ಬೆಂಗಳೂರಿನ ಕೆ.ಆರ್. ಪುರದಲ್ಲಿ, ನಮಾಜ್ ಮುಗಿಸಿ ಬರುತ್ತಿದ್ದ ಆಟೋ ಚಾಲಕ ರೋಷನ್, ಯುವಕರ ಜಗಳ ಬಿಡಿಸಲು ಹೋಗಿ ಮಾರಣಾಂತಿಕ ಹಲ್ಲೆಗೊಳಗಾಗಿದ್ದಾರೆ. ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ನಡೆದ ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಚಾಲಕ ಆಸ್ಪತ್ರೆಗೆ ದಾಖಲಾಗಿದ್ದು, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರು (ಫೆ.3): ರಾಜಧಾನಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮಿತಿಮೀರಿದ್ದು, ಸಾರ್ವಜನಿಕರು ಆತಂಕದಲ್ಲಿ ಬದುಕುವಂತಾಗಿದೆ. ನಗರದ ಕೆ.ಆರ್. ಪುರದ ದೇವಸಂದ್ರ ಸಮೀಪದ ಮದೀನಾ ಮಸೀದಿ ರಸ್ತೆಯಲ್ಲಿ ಫೆಬ್ರವರಿ 1ರ ರಾತ್ರಿ ಭೀಕರ ಘಟನೆಯೊಂದು ನಡೆದಿದೆ. ಜಗಳ ತಡೆಯಲು ಹೋದ ಆಟೋ ಚಾಲಕ ರೋಷನ್ ಎಂಬುವವರ ಮೇಲೆ ಪುಂಡರ ಗುಂಪು ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಕುತ್ತಿಗೆ ಸೀಳಿರುವ ಘೋರ ಕೃತ್ಯ ಎಸಗಿದ್ದಾರೆ.

Add Asianetnews Kannada as a Preferred SourcegooglePreferred

ನಮಾಜ್ ಮುಗಿಸಿ ಬರುವಾಗ ನಡೆದ ಹಲ್ಲೆ

ಫೆಬ್ರವರಿ 1ರ ರಾತ್ರಿ ಸುಮಾರು 8:15ರ ಸಮಯದಲ್ಲಿ ರೋಷನ್ ನಮಾಜ್ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದರು. ಈ ವೇಳೆ ಮಸೀದಿ ರಸ್ತೆಯಲ್ಲಿ ತಮ್ಮ ಗೆಳೆಯ ಶೋಯಬ್ ಜೊತೆ ಮಾತನಾಡುತ್ತಾ ನಿಂತಿದ್ದಾಗ ಅಲ್ಲಿ ಯುವಕರ ಗುಂಪುಗಳ ನಡುವೆ ಜಗಳ ನಡೆಯುತ್ತಿತ್ತು. ಇದನ್ನು ಕಂಡು ಜಗಳ ಬಿಡಿಸಲು ರೋಷನ್ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಆಕ್ರೋಶಗೊಂಡ 10 ರಿಂದ 15 ಜನರ ಪುಂಡರ ಗುಂಪು ರೋಷನ್ ಮೇಲೆ ಏಕಾಏಕಿ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾರೆ.

ನೇಪಾಳಿ ಯುವತಿಗಾಗಿ ರಕ್ತಪಾತ

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಗಲಾಟೆಯ ಹಿಂದೆ ಪ್ರೇಮ ಪ್ರಕರಣವಿರುವುದು ತಿಳಿದುಬಂದಿದೆ. ನೇಪಾಳಿ ಯುವತಿಯೊಬ್ಬಳನ್ನು ಪ್ರೀತಿಸುವ ವಿಚಾರವಾಗಿ 'ಮಾಮು' ಮತ್ತು ರೋಷನ್ ಎಂಬುವವರ ನಡುವೆ ಮೊದಲೇ ವೈಮನಸ್ಸಿನ ಜಗಳ ಶುರುವಾಗಿತ್ತು ಎನ್ನಲಾಗಿದೆ. ಈ ಜಗಳ ವಿಕೋಪಕ್ಕೆ ಹೋಗಿ ನಡುರಸ್ತೆಯಲ್ಲೇ ಯುವಕರ ಗುಂಪುಗಳು ಹೊಡೆದಾಡಿಕೊಂಡಿವೆ. ರೋಷನ್ ಕೂಡ ಈ ಜಗಳದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದನೇ ಎಂಬ ಅನುಮಾನವೂ ಮೂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಹಲ್ಲೆಗೊಳಗಾದ ಆಟೋ ಚಾಲಕ ರೋಷನ್ ಸ್ಥಿತಿ ಗಂಭೀರವಾಗಿದ್ದು, ಸದ್ಯ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಇಡೀ ಘಟನೆಯ ದೃಶ್ಯಾವಳಿಗಳು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕೆ.ಆರ್. ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಹಾಗೂ ದಾಳಿ ನಡೆಸಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.