ಬೆಂಗಳೂರಿನಲ್ಲಿ ವಾಸವಿದ್ದ ಅಮೆರಿಕ ಮೂಲದ ದಂಪತಿಯ ಮನೆಯಲ್ಲಿ ಮನೆಗೆಲಸದವನು ಕಳ್ಳತನ ಮಾಡಿದ್ದಾನೆ. ಈ ಪ್ರಕರಣದ ದೂರು ಅಮೆರಿಕಾ ರಾಯಭಾರ ಕಚೇರಿ ಮೂಲಕ ನೇರವಾಗಿ ಕರ್ನಾಟಕ ಡಿಜಿ-ಐಜಿಪಿಗೆ ಸಲ್ಲಿಕೆಯಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ 1ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು: ನಗರದಲ್ಲಿ ನಡೆದ ಕಳ್ಳತನ ಪ್ರಕರಣವೊಂದು ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆದಿದೆ. ಬೆಂಗಳೂರಿನಲ್ಲಿ ನಡೆದ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಅಮೆರಿಕಾದಿಂದಲೇ ಕರ್ನಾಟಕ ಡಿಜಿ ಹಾಗೂ ಐಜಿಪಿಗೆ ನೇರವಾಗಿ ದೂರು ಸಲ್ಲಿಕೆಯಾಗಿದೆ. ಅಮೆರಿಕಾ ರಾಯಭಾರ ಕಚೇರಿ (US Embassy) ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದೆ.
ಈ ಕಳ್ಳತನ ಘಟನೆ ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಮೆರಿಕಾ ಮೂಲದ ದಂಪತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಬಾಡಿಗೆ ಮನೆಯಲ್ಲಿ ವಾಸವಿದ್ದರು. ಟೆಕ್ಸಸ್ ಮೂಲದ ಸಾಫ್ಟ್‌ವೇರ್ ಉದ್ಯೋಗಿಗಳಾದ ಮೆರಿಯಲ್ ಮೊರೆನೋ ಹಾಗೂ ಅವರ ಪತಿ ಟೊಮ್ಮೋ ಕನ್ಕನಿಯನ್ ಈ ಮನೆಯ ನಿವಾಸಿಗಳಾಗಿದ್ದರು.
ಮನೆ ಕೆಲಸಗಾರನಿಂದಲೇ ಕೃತ್ಯ
ಈ ದಂಪತಿಯ ಮನೆಯಲ್ಲಿ ಕಳೆದ ಒಂದು ವರ್ಷದಿಂದ ಪಶ್ಚಿಮ ಬಂಗಾಳ ಮೂಲದ ಚಂದನ್ ರೌಲ್ ಎಂಬ ವ್ಯಕ್ತಿ ಮನೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ. ಇದೇ ತಿಂಗಳು 21ರಂದು, ಮನೆಯಲ್ಲಿದ್ದ ಅಮೂಲ್ಯ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಚಂದನ್ ರೌಲ್, ಮನೆಯಲ್ಲಿದ್ದ ಮೌಲ್ಯವಂತ ವಜ್ರಾಭರಣಗಳು, ಚಿನ್ನಾಭರಣಗಳು, 600 ಅಮೆರಿಕನ್ ಡಾಲರ್ ನಗದು ಕದ್ದೊಯ್ದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಳ್ಳತನ ಬೆಳಕಿಗೆ ಬಂದದ್ದು ಹೇಗೆ?
