ಪೊಲೀಸ್‌ ಹೆಲ್ಮೆಟ್‌ ಧರಿಸಿ ಕ್ಯಾಂಟರ್‌ ವಾಹನ ತಡೆದು ತಪಾಸಣೆ ಮಾಡುವ ನೆಪದಲ್ಲಿ ಚಾಲಕನನ್ನು ಕೆಳಗೆ ಇಳಿಸಿ ಏಕಾಏಕಿ ಚಾಕು ತೆಗೆದು ಚಾಲಕನ ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದ ಆರೋಪಿ

ಬೆಂಗಳೂರು(ಆ.18): ಪೊಲೀಸ್‌ ಹೆಲ್ಮೆಟ್‌ ಧರಿಸಿ ಸುಲಿಗೆ ಮಾಡುತ್ತಿದ್ದ ಬಿಇ ಪದವೀಧರನನ್ನು ಆರ್‌ಎಂಸಿ ಯಾರ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯ ನಗರದ ಮೂಡಲಪಾಳ್ಯ ನಿವಾಸಿ ವಿನಯ್‌ ಕುಮಾರ್‌(23) ಬಂಧಿತ. ಇತ್ತೀಚೆಗೆ ಆರ್‌ಎಂಸಿ ಯಾರ್ಡ್‌ ವ್ಯಾಪ್ತಿಯಲ್ಲಿ ಪೊಲೀಸ್‌ ಹೆಲ್ಮೆಟ್‌ ಧರಿಸಿ ಕ್ಯಾಂಟರ್‌ ವಾಹನವನ್ನು ತಡೆದು ತಪಾಸಣೆ ಮಾಡುವ ನೆಪದಲ್ಲಿ ಚಾಲಕನನ್ನು ಕೆಳಗೆ ಇಳಿಸಿದ್ದ. ಬಳಿಕ ಏಕಾಏಕಿ ಚಾಕು ತೆಗೆದು ಚಾಲಕನ ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯ ತಂದೆ ಸೆಕ್ಯೂರಿಟಿ ಗಾರ್ಡ್‌ ಆಗಿದ್ದು, ತುಂಬಾ ಕಷ್ಟಪಟ್ಟು ಆರೋಪಿ ವಿನಯ್‌ನನ್ನು ಬಿಇ ಓದಿಸಿದ್ದರು. ವ್ಯಾಸಂಗದಲ್ಲಿ ಮುಂದಿದ್ದ ವಿನಯ್‌ ಉತ್ತಮ ಅಂಕಗಳೊಂದಿಗೆ ಬಿಇ ಕಂಪ್ಯೂಟರ್‌ ಸೈನ್ಸ್‌ ಪದವಿ ಪೂರೈಸಿದ್ದ. ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದ್ದ. ಇದರ ಜತೆಗೆ ಪೊಲೀಸ್‌ ಇಲಾಖೆ ಸೇರಲು ವಿನಯ್‌ ತಯಾರಿ ನಡೆಸುತ್ತಿದ್ದ. ಪಿಎಸ್‌ಐ ಹುದ್ದೆಗೆ ಅರ್ಜಿ ಹಾಕಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಈ ನಡುವೆ ಅಪಘಾತವಾಗಿ ಕಾಲಿಗೆ ಪೆಟ್ಟು ಬಿದ್ದಿತ್ತು. ಹೀಗಾಗಿ ಆತನ ಪಿಎಸ್‌ಐ ಕನಸು ನುಚ್ಚು ನೂರಾಗಿತ್ತು. ಅಪಘಾತದ ಹಿನ್ನೆಲೆಯಲ್ಲಿ ಖಾಸಗಿ ಕಂಪನಿ ಕೆಲಸವನ್ನು ಬಿಟ್ಟಿದ್ದ.

ಜಮೀನು ವಿವಾದ; ತಹಶೀಲ್ದಾರ್ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ

ಇತ್ತೀಚೆಗೆ ಸ್ವಿಗ್ಗಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡಿಕೊಂಡಿದ್ದ ವಿನಯ್‌, ಪೊಲೀಸ್‌ ಹೆಲ್ಮೆಟ್‌ ಧರಿಸಿ ಸುಲಿಗೆಗೆ ಇಳಿದಿದ್ದ. ಪಿಎಸ್‌ಐ ಕನಸು ನನಸಾಗದ ಹಿನ್ನೆಲೆಯಲ್ಲಿ ವಿನಯ್‌ ಕೊರಗುತ್ತಿದ್ದ. ಇದೇ ಗುಂಗಿನಲ್ಲಿ ಪೊಲೀಸ್‌ ಹೆಲ್ಮೆಟ್‌ ಧರಿಸಿ ಸುಲಿಗೆಗೆ ಇಳಿದಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.