ಕೆ.ಆರ್‌.ಮಾರ್ಕೆಟ್‌ನ ಹೂವಿನ ವ್ಯಾಪಾರಿ ಕೊಲೆ ಕೇಸ್‌ ಗೆ ಸಂಬಂಧಿಸಿದಂತೆ ಎಣ್ಣೆ ಪಾರ್ಟಿ ಮಾಡುವಾಗ ಕೊಂದು ಕೇರಳಕ್ಕೆ ಪರಾರಿ ಆಗುತ್ತಿದ್ದವರನ್ನು ಸೆರೆ ಹಿಡಿಯಲಾಗಿದೆ.

ಬೆಂಗಳೂರು (ಜು.31): ಇತ್ತೀಚೆಗೆ ಮದ್ಯದ ವಿಚಾರಕ್ಕೆ ನಡೆದ ಗಲಾಟೆ ವೇಳೆ ವ್ಯಕ್ತಿಯೊಬ್ಬರ ತಲೆಗೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ ಪ್ರಕರಣ ಸಂಬಂಧ ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ವಸಂತ್‌ ಕುಮಾರ್‌(25), ಸರಣ್‌ ರಾಜ್‌(26) ಹಾಗೂ ಮುಗುಂದನ್‌(25) ಬಂಧಿತರು. ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿಗಳು ಜುಲೈ 27ರಂದು ತಡರಾತ್ರಿ 1.30ರ ಸುಮಾರಿಗೆ ಕೆ.ಆರ್‌.ಮಾರುಕಟ್ಟೆಯಲ್ಲಿ ಪ್ರಶಾಂತ್‌(30) ಎಂಬಾತನ ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹತ್ಯೆಯಾದ ಪ್ರಶಾಂತ್‌ ಹಾಗೂ ಆರೋಪಿಗಳು ಕೆ.ಆರ್‌.ಮಾರುಕಟ್ಟೆಯ ಹೂವಿನ ಅಂಗಡಿಗಳಲ್ಲಿ ಕೆಲಸ ಮಾಡುತ್ತಾರೆ. ಜುಲೈ 27ರ ತಡರಾತ್ರಿ ಪ್ರಶಾಂತ್‌ ಹಾಗೂ ಆರೋಪಿಗಳು ಮದ್ಯ ಸೇವಿಸಿದ್ದಾರೆ. ಬಳಿಕ ಮದ್ಯದ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ರೊಚ್ಚಿಗೆದ್ದ ಆರೋಪಿಗಳು ದೊಣ್ಣೆಯಿಂದ ಪ್ರಶಾಂತ್‌ ತಲೆಗೆ ಹೊಡೆದು ಹಲ್ಲೆ ನಡೆಸಿದ್ದರು. ಈ ವೇಳೆ ತೀವ್ರ ರಕ್ತಸ್ರಾವ ಕುಸಿದು ಬಿದ್ದ ಪ್ರಶಾಂತ್‌ ಸ್ಥಳದಲ್ಲೇ ಮೃತಪಟ್ಟಿದ್ದ. ಬಳಿಕ ಆರೋಪಿಗಳು ಪರಾರಿಯಾಗಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹತ್ಯೆ ಬಳಿಕ ಆರೋಪಿಗಳು ತಮಿಳುನಾಡಿನ ತಿರುವಣ್ಣಾಮಲೈಗೆ ತೆರಳಿದ್ದರು. ಅಲ್ಲಿನ ತಂದ್ರಾಪಟ್ಟು ಬಸ್‌ ನಿಲ್ದಾಣದಿಂದ ಕೇರಳಕ್ಕೆ ಪರಾರಿಯಾಗಲು ಬಸ್‌ಗಾಗಿ ಕಾಯುವಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳು ತಮಿಳುನಾಡಿನಲ್ಲೇ ಇರುವ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕದಿರೇನಹಳ್ಳಿಯ ಪ್ರಶಾಂತ್‌, ಮಾರ್ಕೆಟ್‌ನಲ್ಲಿ ಹೂ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಮದ್ಯ ವ್ಯಸನಿಯಾದ ಆತ, ರಾತ್ರಿ ತನ್ನ ಅಕ್ಕಪಕ್ಕದ ಅಂಗಡಿಯ ಸ್ನೇಹಿತರ ಜತೆ ಸೇರಿ ಮದ್ಯ ಸೇವಿಸುತ್ತಿದ್ದ. ಬುಧವಾರ ರಾತ್ರಿ ಕೂಡಾ ಗೆಳೆಯರು ಮದ್ಯ ಸೇವಿಸಿದಾಗ ಗಲಾಟೆ ನಡೆದು ಸ್ನೇಹಿತರಿಂದಲೇ ಪ್ರಾಣ ಕಳೆದುಕೊಂಡಿದ್ದ.

