Asianet Suvarna News Asianet Suvarna News

ಐಟಿ ಸಿಟಿ ಬೆಂಗಳೂರು ಈಗ ಕ್ರೈಂ ಸಿಟಿ! ಒಂದೇ ವರ್ಷದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾರೀ ಹೆಚ್ಚಳ!

ಕಳೆದ ವರ್ಷ ರಾಜಧಾನಿಯಲ್ಲಿ ಕೊಲೆ, ದರೋಡೆ ಹೀಗೆ ಅಪರಾಧ ಕೃತ್ಯಗಳು ಗಣನೀಯವಾಗಿ ಹೆಚ್ಚಿದ್ದು, ''''ಐಟಿ ಸಿಟಿ'''' ಖ್ಯಾತಿಗೆ ''''ಕ್ರೈಂ ಸಿಟಿ'''' ಎಂಬ ಕಳಂಕ ಹೊತ್ತಿಕೊಳ್ಳುತ್ತಿದೆಯೇ ಎಂಬ ಆತಂಕ ಎದುರಾಗಿದೆ.

Bengaluru Crime Massive increase in crime in a single year rav
Author
First Published Jan 4, 2024, 6:09 AM IST

ಬೆಂಗಳೂರು (ಜ.4) :  ಕಳೆದ ವರ್ಷ ರಾಜಧಾನಿಯಲ್ಲಿ ಕೊಲೆ, ದರೋಡೆ ಹೀಗೆ ಅಪರಾಧ ಕೃತ್ಯಗಳು ಗಣನೀಯವಾಗಿ ಹೆಚ್ಚಿದ್ದು, ''''ಐಟಿ ಸಿಟಿ'''' ಖ್ಯಾತಿಗೆ ''''ಕ್ರೈಂ ಸಿಟಿ'''' ಎಂಬ ಕಳಂಕ ಹೊತ್ತಿಕೊಳ್ಳುತ್ತಿದೆಯೇ ಎಂಬ ಆತಂಕ ಎದುರಾಗಿದೆ.

2023ನೇ ಸಾಲಿನ ವಾರ್ಷಿಕ ಅಪರಾಧ ವರದಿಯನ್ನು ಬುಧವಾರ ಪೊಲೀಸರು ಬಿಡುಗಡೆಗೊಳಿಸಿದ್ದು, ಇದರಲ್ಲಿ ಕೊಲೆಗಳು ಶೇ.31, ದರೋಡೆ ಶೇ.41 ಹಾಗೂ ಸೈಬರ್‌ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದೆ. ಅಲ್ಲದೆ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕೃತ್ಯಗಳಿಗೆ ಕಡಿವಾಣ ಬೀಳದೆ ಏರಿಕೆಯಾಗಿದ್ದು ವರದಿಯಾಗಿದೆ. 

ಮನೆ ಬಳಿ ಮಕ್ಕಳು ಮೂತ್ರ ಮಾಡಿದ್ದಕ್ಕೆ ಅಂಗನವಾಡಿ ಸಹಾಯಕಿ ಮೂಗು ಕತ್ತರಿಸಿದ ಪಾಪಿಗಳು!

2021ರಲ್ಲಿ 7566 ಹಾಗೂ 2022ರಲ್ಲಿ 9254 ಪ್ರಕರಣಗಳು ವರದಿಯಾದರೆ 2023ರಲ್ಲಿ 12627 ಪ್ರಕರಣಗಳು ದಾಖಲಾಗಿವೆ. ಆದರೆ ಅಪರಾಧ ಪತ್ತೆದಾರಿಕೆ ಕುಂಠಿತವಾಗಿದೆ. ಕಳೆದ ವರ್ಷ 12 ಸಾವಿರ ಪೈಕಿ ಕೇವಲ 3603 ಪ್ರಕರಣಗಳು ಪತ್ತೆಯಾಗಿವೆ.

