ಬೆಂಗಳೂರು ಬಿಎಂಡಬ್ಲ್ಯೂ ಕಾರಿನ ಗಾಜು ಒಡೆದು 13 ಲಕ್ಷ ರೂ. ದೋಚಿದ ಕಳ್ಳರು
ಬೆಂಗಳೂರು ಸಬ್ ರಿಜಿಸ್ಟ್ರಾರ್ ಕಚೇರಿ ಮುಂದೆ ನಿಲ್ಲಿಸಲಾಗಿದ್ದ ಬಿಎಂಡಬ್ಲ್ಯೂ ಕಾರಿನ ಗಾಜನ್ನು ಒಡೆದು 13 ಲಕ್ಷ ರೂ. ಹಣವನ್ನು ಕದ್ದೊಯ್ದಿರುವ ಘಟನೆ ನಡೆದಿದೆ.
ಬೆಂಗಳೂರು/ಆನೇಕಲ್ (ಅ.21): ಬೆಂಗಳೂರಿನ ಹೊರವಲಯ ಸಬ್ ರಿಜಿಸ್ಟ್ರಾರ್ ಕಚೇರಿ ಮುಂದೆ ನಿಲ್ಲಿಸಲಾಗಿದ್ದ ಬಿಎಂಡಬ್ಲ್ಯೂ ಕಾರಿನ (BMW Car) ಗಾಜನ್ನು ಒಡೆದು 13 ಲಕ್ಷ ರೂ. ಹಣವನ್ನು ಕದ್ದೊಯ್ದಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರದ ಸೋಂಪುರದ ಸಬ್ ರಿಜಿಸ್ಟ್ರಾರ್ (Sarjapur Sub registrar Office) ಕಚೇರಿಗೆ ಭೂ ವ್ಯವಹಾರಕ್ಕೆಂದು ಬಿಎಂಡಬ್ಲ್ಯೂ ಕಾರಿನಲ್ಲಿ 13 ಲಕ್ಷ ರೂ. ಹಣವನ್ನು ತೆಗೆದುಕೊಂಡು ಬಂದು ನಿಲ್ಲಿಸಿದ್ದನ್ನು ಗಮನಿಸಿದ ಕಳ್ಳರು, ಕಾರಿನ ಮಾಲೀಕ ಹಣವನ್ನು ಕಾರಿನಲ್ಲಿ ಬಿಟ್ಟು ಹೋಗುವುದನ್ನೇ ಕಾದು ಗಾಜು ಒಡೆದು ಹಣವನ್ನು ಲಪಟಾಯಿಸಿದ್ದಾರೆ. ಕಳ್ಳರು ಕಾರಿನ ಗಾಜು ಒಡೆದು ಹಣ ಕದಿಯುವ ದೃಶ್ಯಗಳು ಪಕ್ಕದ ಮಳಿಗೆಯ ಸಿಸಿಟಿವಿ ಕ್ಯಾಮರಾದಲ್ಲಿ (CCTV) ಸೆರೆಯಾಗಿದೆ.
ಡಿ.ಕೆ. ಶಿವಕುಮಾರ್ ಆಪ್ತನ ತೆಲಂಗಾಣ ಮನೆ ಮೇಲೆ ಐಟಿ ದಾಳಿ: ಕರ್ನಾಟಕ ಮಾತ್ರವಲ್ಲ, ಹೊರ ರಾಜ್ಯದಿಂದಲೂ ಶಾಕ್
ಐಷಾರಾಮಿ ಕಾರುಗಳಲ್ಲಿ ಒಂದೆಂದು ಹೇಳುವ ಬಿಎಂಡಬ್ಲ್ಯೂ ಕಾರಿನ ಕಿಟಕಿ ಗಾಜು ಒಡೆದು 13 ಲಕ್ಷ ರೂ. ದೋಚಲಾಗಿದೆ. ಕಳ್ಳರ ಕೈಚಳಕದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಿನ್ನೆ ಶುಕ್ರವಾರ ಮಧ್ಯಾಹ್ನ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾರನ್ನು ಸೋಂಪುರದ ಸಬ್ ರಿಜಿಸ್ಟರ್ ಕಚೇರಿ ಮುಂಭಾಗ ನಿಲ್ಲಿಸಲಾಗಿತ್ತು. ಈ ಕಾರು ಆನೇಕಲ್ ತಾಲ್ಲೂಕಿನ ಹೊನ್ನಕಳಸಾಪುರ ಬಾಬು (Honna Kalasapura Babu) ಎಂಬುವವರಿಗೆ ಸೇರಿದ್ದಾಗಿದೆ. ಕಾರಿನಲ್ಲಿ ಹಣ ಇರುವುದರ ಬಗ್ಗೆ ಪಕ್ಕಾ ಮಾಹಿತಿ ಪಡೆದುಕೊಂಡ ಖದೀಮರು ಬೈಕ್‌ನಲ್ಲಿ ಬಂದು ಯಾರಿಗೂ ಅನುಮಾನ ಬಾರದಂತೆ ನಿಂತುಕೊಂಡು ಕಾರಿನ ಗಾಜನ್ನು ಒಡೆದು ಹಾಕಿದ್ದಾರೆ. ನಂತರ, ಕಾರಿನೊಳಗಿದ್ದ ಹಣದ ಬ್ಯಾಗ್ ಎತ್ತಿಕೊಂಡು ಅಲ್ಲಿಂದ ಪರಾರಿ ಆಗಿದ್ದಾರೆ.