ಘಟನೆಯ ದಿನ ಪತಿ ಟೊಮ್ಮೋ ಕನ್ಕನಿಯನ್ ಅಮೆರಿಕಾದಲ್ಲಿದ್ದರೆ, ಪತ್ನಿ ಮೆರಿಯಲ್ ಮೊರೆನೋ ಕೆಲಸಕ್ಕೆ ತೆರಳಿದ್ದರು. ಸಂಜೆ ಮನೆಗೆ ಹಿಂತಿರುಗಿದಾಗ ಚಿನ್ನ–ವಜ್ರಾಭರಣಗಳು ನಾಪತ್ತೆಯಾಗಿರುವುದು ಕಂಡುಬಂದಿದೆ. ಕೂಡಲೇ ಈ ವಿಚಾರವನ್ನು ಪತಿಯ ಗಮನಕ್ಕೆ ತಂದಿದ್ದಾರೆ. ಪತಿ ಅಮೆರಿಕಾದಲ್ಲಿದ್ದ ಕಾರಣ, ಅಲ್ಲಿನ ಅಮೆರಿಕಾ ರಾಯಭಾರ ಕಚೇರಿ ಮೂಲಕವೇ ಈ ಕಳ್ಳತನ ಪ್ರಕರಣದ ಬಗ್ಗೆ ಕರ್ನಾಟಕ ಡಿಜಿ–ಐಜಿಪಿಗೆ ಅಧಿಕೃತ ದೂರು ಸಲ್ಲಿಸಲಾಗಿದೆ. ಈ ಬೆಳವಣಿಗೆ ಪೊಲೀಸ್ ಇಲಾಖೆಯಲ್ಲಿಯೂ ಸಂಚಲನ ಮೂಡಿಸಿದೆ.
ಕ್ಷಿಪ್ರ ಕಾರ್ಯಾಚರಣೆ: ಆರೋಪಿ ಬಂಧನ
ಡಿಜಿ–ಐಜಿಪಿಗೆ ದೂರು ಬಂದ ತಕ್ಷಣವೇ, ಬೆಂಗಳೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆಗೆ ಮುಂದಾದರು. ತನಿಖೆ ವೇಳೆ ಕಳ್ಳತನ ಮಾಡಿರುವುದು ಮನೆ ಕೆಲಸಗಾರ ಚಂದನ್ ರೌಲ್ ಎಂಬುದು ದೃಢಪಟ್ಟಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಕದ್ದ ಅಮೆರಿಕನ್ ಡಾಲರ್‌ಗಳನ್ನು ರೂಪಾಯಿಗೆ ಪರಿವರ್ತಿಸಿ, ಪರಾರಿಯಾಗಲು ಯತ್ನಿಸುತ್ತಿದ್ದಾನೆ ಎಂಬ ಮಾಹಿತಿ ಕೂಡ ಪೊಲೀಸರಿಗೆ ಲಭ್ಯವಾಗಿದೆ.
ಒಂದು ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ವಶ
ಬಂಧಿತ ಆರೋಪಿ ಚಂದನ್ ರೌಲ್‌ನಿಂದ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳು, ಅಮೂಲ್ಯ ವಜ್ರಾಭರಣಗಳು, ನಗದು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಪ್ರಕರಣ
ಸಾಮಾನ್ಯ ಕಳ್ಳತನ ಪ್ರಕರಣವೊಂದು ಅಮೆರಿಕಾ ರಾಯಭಾರ ಕಚೇರಿ ಮಟ್ಟಕ್ಕೆ ತಲುಪಿರುವುದು ಈ ಪ್ರಕರಣದ ಗಂಭೀರತೆಯನ್ನು ತೋರಿಸುತ್ತದೆ. ವಿದೇಶಿ ನಾಗರಿಕರ ಭದ್ರತೆ ಹಾಗೂ ಆಸ್ತಿಯ ರಕ್ಷಣೆಯ ದೃಷ್ಟಿಯಿಂದ ಈ ಪ್ರಕರಣವನ್ನು ಪೊಲೀಸರು ಅತ್ಯಂತ ಮಹತ್ವದಂತೆ ಪರಿಗಣಿಸಿದ್ದು, ಮುಂದಿನ ತನಿಖೆಯನ್ನು ಇನ್ನಷ್ಟು ಗಂಭೀರವಾಗಿ ನಡೆಸಲಾಗುತ್ತಿದೆ.


