೀರ್ ಬಂಧಿತರಾಗಿದ್ದು, ಆರೋಪಿಗಳಿಂದ 2.30 ಕೋಟಿ ರು. ಮೌಲ್ಯದ 9 ಐಷಾರಾಮಿ ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಜಾಲದಲ್ಲಿ ತಲೆಮರೆಸಿಕೊಂಡಿರುವ ಮಾಸ್ಟರ್‌ ಮೈಂಡ್‌ಗಳ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇತ್ತೀಚೆಗೆ ಕೆ.ಜಿ.ಹಳ್ಳಿ ನಿವಾಸಿ ಸುಲ್ತಾನ್ ಎಂಬುವರ ಸ್ಕೂಟರ್ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಸ್ಥಳೀಯ ಬಾತ್ಮೀದಾರರ ಮೂಲಕ ಮಾಹಿತಿ ಪಡೆದು ನಿಜಾಮ್‌ನನ್ನು ಬಂಧಿಸಿದಾಗ ಖದೀಮರ ಜಾಲ ಬಯಲಾಗಿದೆ.

ಸೈಯದ್‌ ನಿಜಾಮ್ ಹಾಗೂ ಮುಜಾಫರ್ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ಹಲವು ವರ್ಷಗಳಿಂದ ಇಬ್ಬರು ಕಾರು ಡೀಲರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಉತ್ತರ ಭಾರತದಲ್ಲಿ ಕಾರುಗಳ್ಳರ ಜಾಲವೊಂದು ಸಕ್ರಿಯವಾಗಿದ್ದು, ಈ ಜಾಲದಲ್ಲಿ ಕಾರುಗಳ ವಿಲೇವಾರಿಗೆ ನಿಜಾಮ್ ಹಾಗೂ ಮುಜಾಫರ್ ಸಾಥ್ ಕೊಟ್ಟಿದ್ದರು.

ಅಂತೆಯೇ ದೆಹಲಿ, ಪಂಜಾಬ್ ಹಾಗೂ ಉತ್ತರಪ್ರದೇಶದ ನೋಯ್ದಾ ನಗರದಲ್ಲಿ ಕಾರುಗಳನ್ನು ಉತ್ತರ ಭಾರತದ ಗ್ಯಾಂಗ್ ಕಳವು ಮಾಡುತ್ತಿತ್ತು. ಬಳಿಕ ಅವುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರು ಹಾಗೂ ಹೈದರಾಬಾದ್‌ ನಗರದಲ್ಲಿ ದಕ್ಷಿಣ ಭಾರತದ ನಿಜಾಮ್ ಹಾಗೂ ಮುಜಾಫರ್ ಮಾರಾಟ ಮಾಡುತ್ತಿದ್ದರು. ಹೀಗೆ ಸಂಪಾದಿಸಿದ ಹಣವನ್ನು ಗ್ಯಾಂಗ್ ಸದಸ್ಯರು ಹಂಚಿಕೊಳ್ಳುತ್ತಿದ್ದರು. ಈ ಜಾಲ ಹಲವು ವರ್ಷಗಳಿಂದ ಸಕ್ರಿಯವಾಗಿರುವ ಬಗ್ಗೆ ಮಾಹಿತಿ ಇದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸ್ಕೂಟರ್‌ ಕಳವು ಕೇಸ್‌ ತನಿಖೆಗಿಳಿದಾಗ ಸಿಕ್ಕಿಬಿದ್ರು!

ಕೆಲ ದಿನಗಳ ಹಿಂದೆ ಕೆ.ಜಿ.ಹಳ್ಳಿಯಲ್ಲಿ ಸುಲ್ತಾನ್ ಎಂಬುವರ ಸ್ಕೂಟರ್ ಅನ್ನು ನಿಜಾಮ್ ಕಳವು ಮಾಡಿದ್ದ. ಈ ಕೃತ್ಯದ ಬೆನ್ನತ್ತಿದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಅವರು, ಬಾತ್ಮೀದಾರರ ಮಾಹಿತಿ ಮೇರೆಗೆ ನಿಜಾಮ್‌ನನ್ನು ಪತ್ತೆ ಹಚ್ಚಿದ್ದಾರೆ. ಆಗ ಆತನ ಬಳಿ ಕಾರುಗಳ ದಾಖಲೆಗಳು ಪತ್ತೆಯಾಗಿವೆ. ಈ ಬಗ್ಗೆ ವಿಚಾರಿಸಿದಾಗ ತಾನು ಉತ್ತರ ಭಾರತದಿಂದ ಕಾರುಗಳನ್ನು ತಂದು ಮಾರಾಟ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದ. ಆದರೆ ಆರೋಪಿ ಹೇಳಿಕೆ ಬಗ್ಗೆ ಶಂಕೆಗೊಂಡ ಪೊಲೀಸರು, ಕಾರುಗಳ ದಾಖಲೆ ಪರಿಶೀಲಿಸಿದಾಗ ಸತ್ಯ ಬಯಲಾಗಿದೆ.

ಐಷಾರಾಮಿ ಕಾರುಗಳೇ ಟಾರ್ಗೆಟ್!

ಫಾರ್ಚೂನರ್‌, ಕ್ರೇಟಾ ಸೇರಿ ದುಬಾರಿ ಕಾರುಗಳನ್ನು ಆರೋಪಿಗಳು ಟಾರ್ಗೆಟ್ ಮಾಡಿದ್ದರು. ಹೊರ ರಾಜ್ಯದಲ್ಲಿ ಕದ್ದ ಕಾರಿಗೆ ಸ್ಥಳೀಯವಾಗಿ ಗುಜರಿಗೆ ಬಂದಿದ್ದ ಕಾರುಗಳ ನೋಂದಣಿ ಸಂಖ್ಯೆ ಬಳಸಿ ಮಾರುತ್ತಿದ್ದರು ಎಂದು ತಿಳಿದು ಬಂದಿದೆ.