ಬೆಂಗಳೂರು(ಜ.21): ಕೆಲ​ಸ​ಕ್ಕಿದ್ದ ಮನೆ​ಯಲ್ಲೇ ಚಿನ್ನಾ​ಭ​ರಣ ಕಳವು ಮಾಡಿ ನೇಪಾ​ಳಕ್ಕೆ ಹೋಗಿ ಪರಾ​ರಿ​ಯಾ​ಗಿದ್ದ ಮಾಜಿ ಪೊಲೀಸ್‌ ಸಿಬ್ಬಂದಿಯೊಬ್ಬ ಚಾಮ​ರಾ​ಜ​ಪೇಟೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನೇಪಾಳ ಮೂಲದ ತಾಪಾ ಸೂರ್ಯ ಬಹದ್ದೂರ್‌​(30) ಬಂಧಿತ. ಆರೋಪಿಯಿಂದ 62 ಲಕ್ಷ ಮೌಲ್ಯದ 1192 ಗ್ರಾಂ ಚಿನ್ನದ ಬಿಸ್ಕೆಟ್‌ ಮತ್ತು ಚಿನ್ನಾ​ಭ​ರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಉದ್ಯಮಿ ಟಿ. ಸೆಲ್ವ​ರಾ​ಜ್‌, ತಮ್ಮ ಪತ್ನಿ ಮತ್ತು ಪುತ್ರನ ಜತೆ ಚಾಮ​ರಾ​ಜ​ಪೇ​ಟೆ​ಯಲ್ಲಿ ಮನೆ​ಯಲ್ಲಿ ನೆಲೆಸಿದ್ದರು. ಆರೋಪಿ ತಾಪಾ ಸೂರ್ಯ ಕಳೆದ ಹತ್ತು ತಿಂಗಳ ಹಿಂದೆ ಮನೆಯ ಭದ್ರತಾ ಸಿಬ್ಬಂದಿ ಕೆಲಸಕ್ಕೆ ಸೇರಿಕೊಂಡಿದ್ದ. ಈತನಿಗೆ ಮನೆಯ ಮಹಡಿಯಲ್ಲಿನ ಕೊಠಡಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಹತ್ತು ತಿಂಗಳಲ್ಲಿಯೇ ಆರೋಪಿ ಮನೆಯವರ ವಿಶ್ವಾಸಗಳಿಸಿದ್ದ. ಪರಿಣಾಮ ಮನೆಯಲ್ಲೆಡೆ ಓಡಾಡಲು ಮುಕ್ತ ಅವಕಾಶ ನೀಡಲಾಗಿತ್ತು.
ಸೆಲ್ವರಾಜ್‌ ಅವರು ವಾಸವಿದ್ದ ಮನೆ ವ್ಯಾಜ್ಯದಲ್ಲಿತ್ತು. ಕೋರ್ಟ್‌ ಸೆಲ್ವರಾಜ್‌ ವಿರುದ್ಧ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಡಿಸೆಂಬ​ರ್‌​ನ​ಲ್ಲಿ ಮನೆ ಖಾಲಿ ಮಾಡ​ಬೇ​ಕಾ​ಗಿ​ತ್ತು. ಇದಕ್ಕೂ ಮುನ್ನವೇ ಆರೋಪಿ ಮನೆಯಲ್ಲಿ ಚಿನ್ನಾರಭಣ ಕಳವು ಮಾಡಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ಉದ್ಯಮಿ ದೂರು ನೀಡಿದ್ದರು.

ಕದ್ದ ಹಣದಲ್ಲಿ ದುಬಾರಿ ಕಾರು ಖರೀದಿ, ಸಮಾಜ ಸೇವೆ; ಕೊನೆಗೂ ಸಿಕ್ಕಿ ಬಿದ್ದ ಚಾಲಾಕಿ ಕಳ್ಳ!

ಲೋಕಾಪುರ ನೇತೃತ್ವದಲ್ಲಿ ತಂಡ:

ಪ್ರಕ​ರಣ ದಾಖ​ಲಿ​ಸಿ​ಕೊಂಡು ಆರೋ​ಪಿಯ ಬಗ್ಗೆ ಮಾಹಿತಿ ಸಂಗ್ರ​ಹಿ​ಸಿದ್ದ ಚಾಮ​ರಾ​ಜ​ಪೇಟೆ ಠಾಣಾ​ಧಿ​ಕಾರಿ ಬಿ.ಎ​ಸ್‌.​ಲೋ​ಕಾ​ಪುರ ನೇತೃತ್ವದಲ್ಲಿ ತಂಡ ರಚಿ​ಸ​ಲಾ​ಗಿತ್ತು. ಆರೋಪಿ ನೇಪಾ​ಳದ ಕಠ್ಮಂಡುಗೆ ಹೋಗಿ​ರುವ ಮಾಹಿತಿ ಕಲೆ ಹಾಕಿತ್ತು. ಅಷ್ಟ​ರಲ್ಲಿ ಅಲ್ಲಿಯ ರಾಮೇ​ಛಾಪ್‌ ಪೊಲೀ​ಸರು ಪ್ರಕ​ರ​ಣ​ವೊಂದ​ರಲ್ಲಿ ಆರೋಪಿಯನ್ನು ಬಂಧಿ​ಸಿ​ದ್ದರು. ಈ ಮಾಹಿತಿ ಮೇರೆ​ಗೆ ನೇಪಾ​ಳದ ರಾಯ​ಭಾರ ಕಚೇರಿ ಮತ್ತು ಇಂಟ​ರ್‌​ಪೋಲ್‌ ಅಧಿ​ಕಾ​ರಿ​ಗಳ ಜತೆ ಪತ್ರ ವ್ಯವ​ಹಾರ ನಡೆ​ಸಿ​ದ್ದರು. ಅಲ್ಲದೆ, ರಾಮೇ​ಛಾಫ್‌ ಪೊಲೀಸ್‌ ಠಾಣೆಗೂ ಮಾಹಿತಿ ನೀಡ​ಲಾ​ಗಿತ್ತು. ಬಳಿಕ ನೇಪಾ​ಳಕ್ಕೆ ತೆರ​ಳಿದ ಪೊಲೀ​ಸರು ಆರೋ​ಪಿ​ಯಿಂದ ಚಿನ್ನದ ಬಿಸ್ಕೆ​ಟ್‌​ಗಳು ಮತ್ತು ಚಿನ್ನಾ​ಭ​ರ​ಣ​ಗ​ಳನ್ನು ವಶಕ್ಕೆ ಪಡೆ​ದಿದ್ದು, ಆತನನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ. ಈತ ನೇಪಾಳದಲ್ಲಿ ಪೊಲೀಸ್‌ ಆಗಿದ್ದು, ರಾಜೀನಾಮೆ ನೀಡಿ ಬೆಂಗಳೂರಿಗೆ ಬಂದು ಸೆಕ್ಯೂರಿಟಿ ಗಾರ್ಡ್‌ ಆಗಿದ್ದ ಎಂದು ಹಿರಿಯ ಪೊಲೀ​ಸರು ಮಾಹಿತಿ ನೀಡಿ​ದ​ರು.