ಬೆಂಗಳೂರು(ಜ.23):  ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬಂತೆ ಕಳ್ಳರ ಜತೆ ಸ್ನೇಹ ಬೆಳೆಸಿದ ಆಟೋ ಚಾಲಕನೊಬ್ಬ ಕೊನೆಗೆ ತಾನೂ ಕಳ್ಳತನಕ್ಕೆ ಇಳಿದು, ಇದೀಗ ಕಂಬಿ ಹಿಂದೆ ಸೇರಿದ್ದಾನೆ.

ಎಲ್‌.ಆರ್‌.ನಗರದ ಮುಬಾರಕ್‌ ಅಲಿಯಾಸ್‌ ಅಲಿಯಾಸ್‌ ಸಿದ್ದಿಕ್‌ನನ್ನು ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 11 ಬೈಕ್‌ಗಳು, ಕಾರು, ಲ್ಯಾಪ್‌ಟಾಪ್‌ ಹಾಗೂ 31 ಮೊಬೈಲ್‌ಗಳು ಸೇರಿದಂತೆ ಒಟ್ಟು .30 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಕೃತ್ಯದಲ್ಲಿ ತಪ್ಪಿಸಿಕೊಂಡಿರುವ ಮುಬಾರಕ್‌ ಸ್ನೇಹಿತ ಸಲ್ಮಾನ್‌ ಪತ್ತೆಗೆ ತನಿಖೆ ಮುಂದುವರೆದಿದೆ.

ಇತ್ತೀಚಿಗೆ ಜೆ.ಸಿ.ನಗರ ಮುಖ್ಯರಸ್ತೆಯಲ್ಲಿರುವ ಇಮ್ಯಾನ್ಯುಯಲ್‌ ಅವರ ಸ್ಕೂಟರ್‌ನಲ್ಲಿ 35 ಸಾವಿರ ನಗದು ಹಾಗೂ ಮೊಬೈಲ್‌ ದೋಚಿದ್ದರು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಗಳಿಗೆ ಹುಡುಕಾಟ ನಡೆಸಿದ್ದರು. ಜ.17 ರಂದು ರಾತ್ರಿ 8 ಗಂಟೆ ಸುಮಾರಿಗೆ ಪಿಎಸ್‌ಐ ವಿನೋದ್‌ ಜಿರಗಾಳೆ ಹಾಗೂ ಸಿಬ್ಬಂದಿ, ತಮ್ಮ ಠಾಣಾ ವ್ಯಾಪ್ತಿ ರಾತ್ರಿ ಗಸ್ತಿನಲ್ಲಿದ್ದರು. ಆಗ ಜೆ.ಸಿ.ನಗರದ ಮುಖ್ಯರಸ್ತೆಯಿಂದ ಪಿಆರ್‌ಟಿಸಿ ಕಡೆ ತೆರಳುವಾಗ ಪೊಲೀಸರ ಎದುರಿಗೆ ಸ್ಕೂಟರ್‌ನಲ್ಲಿ ಇಬ್ಬರು ಬಂದಿದ್ದಾರೆ. ಆದರೆ ಪೊಲೀಸರನ್ನು ನೋಡಿದ ಕೂಡಲೇ ಸ್ಕೂಟರ್‌ ತಿರುಗಿಸಿಕೊಂಡು ಪರಾರಿಯಾಗಲು ಅವರು ಯತ್ನಿಸಿದ್ದಾರೆ. ಕೂಡಲೇ ಎಚ್ಚೆತ್ತ ಪಿಎಸ್‌ಐ ತಂಡ, ಆರೋಪಿಗಳ ಬೆನ್ನಹತ್ತಿದ್ದಾಗ ಮುಬಾರಕ್‌ ಸಿಕ್ಕಿಬಿದ್ದಿದ್ದಾನೆ. ಬಳಿಕ ಆತನನ್ನು ಕರೆ ತಂದು ವಿಚಾರಣೆ ನಡೆಸಿದಾಗ ಮೊಬೈಲ್‌ ದರೋಡೆ ಹಾಗೂ ಕಳ್ಳತನಗಳು ಬೆಳಕಿಗೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿನ್ನಾಭರಣ ದೋಚಿದ ನೇಪಾಳದ ಮಾಜಿ ಪೊಲೀಸ್‌..!

ರಾತ್ರಿ ವೇಳೆ ಒಂಟಿಯಾಗಿ ಓಡಾಡುವ ಸಾರ್ವಜನಿಕರಿಗೆ ಬೆದರಿಸಿ ಮೊಬೈಲ್‌ಗಳು ಸುಲಿಗೆ ಮಾಡುತ್ತಿದ್ದಲ್ಲದೆ ಬೈಕ್‌ಗಳನ್ನು ಕಳವು ಮಾಡುತ್ತಿದ್ದರು. ಆರೋಪಿ ಪತ್ತೆಯಿಂದ ಜೆ.ಸಿ.ನಗರದ 2, ವಿದ್ಯಾರಣ್ಯಪುರ, ಅತ್ತಿಬೆಲೆ, ಜೆ.ಜೆ.ನಗರ, ಇಂದಿರಾನಗರ ಸೇರಿದಂತೆ ಇತರೆ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ 10 ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳ್ಳರ ಜತೆ ಹೋಗಿ ಕೆಟ್ಟ

ಮುಬಾರಕ್‌ ಆಟೋ ಚಾಲಕನಾಗಿದ್ದು, ಎಲ್‌.ಆರ್‌.ನಗರದಲ್ಲಿ ತನ್ನ ಕುಟುಂಬದ ಜತೆ ಆತ ನೆಲೆಸಿದ್ದಾನೆ. ಮೊದಲು ಸಲ್ಮಾನ್‌ ತಂಡ ತಾವು ಕದ್ದ ವಾಹನಗಳನ್ನು ಸಾಗಿಸಲು ಹಾಗೂ ಕಳ್ಳತನ ಎಸಗಿದ ಬಳಿಕ ತಪ್ಪಿಸಿಕೊಳ್ಳಲು ಮುಬಾರಕ್‌ನ ಆಟೋವನ್ನು ಬಳಸುತ್ತಿದ್ದರು. ಹೀಗೆ ಕಳ್ಳರ ತಂಡ ಜೊತೆ ಒಡನಾಟದ ಪರಿಣಾಮ ಕ್ರಮೇಣ ಆತ ಸಹ ಕಳ್ಳತನ ಆರಂಭಿಸಿದ್ದ. ಮೂರು ವರ್ಷದ ಮೊದಲ ಬಾರಿಗೆ ಕಳ್ಳತನ ಪ್ರಕರಣದಲ್ಲಿ ಮುಬಾರಕ್‌ ಬಂಧನವಾಗಿತ್ತು. ಬಳಿಕ ಜಾಮೀನು ಪಡೆದು ಹೊರಬಂದ ಆತ ಮತ್ತೆ ತನ್ನ ಚಾಳಿ ಮುಂದುವರೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.