Asianet Suvarna News Asianet Suvarna News

Bengaluru: ಕ್ವಾರಿಯಲ್ಲಿ ಕಸ ಹಾಕಿದ್ದಕ್ಕೆ BBMP ಆಯುಕ್ತ ಕ್ಷಮೆಯಾಚನೆ

*   ಮಿಟ್ಟಗಾನಹಳ್ಳಿಯಲ್ಲಿ ಕೋರ್ಟ್‌ ನಿರ್ದೇಶನ ಮೀರಿ ಕಸ ಹಾಕಿದ ಪ್ರಕರಣ
*   ಗೌರವ್‌ ಗುಪ್ತಾ ವಿರುದ್ಧ ಕ್ರಮ ನಿರ್ಧಾರ ಕೈ ಬಿಟ್ಟ ಹೈಕೋರ್ಟ್‌
*  ಆಯುಕ್ತರು ಭವಿಷ್ಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು 
 

BBMP Commissioner Apologizes to High Court for Dump Garbage in Quarry in Bengaluru grg
Author
First Published Mar 18, 2022, 4:42 AM IST

ಬೆಂಗಳೂರು(ಮಾ.18):  ನ್ಯಾಯಾಲಯದ ನಿರ್ಬಂಧದ ಹೊರತಾಗಿಯೂ ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಘನತ್ಯಾಜ್ಯ ಸುರಿದ ಸಂಬಂಧ ಬಿಬಿಎಂಪಿ(BBMP) ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gaurav Gupta) ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದಡಿ ಕ್ರಮ ಕೈಗೊಳ್ಳುವ ನಿರ್ಧಾರವನ್ನು ಹೈಕೋರ್ಟ್‌(High Court of Karnataka) ಕೈಬಿಟ್ಟಿದೆ.

ಪ್ರಕರಣದಲ್ಲಿ ನ್ಯಾಯಾಲಯದ ಆದೇಶ(Court Order) ಉಲ್ಲಂಘಿಸಿರುವ ಕಾರಣ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಜರುಗಿಸಲಾಗುವುದು ಎಂದು ಹೈಕೋರ್ಟ್‌ ಕಳೆದ ವಿಚಾರಣೆ ವೇಳೆ ಎಚ್ಚರಿಸಿದ್ದ ಹಿನ್ನೆಲೆಯಲ್ಲಿ ಬೇಷರತ್‌ ಕ್ಷಮೆಯಾಚಿಸಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ವೈಯಕ್ತಿಕ ಪ್ರಮಾಣ ಪತ್ರವನ್ನು ಗುರುವಾರ ಸಲ್ಲಿಸಿದರು.

Waste Disposal: ಇದೊಮ್ಮೆ ಕರುಣೆ ತೋರಿಸಿ, ಹೈಕೋರ್ಟ್‌ಗೆ ಕ್ಷಮೆ ಕೇಳಿದ ಬಿಬಿಎಂಪಿ

ಅದನ್ನು ಒಪ್ಪಿದ ಹೈಕೋರ್ಟ್‌, ಆಯುಕ್ತರ ವಿರುದ್ಧ ಕ್ರಮ ಜರುಗಿಸುವ ನಿರ್ಧಾರವನ್ನು ಕೈಬಿಟ್ಟಿತು. ಅಲ್ಲದೆ ಭವಿಷ್ಯದಲ್ಲಿ ನ್ಯಾಯಾಲಯ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ಮೂಲಕ ಎಚ್ಚರದಿಂದ ಇರಬೇಕು ಎಂದು ಆಯುಕ್ತರಿಗೆ ಬುದ್ಧಿವಾದ ಹೇಳಿತು.

ಬೆಂಗಳೂರಿನಲ್ಲಿ(Bengaluru) ಅಸಮರ್ಪಕ ತ್ಯಾಜ್ಯ ವಿಲೇವಾರಿಗೆ(Waste Disposal) ಕುರಿತು ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ವಿಚಾರಣೆ ಆರಂಭ ಆಗುತ್ತಿದ್ದಂತೆಯೇ ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತಾ ಪರ ವಕೀಲರು ಹಾಜರಾಗಿ ಪ್ರಮಾಣ ಪತ್ರ ಸಲ್ಲಿಸಿದ್ದರು.