ಕೊಲೆಗೆ ನಾನಾ ಕಾರಣಗಳು:

3 ವರ್ಷಗಳಲ್ಲಿ 533 ಹತ್ಯೆಗಳು ನಡೆದಿವೆ. ಅವುಗಳಲ್ಲಿ ತಕ್ಷಣ ಪ್ರಚೋದನೆಗೊಳಗಾಗಿ (49), ಅನೈತಿಕ ಸಂಬಂಧ (32), ಕೌಟುಂಬಿಕ ಕಲಹ (31), ವೈರತ್ವ (31) ಹಾಗೂ ಹಣಕಾಸು ವಿವಾದ (17)ಗಳಿಗೆ ಅಧಿಕ ಹತ್ಯೆಗಳಾಗಿವೆ. ಆದರೆ ಲಾಭಕ್ಕಾಗಿ ಹಾಗೂ ಭೂ ವಿವಾದಗಳಿಗೆ ಹತ್ಯೆಗಳಲ್ಲಿ ಇಳಿಕೆ ಕಂಡು ಬಂದಿದೆ. 2021ರಲ್ಲಿ 153, 2022ರಲ್ಲಿ 173 ಹಾಗೂ 2023ರಲ್ಲಿ 207 ಸೇರಿ 3 ವರ್ಷಗಳಲ್ಲಿ 533 ಹತ್ಯೆಗಳು ನಡೆದಿವೆ.

ಮೊಬೈಲ್‌ ಕದ್ದರೆ ದರೋಡೆ ಕೇಸ್‌:

ಮೊಬೈಲ್ ಕಳ್ಳತನವನ್ನು ದರೋಡೆ ಎಂದು ಪರಿಗಣಿಸಿದ್ದು ಪ್ರಕರಣ ಹೆಚ್ಚಳಕ್ಕೆ ಕಾರಣವಾಗಿದೆ. ಹೀಗಾಗಿ 2023ರಲ್ಲಿ ದಾಖಲಾದ 673 ದರೋಡೆ ಪ್ರಕರಣಗಳಲ್ಲಿ 385 (ಶೇ.57) ಮೊಬೈಲ್ ದೋಚಿದ ಪ್ರಕರಣಗಳಾಗಿವೆ. ಇದರಿಂದ ಮೊಬೈಲ್ ಸುಲಿಗೆಕೋರರಿಗೆ ಶಿಕ್ಷೆ ಪ್ರಮಾಣ ಹೆಚ್ಚಾಗಲಿದೆ.

ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ:

ರಾಜಧಾನಿಯಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕೃತ್ಯಗಳು ಏರು ಮುಖವಾಗಿದೆ. ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಇದರಿಂದ ಸಂತ್ರಸ್ತೆಯರು ದೂರು ನೀಡಲು ಮುಂದಾಗುತ್ತಿರುವುದು ಅಪರಾಧ ಪ್ರಕರಣಗಳ ದಾಖಲು ಹೆಚ್ಚಾಗಲು ಕಾರಣವಾಗಿದೆ. 2023ರಲ್ಲಿ 2630 ದೌರ್ಜನ್ಯ ಪ್ರಕರಣ ವರದಿಯಾದರೆ 2023ರಲ್ಲಿ 3260 ಪ್ರಕರಣಗಳಾಗಿವೆ. ಅದೇ ರೀತಿ ಮಕ್ಕಳ ಮೇಲೆ ದೌರ್ಜನ್ಯ ಸಂಬಂಧ 2022ರಲ್ಲಿ 561 ಹಾಗೂ 2023ರಲ್ಲಿ 631 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಪೊಕ್ಸೋ ಅಡಿ 2023ರಲ್ಲಿ 560 ಪ್ರಕರಣಗಳು ವರದಿಯಾಗಿವೆ. ಇನ್ನು ಈ ಪ್ರಕರಣಗಳ ತನಿಖೆಯಲ್ಲಿ ಶೇ.90ರಷ್ಟು ಪ್ರಗತಿ ಸಾಧಿಸಿದ್ದಾರೆ.

