ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡ ಸಾಫ್ಟ್‌ವೇರ್ ಎಂಜಿನಿಯರ್ ಮೂರ್ತಿ, ತಂದೆಯ ಆಸ್ತಿಯನ್ನೂ ಮಾರಿಸಿದ್ದಾನೆ. ದುಡಿದು ಜೀವನ ಮಾಡೋಣವೆಂದು ಅಪ್ಪ ಬೆಂಗಳೂರಿಗೆ ಕರೆದುಕೊಂಡು ಬಂದರೆ ಇದೀಗ ಚಿನ್ನಾಭರಣ ಕಳ್ಳತನದ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ.

ಬೆಂಗಳೂರು (ಜು. 08): ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಬೀಳುವುದರ ಪರಿಣಾಮ ಎಷ್ಟರಮಟ್ಟಿಗೆ ಹಾನಿಕಾರಕವಾಗಬಹುದು ಎಂಬುದಕ್ಕೆ ಬೆಂಗಳೂರಿನ ಮೂರ್ತಿ ಎಂಬ ಯುವಕನ ಬದುಕೇ ಸಾಕ್ಷಿಯಾಗಿದೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಈತ ತನ್ನ ಜೀವನವನ್ನೇ ಬೆಟ್ಟಿಂಗ್ ಗೇಮ್ಸ್‌ಗಳಲ್ಲಿ ಹಾಕಿ, ಕೊನೆಗೆ ತನ್ನ ತಂದೆಯ ಆಸ್ತಿಯನ್ನೂ ಮಾರಿಸಲು ಕಾರಣನಾದಿದ್ದಾನೆ. ಯಾವುದೇ ಹಣದ ಮೂಲ ಸಿಗದಿದ್ದಾಗ ಕಳ್ಳತನವನ್ನೂ ಮಾಡಿದ್ದು, ಮನೆಯ ಮಾನ ಹರಾಜು ಹಾಕುವ ಮೂಲಕ ಇದೀಗ ಪೊಲೀಸರಿಗೆ ಅತಿಥಿಯಾಗಿದ್ದಾನೆ.

ಬಂಧಿತ ಆರೋಪಿ ಕೆ.ಎ. ಮೂರ್ತಿ (27), ಶಿವಮೊಗ್ಗ ಮೂಲದವನು. ಮೂರ್ತಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಉತ್ತಮ ವೇತನಕ್ಕೆ ಉದ್ಯೋಗ ಮಾಡುತ್ತಿದ್ದನು. ಆದರೆ, ಆನ್‌ಲೈನ್ ಬೆಟ್ಟಿಂಗ್ ಗೇಮ್ಸ್‌ನಲ್ಲಿ ನಿರಂತರವಾಗಿ ಹಣವನ್ನು ಹೂಡುತ್ತಿದ್ದನು. ಬೆಟ್ಟಿಂಗ್ ಚಟಕ್ಕೆ ಬಿದ್ದು, ಲಕ್ಷಾಂತರ ರೂ. ಕಳೆದುಕೊಂಡಿದ್ದನು. ಬೆಟ್ಟಿಂಗ್‌ನಲ್ಲಿ ಹಣವನ್ನು ಕಳೆದುಕೊಂಡು ಸಾಲಗಾರನಾದ ಮೂರ್ತಿಯನ್ನು ಉಳಿಸಲು ತಂದೆ ಅಣ್ಣಪ್ಪ ಶಿವಮೊಗ್ಗದಲ್ಲಿರುವ ಕುಟುಂಬದ ಆಸ್ತಿ ಮಾರಬೇಕಾದ ಪರಿಸ್ಥಿತಿ ಎದುರಾಯಿತು.

ಕಳ್ಳತನಕ್ಕೆ ಕೈ ಹಾಕಿದ ಇಂಜಿನಿಯರ್:

