ಕಲ್ಲು ಕ್ವಾರಿಗಳಲ್ಲಿ ನಿಷೇಧಿತ ಜಿಲೆಟಿನ್‌ ಸ್ಫೋಟ? ಮೂವರು ಕಾರ್ಮಿಕರಿಗೆ ಗಾಯ, ವಿಡಿಯೋ ವೈರಲ್‌ ಕ್ವಾರಿಯಲ್ಲಿ ಯಾವುದೇ ಸ್ಫೋಟವಾಗಿಲ್ಲ ಅಧಿಕಾರಿಗಳ ಸ್ಪಷ್ಟನೆ

ಮಂಡ್ಯ ಸೆ.19 : ಕಲ್ಲು ಕ್ವಾರಿಗಳಲ್ಲಿ ನಿಷೇಧಿತ ಜಿಲೆಟಿನ್‌ ಸ್ಫೋಟಗೊಂಡು ಮೂವರು ಕಾರ್ಮಿಕರು ಗಾಯಗೊಂಡಿರುವ ಘಟನೆ ನಾಗಮಂಗಲ ತಾಲೂಕಿನ ಕಸಬಾ ಹೋಬಳಿಯ ಸಂಕನಹಳ್ಳಿ ಸರ್ವೇ ನಂಬರ್‌ 54ರಲ್ಲಿ ಶನಿವಾರ ರಾತ್ರಿ ನಡೆದಿದೆ. ಕಲ್ಲುಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಬಸವೇಶ್ವರನಗರದ ಮೂವರು ಕಾರ್ಮಿಕರು ಜಿಲೆಟಿನ್‌ ಸ್ಫೋಟದಿಂದ ಗಾಯಗೊಂಡಿರುವ ಕುರಿತಾದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Chamarajanagara Quarry Tragedy ದುರಂತ ನಡೆದು ತಿಂಗಳಾದರೂ ಗುತ್ತಿಗೆ ಪಡೆದಿದ್ದ ಹಕೀಂ ಬಂಧನವಿಲ್ಲ

ಗಾಯಗೊಂಡ ಮೂವರ ಪೈಕಿ ಓರ್ವ ಯುವಕ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತಿಬ್ಬರು ಗಾಯಾಳುಗಳನ್ನು ರಾತ್ರೋ ರಾತ್ರಿ ತಮಿಳುನಾಡಿಗೆ ಕಳುಹಿಸಲಾಗಿದೆ ಎಂಬ ಮಾತುಗಳು ತಾಲೂಕಿನಾದ್ಯಂತ ಕೇಳಿಬರುತ್ತಿದೆ. ಜಿಲೆಟಿನ್‌ ಸ್ಫೋಟಗೊಂಡ ಘಟನೆ ನಂತರ ಕಲ್ಲುಕ್ವಾರಿ ಮಾಲೀಕರೊಂದಿಗೆ ಶಾಮೀಲಾಗಿರುವ ಕಂದಾಯ, ಗಣಿ ಮತ್ತು ಪೊಲೀಸ್‌ ಇಲಾಖೆಯ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿಹಾಕುವ ಸಲುವಾಗಿ ಸ್ಥಳದಲ್ಲಿ ಏನೂ ನಡೆದೇ ಇಲ್ಲವೆಂಬಂತೆ ನುಣಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಕ್ವಾರಿಗಳಲ್ಲಿ ಜಿಲೆಟಿನ್‌ ಸ್ಫೋಟಿಸಬಾರೆಂಬ ಸ್ಪಷ್ಟನಿರ್ದೇಶನವಿದ್ದರೂ ಸಹ ತಾಲೂಕಿನ ಕೆಲ ಕ್ವಾರಿ ಮಾಲೀಕರು ನಿರ್ಭೀತಿಯಿಂದ ನಿಷೇಧಿತ ಸ್ಫೋಟಕ ಸಾಮಗ್ರಿಗಳನ್ನು ಬಳಸುತ್ತಿರುವ ಕುರಿತು ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ತಿಳಿದಿದ್ದರೂ ಸಹ ಜಾಣಕುರುಡು ಪ್ರದರ್ಶಿಸುವ ಮೂಲಕ ಕ್ವಾರಿ ಮಾಲೀಕರ ಅಕ್ರಮಗಳಿಗೆ ಪರೋಕ್ಷವಾಗಿ ಸಾಥ್‌ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.