ಐಟಿ ಸಿಟಿಯಲ್ಲಿ ಸೈಬರ್‌ ವಂಚಕರ ಹಾವಳಿ:

ನಗರದಲ್ಲಿ ಸೈಬರ್ ಪಾತಕಿಗಳ ಹಾವಳಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. 2022ರಲ್ಲಿ 9940 ಪ್ರಕರಣಗಳು ದಾಖಲಾಗಿದ್ದರೆ, 2023ರಲ್ಲಿ 17623 ಪ್ರಕರಣಗಳು ವರದಿಯಾಗಿವೆ. ಇನ್ನು ಪತ್ತೆದಾರಿಕೆಯಲ್ಲಿ ಸಾಧನೆ ಕಳಪೆಯಾಗಿದ್ದು, ಕಳೆದ ವರ್ಷ 17 ಸಾವಿರ ಪ್ರಕರಣಗಳಲ್ಲಿ ಕೇವಲ 1271 ಪ್ರಕರಣಗಳು ಮಾತ್ರ ಪತ್ತೆಯಾಗಿವೆ.

ಆತ್ಮಹತ್ಯೆ ಹಾಗೂ ಆಕಸ್ಮಿಕ ಸಾವು ಹೆಚ್ಚಳ:

ಆತ್ಮಹತ್ಯೆ ಹಾಗೂ ಆಕಸ್ಮಿಕ ಸಾವಿನ ಪ್ರಮಾಣದಲ್ಲಿ ಏರಿಕೆ ಆತಂಕ ತಂದಿದೆ. 2022ರಲ್ಲಿ 2299 ಹಾಗೂ 2023ರಲ್ಲಿ 2358 ಜನರು ಆತ್ಮಹತ್ಯೆ ಮಾಡಿಕೊಂಡಿದ್ದರೆ. ಕಳೆದ ವರ್ಷ 1700 ಪುರುಷರು ಹಾಗೂ 658 ಮಹಿಳೆಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ನೀರಿನಲ್ಲಿ ಮುಳುಗಿ, ವಿದ್ಯುತ್ ಪ್ರವಹಿಸಿ, ಆಕಸ್ಮಿಕ ಬೆಂಕಿ ಹಾಗೂ ಕಟ್ಟಡದಿಂದ ಬಿದ್ದು ಹೀಗೆ ಆಕಸ್ಮಿಕ ಮರಣ ಪ್ರಮಾಣ ಅಧಿಕವಾಗಿದೆ. 2022ರಲ್ಲಿ 3360 ಹಾಗೂ 2023ರಲ್ಲಿ 3490 ಆಕಸ್ಮಿಕ ಸಾವುಗಳು ಸಂಭವಿಸಿವೆ. ಒಟ್ಟಾರೆ ಈ ಎರಡು ಮಾದರಿಯಲ್ಲಿ ಕಳೆದ ವರ್ಷ 5848 ಮಂದಿ ಮೃತಪಟ್ಟಿದ್ದಾರೆ.

