ಪ್ರತಿಷ್ಠಿತ ಖಾಸಗಿ ಕಂಪನಿಯ ಸರ್ವರ್ ಹ್ಯಾಕ್ ಮಾಡಿ ಸುಮಾರು 387 ಕೋಟಿ ರು. ಮೌಲ್ಯದ ಯುಎಸ್‌ಡಿಟಿ (ಬಿಟ್‌ ಕಾಯಿನ್‌) ಕಳವು ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ

 ಬೆಂಗಳೂರು : ಪ್ರತಿಷ್ಠಿತ ಖಾಸಗಿ ಕಂಪನಿಯ ಸರ್ವರ್ ಹ್ಯಾಕ್ ಮಾಡಿ ಸುಮಾರು 387 ಕೋಟಿ ರು. ಮೌಲ್ಯದ ಯುಎಸ್‌ಡಿಟಿ (ಬಿಟ್‌ ಕಾಯಿನ್‌) ಕಳವು ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡಿಜಿಟಲ್‌ ಹಣವನ್ನು ಹೀಗೆ ಅಕ್ರಮವಾಗಿ ಬೇರೆ ವ್ಯಾಲೆಟ್‌ಗೆ ವರ್ಗಾವಣೆ ಮಾಡಿದ್ದ ಆರೋಪದ ಮೇರೆಗೆ ಅದೇ ಕಂಪನಿಯ ಉದ್ಯೋಗಿಯನ್ನು ಬೆಂಗಳೂರಿನ ವೈಟ್‌ಫೀಲ್ಡ್‌ ವಿಭಾಗದ ಸಿಇಎನ್ ಠಾಣೆ ಬುಧವಾರ ಪೊಲೀಸರು ಬಂಧಿಸಿದ್ದಾರೆ.

ಸರ್ಜಾಪುರ ರಸ್ತೆಯ ನಿವಾಸಿ ರಾಹುಲ್ ಅಗರ್ವಾಲ್ ಬಂಧಿತ ಆರೋಪಿ. ಈತ ಕ್ರಿಪ್ಟೋ ಕರೆನ್ಸಿ ಕಂಪನಿಯಾದ ನೆಬಿಲೊ ಟೆಕ್ನಾಲಜೀಸ್ ಪ್ರೈವೇಟ್ ಲಿ.ನ ಸರ್ವರ್ ಹ್ಯಾಕ್ ಮಾಡಿ 44 ಮಿಲಿಯನ್ ಯುಎಸ್‌ಡಿಟಿ (ಅಂದಾಜು 378 ಕೋಟಿ ರು.) ಕಳವು ಮಾಡಿದ್ದ ಎಂದು ತಿಳಿದು ಬಂದಿದೆ.

ವರ್ಗಾವಣೆ ಹೇಗೆ?:

ಕ್ರಿಪ್ಟೋ ಕರೆನ್ಸಿ (ಬಿಟ್‌ ಕಾಯಿನ್‌) ವ್ಯವಹಾರದಲ್ಲಿ ನೆಬಿಲೊ ಟೆಕ್ನಾಲಜೀಸ್ ಕಂಪನಿ ತೊಡಗಿದ್ದು, ಬಿಟ್ ಕಾಯಿನ್ ವಹಿವಾಟಿಗೆ ಗ್ರಾಹಕರಿಗೆ ವೇದಿಕೆ ಕಲ್ಪಿಸುವ ಕಂಪನಿ ಇದಾಗಿದೆ. ಜು.19 ರಂದು ಮಧ್ಯರಾತ್ರಿ 2.37ರ ವೇಳೆ ಆ ಕಂಪನಿಯ ವ್ಯಾಲೆಟ್‌ನಿಂದ ಒಂದು ಯುಎಸ್‌ಡಿಟಿ ಅಪರಿಚಿತ ವ್ಯಾಲೆಟ್‌ಗೆ ವರ್ಗಾವಣೆಯಾಗಿತ್ತು. ಇದಾದ ನಂತರ 9.40ಕ್ಕೆ ಆ ಕಂಪನಿಯ ಸರ್ವರ್ ಹ್ಯಾಕ್ ಮಾಡಿದ್ದ ಸೈಬರ್ ದುಷ್ಕರ್ಮಿಗಳು, ನೆಬಿಲೊ ಕಂಪನಿಯ ವ್ಯಾಲೆಟ್‌ನಿಂದ 44 ಮಿಲಿಯನ್ ಯುಎಸ್‌ಡಿಟಿ ಅನ್ನು ಬೇರೆ ವ್ಯಾಲೆಟ್‌ಗೆ ವರ್ಗಾಯಿಸಿದ್ದರು. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಕಂಪನಿ, ಕೂಡಲೇ ಆಂತರಿಕ ವಿಚಾರಣೆ ನಡೆಸಿತು. ಆಗ ಅದೇ ಕಂಪನಿಯ ಉದ್ಯೋಗಿಯ ಮುಖವಾಡ ಕಳಚಿ ಬಿದ್ದಿದೆ.

ಕಂಪನಿಯ ವ್ಯಾಲೆಟ್‌ನಿಂದ ಅಕ್ರಮವಾಗಿ ಬಿಟ್‌ ಕಾಯಿನ್ ವರ್ಗಾವಣೆಯಲ್ಲಿ ರಾಹುಲ್ ಕೈಚಳಕ ಪತ್ತೆಯಾಗಿದೆ. ಕಂಪನಿಯ ಲ್ಯಾಪ್‌ಟಾಪ್‌ನಿಂದಲೇ ರಹಸ್ಯ ಕೋಡ್ ವರ್ಡ್ ಉಪಯೋಗಿಸಿ ಆತ ಬಿಟ್ ಕಾಯಿನ್‌ ವರ್ಗಾಯಿಸಿದ್ದು ಗೊತ್ತಾಗಿದೆ. ಕೂಡಲೇ ಈ ಬಗ್ಗೆ ವೈಟ್‌ ಫೀಲ್ಡ್ ಸಿಇಎನ್‌ ಠಾಣೆಗೆ ಕಂಪನಿ ಅಧಿಕಾರಿಗಳು ದೂರು ನೀಡಿದ್ದಾರೆ. ಅದರನ್ವಯ ತನಿಖೆ ನಡೆಸಿದ ಎಸಿಪಿ ರೋಹಿಣಿ ನೇತೃತ್ವದ ತಂಡವು, ರಾಹುಲ್‌ನನ್ನು ಬಂಧಿಸಿ ಹೆಚ್ಚಿನ ತನಿಖೆಗೆ ವಶಕ್ಕೆ ಪಡೆದಿದೆ.

ಎರಡು ವರ್ಷಗಳಿಂದ ರಾಹುಲ್‌ ಕೆಲಸ

ದೆಹಲಿ ಮೂಲದ ರಾಹುಲ್‌ ಎಂಜಿನಿಯರಿಂಗ್ ಪದವೀಧರನಾಗಿದ್ದು, ಕಳೆದ ಎರಡು ವರ್ಷಗಳಿಂದ ನೆಬಿಲೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಹಣದಾಸೆಗೆ ಬಿದ್ದು ಸೈಬರ್ ವಂಚಕರ ಜತೆ ಆತ ಕೈಜೋಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.