ದಂಡ ತಪ್ಪಿಸಲು ಒಂದೇ ಬೈಕ್‌ಗೆ ಹಿಂದೆ, ಮುಂದೆ ಬೇರೆ ನಂಬರ್ ಹಾಕಿ ಸಿಕ್ಕಿಬಿದ್ದ ಚಾಲಾಕಿ!

ಡ್ರಗ್ಸ್ ದಂಧೆಯಲ್ಲಿ ಭಾಗಿ ಶಂಕೆ: ರೌಡಿಯ ಬಂಧನ
ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ಕುಖ್ಯಾತ ಡ್ರಗ್ಸ್ ಪೆಡ್ಲರ್‌ನನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಶ್ರೀರಾಮಪುರ ಠಾಣೆ ರೌಡಿ ಶೀಟರ್‌ ಸುನೀಲ್‌ ಬಂಧಿತ ಡ್ರಗ್‌್ಸ ಪೆಡ್ಲರ್‌. ಈತನ ವಿರುದ್ಧ ಶ್ರೀರಾಮಪುರ ಪೊಲೀಸ್‌ ಠಾಣೆ ಹಾಗೂ ಅಬಕಾರಿ ಇಲಾಖೆಯಲ್ಲಿ ಒಟ್ಟು 8 ಎನ್‌ಡಿಪಿಎಸ್‌ ಪ್ರಕರಣಗಳ ದಾಖಲಾಗಿವೆ. ಭವಿಷ್ಯದಲ್ಲಿ ಈತ ಮಾದಕವಸ್ತು ಸಂಗ್ರಹ, ಸಾಗಟ ಹಾಗೂ ಮಾರಾಟದಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಇರುವುದರಿಂದ ಈತನ ವಿರುದ್ಧ ಪಿಟಿ ಎನ್‌ಡಿಪಿಎಸ್‌ ಕಾಯ್ದೆಯಡಿ ಬಂಧಿಸಲು ನಗರ ಪೊಲೀಸ್‌ ಆಯಕ್ತರು ಆದೇಶಿಸಿದ್ದರು. ಅದರಂತೆ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Bengaluru Crime; ಎಣ್ಣೆ ಮತ್ತಿನಲ್ಲಿ ಸ್ನೇಹಿತನನ್ನೇ ಕೊಂದ ಗೆಳೆಯ!

ಹಣ ಸಂಪಾದನೆಗಾಗಿ ಅಕ್ರಮ ಗ್ಯಾಸ್‌ ಫಿಲ್ಲಿಂಗ್‌ ದಂಧೆ
ಅಕ್ರಮ ಗ್ಯಾಸ್‌ ರೀಫಿಲ್ಲಿಂಗ್‌ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ ಮಾಡಿರುವ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು, ಸುಮಾರು .1 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣಾ ವ್ಯಾಪ್ತಿಯ ಬೆಟ್ಟದಾಸಪುರದ ಅಂಗಡಿಯೊಂದಲ್ಲಿ ಅಕ್ರಮವಾಗಿ ಗ್ಯಾಸ್‌ ಲ್ಲಿಂಗ್‌ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅಂಗಡಿ ಮೇಲೆ ದಾಳಿ ಮಾಡಿ, ಎಚ್‌ಪಿ, ಇಂಡೇನ್‌ ಸಿಲಿಂಡರ್‌ಗಳು, ರೀ ಫಿಲ್ಲಿಂಗ್‌ ಬಳಸುವ ಹ್ಯಾಂಡ್‌ ಪಂಪ್‌, ತೂಕದ ಯಂತ್ರ ಜಪ್ತಿ ಮಾಡಲಾಗಿದೆ. ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಅಂಗಡಿ ಮಾಲಿಕ ಈ ರೀಫಿಲ್ಲಿಂಗ್‌ ದಂಧೆಯಲ್ಲಿ ತೊಡಗಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.