‘ಕೋರ್ಟ್‌ ಆದೇಶ ಉಲ್ಲಂಘನೆ ಆಗಿರುವುದಕ್ಕೆ ಬೇಷರತ್‌ ಕ್ಷಮೆಯಾಚಿಸುತ್ತೇನೆ. ನ್ಯಾಯಾಲಯದ ಬಗ್ಗೆ ಅತ್ಯಂತ ಹೆಚ್ಚು ಗೌರವ ಹೊಂದಿದ್ದೇನೆ. ಯಾವುದೇ ರೀತಿಯಲ್ಲೂ ಕೋರ್ಟ್‌ ಆದೇಶ ಉಲ್ಲಂಘಿಸುವ ಉದ್ದೇಶ ತಮಗೆ ಇಲ್ಲ. ಸದ್ಯ ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ(Karnataka Pollution Control Board) ಅನುಮತಿ ನೀಡಿದೆ. ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು. ಭವಿಷ್ಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರಲಾಗುವುದು’ ಎಂದು ಪ್ರಮಾಣ ಪತ್ರದಲ್ಲಿ ಗೌರವ್‌ ಗುಪ್ತಾ ವಾಗ್ದಾನ ನೀಡಿದ್ದರು.

ಅದನ್ನು ಒಪ್ಪಿದ ನ್ಯಾಯಪೀಠ, ಉದ್ದೇಶಪೂರ್ವಕವಾಗಿ ಕೋರ್ಟ್‌ ಆದೇಶ ಉಲ್ಲಂಘಿಸಿಲ್ಲ ಎಂಬುದಾಗಿ ತಿಳಿಸಿ ಬೇಷರತ್‌ ಕ್ಷಮೆಯಾಚಿಸಿರುವ ಹಿನ್ನೆಲೆಯಲ್ಲಿ ಆಯುಕ್ತರ ವಿರುದ್ಧ ಯಾವುದೇ ಕ್ರಮ ಜರುಗಿಸಲು ಬಯಸುವುದಿಲ್ಲ. ಆದರೆ, ಆಯುಕ್ತರು ಭವಿಷ್ಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು. ಕೋರ್ಟ್‌ ಆದೇಶಗಳನ್ನು ಪಾಲಿಸಬೇಕು ಎಂದು ತಾಕೀತು ಮಾಡಿತು.

K S Eshwarappa ವಿಶ್ವಸಂಸ್ಥೆ ಬಂದ್ರೂ ಬೆಂಗ್ಳೂರನ್ನು ರಿಪೇರಿ ಮಾಡೋದು ಸಾಧ್ಯವಿಲ್ಲ

ಇದೇ ವೇಳೆ ಅರ್ಜಿದಾರ ಪರ ವಕೀಲರು, ಪ್ರಕರಣ ಸಂಬಂಧ ಕಾಲಕಾಲಕ್ಕೆ ನ್ಯಾಯಾಲಯ ಹಲವು ನಿರ್ದೇಶನ ನೀಡಿದೆ. ಸರ್ಕಾರ, ಬಿಬಿಎಂಪಿ ಹಾಗೂ ಇತರೆ ಪ್ರತಿವಾದಿಗಳು ಅನೇಕ ನಿರ್ದೇಶನ ಪಾಲಿಸಿ ವರದಿ ಸಲ್ಲಿಸಿದ್ದಾರೆ. ಕೆಲವೊಂದು ನಿರ್ದೇಶನ ಪಾಲಿಸಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಅದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರು ಪ್ರಕರಣದಲ್ಲಿ ಹೈಕೋರ್ಟ್‌ ನೀಡಿರುವ ನಿರ್ದೇಶನಗಳು, ಅವುಗಳಲ್ಲಿ ಸರ್ಕಾರ, ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟ ಇತರೆ ಪ್ರತಿವಾದಿಗಳು ಜಾರಿಗೆ ತಂದಿರುವ ಆದೇಶಗಳು, ಈವರೆಗೂ ಪಾಲಿಸದಿರುವ ಆದೇಶಗಳ ಮಾಹಿತಿ ಕ್ರೋಢೀಕರಿಸಬೇಕು ಹಾಗೂ ಪಟ್ಟಿಸಿದ್ಧಪಡಿಸಬೇಕು. ಕೋರ್ಟ್‌ ಆದೇಶ ಪಾಲನೆಗೆ ಅಗತ್ಯವಿರುವ ಕ್ರಿಯಾ ಯೋಜನೆ ರೂಪಿಸಿ ನ್ಯಾಯಾಲಯಕ್ಕೆ ಸಲ್ಲಿಬೇಕು ಎಂದು ನಿರ್ದೇಶಿಸಿತು.

ಪ್ರತಿವಾದಿಗಳು ಕೋರ್ಟ್‌ ಆದೇಶವನ್ನು ಜಾರಿಗೆ ತರುವ ಕಾರ್ಯವನ್ನು ಮುಂದುವರಿಸಬೇಕು ಹಾಗೂ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ, ಮೂರು ವಾರಗಳ ಕಾಲ ಅರ್ಜಿ ವಿಚಾರಣೆ ಮುಂದೂಡಿತು. ನ್ಯಾಯಾಲಯದ ಸೂಚನೆ ಇಲ್ಲದಿದ್ದರೆ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿತು.
 

Follow Us:
Download App:
  • android
  • ios