ಬೆಂಗಳೂರಿನ ನೈಸ್ ರಸ್ತೆಯಲ್ಲಿ ಮೇ 4 ರಂದು ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರ ಅರ್ಧ ದೇಹ ಪತ್ತೆಯಾಗಿದೆ. ಒಂದೂವರೆ ತಿಂಗಳು ಕಳೆದರೂ ಮೃತರ ಗುರುತು ಅಥವಾ ಅಪಘಾತ ಮಾಡಿದ ವಾಹನದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ನಿಗೂಢ ಪ್ರಕರಣವನ್ನು ಭೇದಿಸಲು ಕಾಮಾಕ್ಷಿಪಾಳ್ಯ ಸಂಚಾ ಪೊಲೀಸರಿಂದ ತನಿಖೆ..
ಬೆಂಗಳೂರು (ಜೂ.17): ನೈಸ್ ರಸ್ತೆ ಅಪಘಾತ(Nice road accident)ದಲ್ಲಿ ಸಿಕ್ಕ ವ್ಯಕ್ತಿಯ ಅರ್ಧ ದೇಹ ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಈ ಸಂಬಂಧ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣ(Missing case)ವನ್ನು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು (Kamakshipalya Traffic Station Police) ಜಾಲಾಡುತ್ತಿದ್ದಾರೆ.
ಮೇ.4 ರಂದು ನೈಸ್ ರಸ್ತೆಯಲ್ಲಿ ಅಪಘಾತ
ಕಳೆದ ಮೇ 4ರಂದು ನೈಸ್ ರಸ್ತೆಯಲ್ಲಿ ಅಪಘಾತವಾಗಿದೆ ಎಂದು ಸಾರ್ವಜನಿಕರಿಂದ ಕರೆ ಬಂದಿತ್ತು. ವಿಷಯ ತಿಳಿದು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಅಪಘಾತದಲ್ಲಿ ಮೃತ ಪಟ್ಟ ವ್ಯಕ್ತಿಯೊಬ್ಬರ ಅಪ್ಪಚ್ಚಿಯಾಗಿದ್ದ ಅರ್ಧ ದೇಹ ಸಿಕ್ಕಿದೆ. ಆದರೆ ಮೃತರ ಗುರುತು ಪತ್ತೆಯಾಗಿಲ್ಲ. ಮೃತಪಟ್ಟವರು 35-40 ವರ್ಷದವರು ಎಂದು ಕಂಡು ಬಂದಿದೆ.
ಅರ್ಧದೇಹದ ಗುರುತು ಪತ್ತೆಯಾಗಿಲ್ಲ
ಅಪಘಾತ ಸ್ಥಳದಲ್ಲಿ ಮೃತ ವ್ಯಕ್ತಿಗೆ ಸಂಬಂಧಿಸಿದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಘಟನೆ ನಡೆದು ಒಂದೂವರೆ ತಿಂಗಳು ಕಳೆದಿದ್ದರೂ ಮೃತರ ಗುರುತು ಪತ್ತೆಯಾಗಿಲ್ಲ. ಅಪಘಾತ ಮಾಡಿದ ವಾಹನ ಯಾವುದು ಎಂಬುದು ಕೂಡ ಪತ್ತೆಯಾಗಿಲ್ಲ. ಹೀಗಾಗಿ ಈ ಅಪಘಾತ ಪ್ರಕರಣವನ್ನು ಬೇಧಿಸುವುದು ಪೊಲೀಸರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣಗಳ ಬೆನ್ನು ಬಿದ್ದಿದ್ದಾರೆ.


