ಬೆಂಗಳೂರಿನಲ್ಲಿ ಆಟೋ ಖರೀದಿಸಲು ಹಣ ಕೊಡದ ಅಜ್ಜಿಯ ಮನೆಯಿಂದ ಮೊಮ್ಮಗ 81 ಗ್ರಾಂ ಚಿನ್ನ ಮತ್ತು 9.41 ಲಕ್ಷ ರೂ. ಕದ್ದಿದ್ದಾನೆ. ನಂದಿನಿ ಲೇಔಟ್ ಪೊಲೀಸರು ಆರೋಪಿ ಮೊಮ್ಮಗನನ್ನು ಬಂಧಿಸಿದ್ದಾರೆ.

ಬೆಂಗಳೂರು (ಮೇ 28): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದ ಅಜ್ಜಿಯ ಬಳಿ ಹಣ ಇರುವುದನ್ನು ಮನಗಂಡಿದ್ದ ಮೊಮ್ಮಗ ನನಗೆ ದುಡಿಮೆಗಾಗಿ ಆಟೋ ಕೊಡಿಸು ಎಂದು ಕೇಳಿದ್ದನು. ಆದರೆ, ಮೊಮ್ಮಗನಿಗೆ ಹಣ ಕೊಡದೇ, ಆಟೋ ಕೊಡಿಸದ ಅಜ್ಜಿಯ ಮೇಲೆ ಕೋಪಗೊಂಡ ಮೊಮ್ಮಗ ಅಜ್ಜಿ ಮನೆಯಲ್ಲಿರದ ವೇಳೆ 81 ಗ್ರಾಂ ಚಿನ್ನಾಭರಣ ಹಾಗೂ 9.41 ಲಕ್ಷ ರೂ. ಹಣವನ್ನು ಕದ್ದು ಪರಾರಿ ಆಗಿದ್ದಾನೆ. ಈ ಕುರಿತು ಅಜ್ಜಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ಮೊಮ್ಮಗನನ್ನು ಬಂಧಿಸಿದ್ದಾರೆ.

ತಮ್ಮ ಅಜ್ಜಿ ಮನೆಗೆ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದ ಮೊಮ್ಮಗನನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಮಿಥುನ್ (24) ಎಂಬಾತನು, ಆಟೋ ಖರೀದಿಸಬೇಕೆಂಬ ಆಲೋಚನೆಯಿಂದ, ತನ್ನ ಅಜ್ಜಿ ಪುಟ್ನಂಜಮ್ಮ ಅವರ ಮನೆಗೆ ನಕಲಿ ಕೀ ಬಳಸಿ ಪ್ರವೇಶಿಸಿ ಕಳ್ಳತನ ನಡೆಸಿದ್ದಾನೆ. ಪೊಲೀಸರ ಪ್ರಕಾರ, ಮಿಥುನ್ ತಮ್ಮ ಅಜ್ಜಿ ಬಳಿ ಆಟೋ ಖರೀದಿಸಲು ಹಣ ಕೇಳಿದ್ದ. ಆದರೆ ಅಜ್ಜಿ ಹಣ ನೀಡಲು ನಿರಾಕರಿಸಿದ ಕಾರಣ, ದುಡ್ಡಿದ್ದರೂ ತನಗೆ ಕೊಡಲಿಲ್ಲವೆಂದು ಕೋಪಗೊಂಡ ಮಿಥುನ್, ಕಳ್ಳತನಕ್ಕೆ ಯೋಜನೆ ಹಾಕಿದ್ದಾನೆ. ಅಜ್ಜಿ ಮನೆಯಲ್ಲಿಲ್ಲದ ವೇಳೆ ನಕಲಿ ಕೀ ಮೂಲಕ ಒಳನುಗ್ಗಿ, 81 ಗ್ರಾಂ ಚಿನ್ನಾಭರಣ ಮತ್ತು ₹9,44,000 ನಗದು ಅಪಹರಿಸಿದ್ದಾನೆ.

ಈತನ ಕಳ್ಳತನ ಚಟುವಟಿಕೆಗೆ ಪತ್ತೆ ಹಚ್ಚಿದ ನಂದಿನಿ ಲೇಔಟ್ ಪೊಲೀಸರು, ಶೀಘ್ರ ಕಾರ್ಯಾಚರಣೆ ನಡೆಸಿ ಆರೋಪಿ ಮಿಥುನ್‌ನನ್ನು ಬಂಧಿಸಿದ್ದಾರೆ. ಕಳ್ಳತನದಿಂದ ಪಡೆದುಕೊಂಡ ಹಣದಿಂದ ಆಟೋ ಖರೀದಿಸುವ ಮುನ್ನವೇ ಮಿಥುನ್, ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿಗಾಗಿ ತನಿಖಾ ಅಧಿಕಾರಿಗಳು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.