ಸತ್ಯ ಮರೆಮಾಚುವ ಯತ್ನ: ತಾಲೂಕಿನ ಬಸವೇಶ್ವರನಗರದ ಮೂವರು ಕಾರ್ಮಿಕರು ಜಿಲೆಟಿನ್‌ ಸ್ಫೋಟದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂಬ ಸುದ್ದಿ ಭಾನುವಾರ ಬೆಳಗ್ಗೆಯಿಂದ ಹರಿದಾಡುತ್ತಿದ್ದಂತೆ ಸ್ಫೋಟವಾಗಿದೆ ಎನ್ನಲಾದ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ತಹಸೀಲ್ದಾರ್‌ ನಂದೀಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲೆಟಿನ್‌ ಸ್ಫೋಟಗೊಂಡಿರುವ ಯಾವುದೇ ಒಂದು ಸಣ್ಣ ಕುರುಹುಗಳು ಕೂಡ ಪತ್ತೆಯಾಗಿಲ್ಲ. ಆ ಸ್ಥಳದಲ್ಲಿ ಕಾರ್ಮಿಕರು ಕೈಯಲ್ಲಿ ಕಲ್ಲು ಹೊಡೆಯುತ್ತಿದ್ದು ಮದ್ಯದ ಅಮಲಿನಲ್ಲಿ ಕಾರ್ಮಿಕರ ನಡುವೆ ಸಣ್ಣಪುಟ್ಟಗಲಾಟೆಗಳಾಗಿ ಗಾಯಗೊಂಡಿದ್ದಾರೆ. ಯಾವುದೇ ರೀತಿಯ ಜಿಲೆಟಿನ್‌ ಬಳಕೆಯಾಗಿಲ್ಲವೆಂದು ಸ್ಪಷ್ಟನೆ ನೀಡುವ ಮೂಲಕ ಸತ್ಯವನ್ನು ಮರೆಮಾಚುವ ಕೆಲಸ ಮಾಡಿದ್ದಾರೆ.

ಸಾರ್ವಜನಿಕರಲ್ಲಿ ಅನುಮಾನ: ಶನಿವಾರ ರಾತ್ರಿ ಜಿಲೆಟಿನ್‌ ಸ್ಫೋಟಗೊಂಡು ಮೂವರು ಕಾರ್ಮಿಕರು ಗಾಯಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿರುವ ಮತ್ತು ಗಾಯಾಳು ಕಾರ್ಮಿಕನೋರ್ವ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತೆರಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ… ಆಗಿದ್ದು ತಾಲೂಕಿನ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳನ್ನು ಹುಟ್ಟಿಸಿದೆ.

Bengaluru: ಕ್ವಾರಿಯಲ್ಲಿ ಕಸ ಹಾಕಿದ್ದಕ್ಕೆ BBMP ಆಯುಕ್ತ ಕ್ಷಮೆಯಾಚನೆ

ಕೆಆರ್‌ಎಸ್‌ ಅಣೆಕಟ್ಟೆವ್ಯಾಪ್ತಿ ಸೇರಿದಂತೆ ಜಿಲ್ಲಾದ್ಯಂತ ನಿಷೇಧಿತ ಜಿಲೆಟಿನ್‌ ಬಳಕೆ ಮಾಡದಂತೆ ಆದೇಶವಿದ್ದರೂ ಅಲ್ಲಲ್ಲಿ ಆಗಾಗ್ಗೆ ಇಂತಹ ಘಟನೆಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅಧಿಕಾರಿಗಳು ಗಣಿಗಾರಿಕೆಗೆ ಪರೋಕ್ಷವಾಗಿ ಸಹಕಾರ ನೀಡುತ್ತಿರುವುದರಿಂದ ಈ ಘಟನೆಗಳು ಜರುಗಲು ಕಾರಣವಾಗುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.