ಸಾರಿಗೆ ಇಲಾಖೆಯಿಂದ 8,000 ಹುದ್ದೆ ನೇಮಕಾತಿ, 5,500 ಹೊಸ ಬಸ್ ಖರೀದಿಗೆ ಸಿಎಂ ಗ್ರೀನ್ ಸಿಗ್ನಲ್
ಕಾರನ್ನು ನಿಲ್ಲಿಸಿದ ಸ್ಥಳದಲ್ಲಿ ರಸ್ತೆಯ ಬದಿಯಲ್ಲಿ ಏಳೆಂಟು ಜನರು ನಿಂತಿದ್ದಾರೆ. ಆದರೆ, ಕಾರಿನಲ್ಲಿ ಚಾಲಕ ಕೂರುವ ಬಲ ಬದಿಯಲ್ಲಿ ಮಳಿಗೆಗಳು ಮಾತ್ರ ಇದ್ದು ನೆಲ ಮಹಡಿಯಲ್ಲಿ ಯಾರೂ ಇರುವುದಿಲ್ಲ. ಆಗ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಬಂದ ಖದೀಮರು ಕೈಯಲ್ಲಿ ವಿಭಿನ್ನವಾದ ವಸ್ತುವನ್ನು ಹಿಡಿದುಕೊಂಡು ಕಾರಿನ ಗಾಜಿಗೆ ಮುಟ್ಟಿಸಿದಾಕ್ಷಣ ಕಾರು ಸಂಪೂರ್ಣವಾಗಿ ಪುಡಿ, ಪುಡಿಯಾಗಿ ಒಡೆದು ಬಿದ್ದಿದೆ. ನಂತರ, ಅಕ್ಕ ಪಕ್ಕದಲ್ಲಿ ಜನರಿದ್ದರೂ ಅದನ್ನು ಲೆಕ್ಕಿಸದೇ ಕಾರಿನೊಳಗೆ ನುಗ್ಗಿ ಹಣ ಬ್ಯಾಗ್ ಎತ್ತಿಕೊಳ್ಳುತ್ತಾನೆ. ಅಲ್ಲಿ ಪಕ್ಕದಲ್ಲಿಯೇ ನಂಬರ್ ಪ್ಲೇಟ್ ಇಲ್ಲ ಬೈಕ್‌ನಲ್ಲಿ ನಿಂತಿದ್ದ ತನ್ನ ಸಹಚರನ ಬೈಕ್ ಹತ್ತಿಕೊಂಡು ಅಲ್ಲಿಂದ ಪರಾರಿ ಆಗಿದ್ದಾರೆ.
ಇನ್ನು ಕಾರಿನ ಮಾಲೀಕರು ಬಂದು ನೋಡಿದಾಗ ಕಾರಿನ ಗಾಜು ಒಡೆದಿದ್ದು, ಹಣ ಬ್ಯಾಗ್ ಇಲ್ಲದಿರುವುದನ್ನು ಕಂಡು ಗಾಬರಿಯಾಗಿದ್ದಾರೆ. ಕ್ಷಣಮಾತ್ರದಲ್ಲಿ ಹಣ ಎಗರಿಸಿದ ಸಿಸಿಟಿವಿ ಕ್ಯಾಮರಾ ವಿಡಿಯೋ ಆಧರಿಸಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.