100 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ

ಡ್ರಗ್ಸ್ ಮಾಫಿಯಾ ಮೇಲೆ ಪೊಲೀಸರು ಸಮರ ಸಾರಿದ ಪರಿಣಾಮ ಅಧಿಕ ಮೊತ್ತದ ಡ್ರಗ್ಸ್ ಜಪ್ತಿಗೆ ಕಾರಣವಾಗಿದೆ. ಇದರಿಂದ ಡ್ರಗ್ಸ್ ವಹಿವಾಟಿಗೆ ಕಡಿವಾಣ ಬಿದ್ದಿದೆ. 2023ರಲ್ಲಿ 3443 ಪ್ರಕರಣಗಳು ದಾಖಲಾಗಿದ್ದು, 4399 ಪೆಡ್ಲರ್‌ಗಳು ಜೈಲು ಸೇರಿದ್ದಾರೆ. 103.22 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ. ಅಲ್ಲದೆ ಕಳೆದ ಏಳು ತಿಂಗಳಿಂದ ಡ್ರಗ್ಸ್ ವ್ಯಸನಿಗಳ ಮೇಲೆ ಕೇಸ್ ದಾಖಲಿಸದೆ ಪೆಡ್ಲರ್‌ಗಳ ವಿರುದ್ಧ ಮಾತ್ರ ಪೊಲೀಸರು ಕ್ರಮ ಜರುಗಿಸುತ್ತಿದ್ದಾರೆ. ಹೀಗಾಗಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ ಡ್ರಗ್ಸ್ ಪತ್ತೆ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ ಎಂದು ಆಯುಕ್ತರು ಹೇಳಿದ್ದಾರೆ. 

 

ಅಕ್ರಮ ಸಂಬಂಧದ ತವರಾಗುತ್ತಿದೆಯೇ ಬೆಂಗಳೂರು: 2023ರಲ್ಲಿ ನಡೆದ 207 ಕೊಲೆಗಳಲ್ಲಿ ಅಕ್ರಮ ಸಂಬಂಧದ್ದೇ ಹೆಚ್ಚು!

ಅಪರಾಧ ಕೃತ್ಯಗಳ ವಿವರ ಹೀಗಿದೆ.

ಕೃತ್ಯ 2022 2022 2023

ವರದಿ ಪತ್ತೆ ವರದಿ ಪತ್ತೆ ವರದಿ ಪತ್ತೆ

  • ಕೊಲೆ- 145 143 156 156 205 200
  • ಲಾಭಕ್ಕೆ ಹತ್ಯೆ-8 8 17 17 2 2
  • ಡಕಾಯಿತಿ-35 35 23 23 36 34
  • ದರೋಡೆ -364 317 478 414 673 437
  • ಸರಗಳ್ಳತನ-166 166 151 139 153 114
  • ಕನ್ನ ಕ‍ಳವು(ಹಗಲು)-135,82 179 99 265 118
  • ಕನ್ನ ಕಳವು (ರಾತ್ರಿ)-654 361 702 333 879 264
  • ಮನೆಗಳ‍್ಳತನ-591 290 912 339 1692 376
  • ಸರ್ವೆಂಟ್ ಕಳ್ಳವು-177 132 205 146 320 141
  • ವಾಹನ ಕಳವು- 4124 1563 5062 1965 5909 1437
  • ಸಾಮಾನ್ಯ ಕಳವು-1167 482 1369 531 2493 480

ಒಟ್ಟು- 7566 3579 9254 4162 12627 3603

ಅಪರಾಧ ಹೆಚ್ಚಳವು ಅಂಕಿ-ಸಂಖ್ಯೆಯಲ್ಲಿ ಮಾತ್ರ ಏರಿಕೆಯಾಗಿದೆ. ವಾಸ್ತವದಲ್ಲಿ ಅಪರಾಧ ನಿಯಂತ್ರಣಕ್ಕೆ ವಹಿಸಿದ ಕ್ರಮಗಳು ಇದಕ್ಕೆ ಕಾರಣವಾಗಿದೆ. ಠಾಣೆಗಳಲ್ಲಿ ರಾಜಿ-ಸಂಧಾನ ನಡೆಸದೆ ಈಗ ಪ್ರತಿದೂರು ಎಫ್‌ಐಆರ್‌ ಆಗುತ್ತಿದೆ. ಇದರಿಂದ ಸಹಜವಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ನಾವು ಪತ್ತೆದಾರಿಕೆಯಲ್ಲಿ ಹಿಂದುಳಿದಿರುವುದನ್ನು ಒಪ್ಪುತ್ತೇನೆ

-ಬಿ.ದಯಾನಂದ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ

Follow Us:
Download App:
  • android
  • ios