ಬಳ್ಳಾರಿ(ಮೇ.29): ನಗರದ ಹಿರಿಯ ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನರಾಜ್‌ ಅವರ ಫೋಟೊವನ್ನು ವಾಟ್ಸಾಪ್ ಡಿಪಿಗೆ ಹಾಕಿ ಬ್ಯಾಂಕ್‌ ಖಾತೆಯ ಮಾಹಿತಿ ಪಡೆದು ವಂಚಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. 

ಅನಾಮಿಕ ವ್ಯಕ್ತಿಯೋರ್ವ ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನರಾಜ್‌ ಅವರ ಫೋಟೋವನ್ನು ಹಾಕಿಕೊಂಡು ಪನ್ನರಾಜ್‌ ಅವರ ಗೆಳೆಯ ಮತ್ತೋರ್ವ ಲೆಕ್ಕಪರಿಶೋಧಕ ಅಕ್ಬರ್‌ ಬಾಷಾ ಎಂಬುವರಿಗೆ ಕರೆ ಮಾಡಿ ಬ್ಯಾಂಕ್‌ ಮಾಹಿತಿ ಪಡೆಯಲು ಯತ್ನಿಸಿದ್ದಾನೆ. ಮೊದಲು ಸಂದೇಶಗಳನ್ನು ಕಳಿಸಿ, ಬಳಿಕ ವಾಟ್ಸಾಪ್ ಕಾಲ್‌ನಲ್ಲಿ ಮಾತನಾಡಿದ್ದಾನೆ. ಮೊಬೈಲ್‌ ಬ್ಯಾಂಕಿಂಗ್‌ ಬಳಕೆ ಸೇರಿದಂತೆ ಬ್ಯಾಂಕಿನ ಮಾಹಿತಿಯನ್ನು ಪಡೆಯಲು ಮುಂದಾಗಿದ್ದಾನೆ. ಇದು ಪನ್ನರಾಜ್‌ ಅವರ ಧ್ವನಿ ಅಲ್ಲ ಹಾಗೂ ಅವರ ಸಂದೇಶಗಳು ಹೀಗಿರುವುದಿಲ್ಲ ಎಂದು ಅನುಮಾನಗೊಂಡ ಅಕ್ಬರ್‌ ಬಾಷಾ ಅವರು ಒಂದಷ್ಟು ಹೊತ್ತು ಬಿಟ್ಟು ಕರೆ ಮಾಡುವುದಾಗಿ ಕರೆ ಮಾಡಿದ್ದ ವಂಚಕನಿಗೆ ತಿಳಿಸಿ, ಕೂಡಲೇ ಪನ್ನರಾಜ್‌ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. 

ಹಗರಿಬೊಮ್ಮನಹಳ್ಳಿ: ಕೊರೋನಾ ಕಾಟಕ್ಕೆ ಬೀದಿಗೆ ಬಿದ್ದ ಬಡ ಕುಟುಂಬಗಳು!

ಸಂದೇಶ ಹಾಗೂ ವಾಟ್ಸಾಪ್ ಕರೆ ಬಂದ ಸಂಖ್ಯೆಗೆ ಪನ್ನರಾಜ್‌ ಅವರು ಕರೆ ಮಾಡಿದಾಗ ಸ್ವಿಚ್‌ ಆಫ್‌ ಆಗಿದೆ. ವಂಚಕನೋರ್ವ ತಮ್ಮ ಫೋಟೋ ಬಳಸಿಕೊಂಡು ವಂಚನೆಗೆ ಮುಂದಾಗಿರುವ ಕುರಿತು ಪನ್ನರಾಜ್‌ ಅವರು ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದು, ಈ ರೀತಿಯ ಕರೆಗಳಿಂದ ಎಚ್ಚರವಾಗಿರುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಯತ್ನ ಮಾಡಿದ್ದಾರೆ. ಇನ್ನೆರೆಡು ದಿನದೊಳಗೆ ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ನೀಡುವುದಾಗಿ ಪನ್ನರಾಜ್‌ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.