ಬೆಟ್ಟಿಂಗ್ ಸೇರಿದಂತೆ ಎಲ್ಲ ಹಳೆಯ ಜೀವನ ಮರೆತು, ಮೂರ್ತಿ ಅವರ ಕುಟುಂಬವು ಕೆಲಸಕ್ಕೆಂದು ಬೆಂಗಳೂರಿಗೆ ಬಂದು ನೆಲೆಯೂರಿತು. ಮಗನ ಬೆಟ್ಟಿಂಗ್ ಚಟ ಅವನನ್ನು ಕೆಲಸ ಮಾಡದಂತಹ ಸೋಂಬೇರಿಯನ್ನಾಗಿ ಮಾಡಿತ್ತು. ಕೆಲಸ ಮಾಡುವುದನ್ನು ಬಿಟ್ಟಿ ಹಣಕ್ಕಾಗಿ ವಾಮ ಮಾರ್ಗವನ್ನು ಹಿಡಿಯುವಂತೆ ಮಾಡಿತ್ತು. ಬೆಟ್ಟಿಂಗ್ ಚಟವನ್ನು ಬಿಡಲಾಗದೇ ಕೆಲಸ ಮಾಡಿ ತಿಂಗಳುಪೂರ್ತಿ ಹಣಕ್ಕಾಗಿ ಕಾಯಲಾಗದ ಮೂರ್ತಿ, ಬೇಗನೇ ಹಣ ಸಂಪಾದನೆ ಮಾಡುವ ಮಾರ್ಗಗಳನ್ನು ಹುಡುಕಿದ್ದಾನೆ. ಆಗ ಆತನಿಗೆ ಮನೆಯ ಕಳ್ಳತನದ ಐಡಿಯಾ ಬಂದುದೆ. ಜೊತೆಗೆ, ವಿಶೇಷವಾಗಿ ದೇವಸ್ಥಾನ ಪ್ರದೇಶಗಳಿಗೆ ಬರುತ್ತಿದ್ದ ಒಬ್ಬಂಟಿ ಮಹಿಳೆಯರ ಚಿನ್ನದ ಸರಗಳನ್ನು ಕದಿಯುವುದನ್ನು ಗುರಿಯಾಗಿಸಿಕೊಂಡಿದ್ದನು. ಇತ್ತೀಚೆಗೆ ಅಂಗಾಳ ಪರಮೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯೊಬ್ಬಳ ಬಂಗಾರದ ಸರ ಕಿತ್ತು ಪರಾರಿಯಾದ ಮೂರ್ತಿಯನ್ನು, ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ.

ಹಳೇ ಕಳ್ಳತನ ಪ್ರಕರಣಗಳ ಕುರುಹು:

ಪೊಲೀಸರು ಮೂರ್ತಿಯನ್ನು ವಿಚಾರಣೆ ನಡೆಸಿದಾಗ, ಬೆಂಗಳೂರಿನ ಕೋಣನಕುಂಟೆ, ಅವಲಹಳ್ಳಿ ಹಾಗೂ ಸದ್ದುಗುಂಟರಪಾಳ್ಯ ಠಾಣಾ ವ್ಯಾಪ್ತಿಯ ಹಲವು ಮನೆ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಯಿಂದ 245 ಗ್ರಾಂ ಚಿನ್ನಾಭರಣ (ಅಂದಾಜು ₹17 ಲಕ್ಷ ಮೌಲ್ಯ) ವಶಪಡಿಸಿಕೊಳ್ಳಲಾಗಿದೆ. ಇದೀನ ಮನೆಯಲ್ಲಿ ಮಗನನ್ನು ಚೆನ್ನಾಗಿ ಓದಿಸಿ ವಿದ್ಯಾವಂತನನ್ನಾಗಿ ಮಾಡಿದ ತಂದೆ-ತಾಯಿಗಳು ಮಗ ತಮ್ಮ ವೃದ್ದಾಪ್ಯ ಜೀವನದಲ್ಲಿ ನೆರವಾಗುತ್ತಾನೆ ಎಂಬ ನಂಬಿಕೆಯನ್ನು ಹುಸಿಗೊಳಿಸಿದ್ದಾನೆ. ಜೊತೆಗೆ, ತಂದೆ-ತಾಯಿಯ ಮರ್ಯಾದೆ ಹರಾಜಾಗುವಂತಹ ಕೆಲಸ ಮಾಡಿದ್ದಾನೆ.

ಯುವಕರು ಇತ್ತೀಚೆಗೆ ಆನ್‌ಲೈನ್ ಬೆಟ್ಟಿಂಗ್ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಈ ಮೂಲಕ ವ್ಯಕ್ತಿಯ ಬದುಕು ಮಾತ್ರವಲ್ಲದೆ ಕುಟುಂಬದ ಶಾಂತಿ ಸಹ ಭಂಗವಾಗುತ್ತಿದೆ. ಪಾಲಕರು, ಸಂಬಂಧಿಕರು ಹಾಗೂ ಸ್ನೇಹಿತರು ಈ ರೀತಿಯ ಚಟಗಳಿಂದ ದೂರವಿರಲು ಯುವಜನತೆಯನ್ನು ಪ್ರೇರೇಪಿಸಬೇಕು ಎಂಬ ಸಂದೇಶವನ್ನು ಪೊಲೀಸರು ನೀಡಿದ್ದಾರೆ.