ಕುಡಿದ ನಶೆಯಲ್ಲಿ ಗಲಾಟೆ: ಹುಡುಗಿ ವಿಚಾರಕ್ಕೆ ಸ್ನೇಹಿತನನ್ನೇ ಹತ್ಯೆಗೈದ
* ಯುವತಿ ವಿಚಾರಕ್ಕೆ ಸ್ನೇಹಿತರಿಬ್ಬರ ನಡುವೆ ಜಗಳ: ಕೊಲೆಯಲ್ಲಿ ಅಂತ್ಯ
* ಈರುಳ್ಳಿ ಸುಲಿಯುವ ಸಾಧನದಿಂದ ಇರಿದು ಹತ್ಯೆ
* ಯುವತಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಗೆಳೆಯ
ಬೆಂಗಳೂರು(ನ.01): ಮದ್ಯದ ಅಮಲಿನಲ್ಲಿ ಯುವತಿ ವಿಚಾರಕ್ಕೆ ಇಬ್ಬರು ಸ್ನೇಹಿತರ(Friends) ನಡುವೆ ನಡೆದ ಗಲಾಟೆ ಒಬ್ಬನ ಕೊಲೆಯಲ್ಲಿ(Murder) ಅಂತ್ಯವಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಾಮಾಕ್ಷಿಪಾಳ್ಯದ ನಿವಾಸಿ ಕೇಶವಲು ರೆಡ್ಡಿ (35) ಕೊಲೆಯಾದ ದುರ್ದೈವಿ. ರಾಜೇಶ್ ಅಲಿಯಾಸ್ ಶಿವಣ್ಣ (38) ಬಂಧಿತ. ಕೇಶವಲು ಹಾಗೂ ರಾಜೇಶ್ ಕೊಟ್ಟಿಗೆಪಾಳ್ಯದ ಮಾಲ್ಗುಡಿ ಫಾಮ್ಸ್‌ರ್ ಕಂಪನಿಯಲ್ಲಿ ಸೂಪರ್ ವೈಸರ್‌ಗಳಾಗಿದ್ದಾರೆ. ಅ.29ರಂದು ಕೆಲಸ ಮುಗಿಸಿ ಮದ್ಯಸೇವಿಸಿದ್ದಾರೆ(Alcohol). ಈ ವೇಳೆ ತಮ್ಮದೇ ಕಂಪನಿಯಲ್ಲಿ ಕೆಲಸ ಮಾಡುವ ಯುವತಿ ವಿಚಾರ ಚರ್ಚೆಗೆ ಬಂದಿದ್ದು, ಕೇಶವಲು ರೆಡ್ಡಿ ಆ ಯುವತಿ(Girl) ಬಗ್ಗೆ ರಾಜೇಶ್ ಜತೆ ಕೆಟ್ಟದಾಗಿ ಮಾತನಾಡಿದ್ದಾನೆ. ಆಕೆಗೆ ಹೆಚ್ಚಿನ ಸಂಬಳ(Salary) ನೀಡುವುದು ಸರಿಯಲ್ಲ. ಆಕೆಯೊಂದಿಗೆ ನೀನು ಹೆಚ್ಚಿನ ಆತ್ಮೀಯತೆ ಬೆಳೆಸಿಕೊಂಡಿದ್ದೀಯಾ ಎಂದು ಛೇಡಿಸಿದ್ದಾನೆ.
ಹೊಸಪೇಟೆಯ ವೃದ್ಧೆ ಕೊಲೆ ಪ್ರಕರಣ: ಐವರು ಆರೋಪಿಗಳ ಬಂಧನ
ಇದರಿಂದ ರಾಜೇಶ್ ಕೋಪಗೊಂಡು ಆಕೆ ನನ್ನ ಸಹೋದರಿ ಇದ್ದಂತೆ ಎಂದು ಹೇಳಿದ್ದಾನೆ. ಹೀಗೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕ್ಕೇರಿದೆ. ಈ ವೇಳೆ ರಾಜೇಶ್ ಸಮೀಪದಲ್ಲೇ ಇದ್ದ ಈರುಳ್ಳಿ ಸುಲಿಯುವ ಸಾಧನ ತೆಗೆದುಕೊಂಡು ಕೇಶವಲು ರೆಡ್ಡಿ ಕಿಬ್ಬೊಟ್ಟೆಗೆ ಚುಚ್ಚಿದ್ದಾನೆ. ಇದರಿಂದ ಕೇಶವಲು ಜೋರಾಗಿ ಕಿರುಚಿದ್ದು, ಕಂಪನಿಯ ಸೆಕ್ಯೂರಿಟಿ ಗಾರ್ಡ್(Security Guard) ಒಳಗೆ ಬಂದು ನೋಡಿದಾಗ ಕೇಶವಲು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ. ಬಳಿಕ ಕಂಪನಿ ಮಾಲೀಕರಿಗೆ ವಿಚಾರ ತಿಳಿದು ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದರು.
ಕೂಡಲೇ ಗಾಯಾಳು ಕೇಶವಲುನನ್ನು ಆಸ್ಪತ್ರೆಗೆ(Hospital) ಕರೆದೊಯ್ಯಲು ಮುಂದಾಗಿದ್ದಾರೆ, ಆದರೆ ಮಾರ್ಗ ಮಧ್ಯೆ ಕೇಶವುಲು ಮೃತಪಟ್ಟಿದ್ದಾನೆ ಎಂದು ಪೊಲೀಸರು(Police) ತಿಳಿಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ಆರೋಪಿ(Accused) ರಾಜೇಶ್‌ನನ್ನು ಬಂಧಿಸಿದ್ದಾರೆ(Arrest).
ಇಬ್ಬರು ವಾಹನ ಕಳ್ಳರ ಸೆರೆ: 6 ಲಕ್ಷ ವಾಹನಗಳ ಜಪ್ತಿ
ಮನೆ ಎದುರು ನಿಲ್ಲಿಸುವ ವಾಹನಗಳ ಕಳವು ಮಾಡುತ್ತಿದ್ದ ಇಬ್ಬರು ಕಿಡಿಗೇಡಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಗದೀಶ್ ಮತ್ತು ಜಯರಾಂ ಬಂಧಿತರು. ಆರೋಪಿಗಳಿಂದ 6.60 ಲಕ್ಷ ರು. ಮೌಲ್ಯದ ಒಂದು ಆಟೋರಿಕ್ಷಾ, 11 ದ್ವಿಚಕ್ರ ವಾಹನ, ವಿವಿಧ ಕಂಪನಿಗಳ 10 ಮೊಬೈಲ್ ಫೋನ್ ಹಾಗೂ 1,400 ರು. ನಗದು ವಶಪಡಿಸಿಕೊಳ್ಳಲಾಗಿದೆ. ಕೆಲ ತಿಂಗಳ ಹಿಂದೆ ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಆಟೋರಿಕ್ಷಾ ಕಳವುವಾಗಿತ್ತು. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೋಜು-ಮಸ್ತಿಗೆ ಹಣ ಹೊಂದಿಸಲು ಆರೋಪಿಗಳು ಮನೆ ಎದುರು ನಿಲುಗಡೆ ಮಾಡಿದ ವಾಹನ ಕಳವು ಮಾಡುತ್ತಿದ್ದರು. ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಬ್ಯಾಡರಹಳ್ಳಿ ಮತ್ತು ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ವಿವಿಧ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.