ಅಥಣಿಯ ನ್ಯಾಯಾಲಯದ ಆವರಣದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಬಂದಿದ್ದ ಮಹಿಳೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಲಾಗಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಥಣಿ (ನ.19): ಜಮೀನು ವಿವಾದದ ವಿಚಾರಣೆ ದಾವೆ ವೇಳೆ ನ್ಯಾಯಾಲಯದ ಆವರಣದಲ್ಲಿ ಕೋರ್ಟ್ ಕಲಾಪಕ್ಕೆ ಬಂದಿದ್ದ ಮಹಿಳೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆ ಮಂಗಳವಾರ ಸಂಜೆ ಜರುಗಿದೆ.
ಈ ಘಟನೆಯಲ್ಲಿ ಮಹಿಳೆಯ ತಲೆ ಹಾಗೂ ಎಡಗೈ ಗಂಭೀರ ಗಾಯವಾಗಿದ್ದು, ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆರೆಯ ಮಹಾರಾಷ್ಟ್ರದ ಪುಣೆ ಮೂಲದ ಮೀನಾಕ್ಷಿ ರಾಮಚಂದ್ರ ಶಿಂಧೆ (45) ಹಲ್ಲೆಗೊಳಗಾದ ಮಹಿಳೆ ಎಂದು ಗುರುತಿಸಲಾಗಿದೆ.
ಕೊಲೆಗೆ ಯತ್ನಿಸಿದ ಆರೋಪಿ ಬಾಳಾಸಾಹೇಬ (ಬಂಡು) ಚವ್ಹಾಣ (31). ಘಟನೆಗೆ ಸಂಬಂಧಿಸಿದಂತೆ ತಾಲೂಕಿನ ಖೋತನಟ್ಟಿ ಗ್ರಾಮದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಈ ಘಟನೆಯಿಂದಾಗಿ ಕೋರ್ಟ್ ಆವರಣದಲ್ಲಿ ಕೆಲಹೊತ್ತು ಆತಂಕದ ವಾತಾವರಣ ಉಂಟಾಗಿತ್ತು.
ನ್ಯಾಯಾಲಯದ ಆವರದಣದಲ್ಲೇ ಕುಡುಗೋಲಿನಿಂದ ದಾಳಿ
ಮಂಗಳವಾರ ಸಂಜೆ ನ್ಯಾಯಾಲಯದಲ್ಲಿ ಕಲಾಪಕ್ಕೆ ಹಾಜರಾಗಲು ಮೀನಾಕ್ಷಿ ಬರುತ್ತಿದ್ದರು. ಈ ವೇಳೆ ಹಿಂಬದಿಯಿಂದ ಮಾರಕಾಸ್ತ್ರ ಹಿಡಿದು ಬಂದ ಬಾಳಾಸಾಹೇಬ ಚೌಹಾಣ್ ಏಕಾಏಕಿಯಾಗಿ ನ್ಯಾಯಾಲಯದ ಸಭಾಂಗಣದಲ್ಲೇ ಮೀನಾಕ್ಷಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕೋತನಟ್ಟಿ ಗ್ರಾಮದಲ್ಲಿನ ಜಮೀನಿಗೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ.ನ್ಯಾಯಾಲಯದ ಆವರಣದಲ್ಲಿ ಘಟನೆ ನಡೆದಿರುವುದರಿಂಧ ನ್ಯಾಯವಾದಿಗಳು ಮತ್ತು ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದು, ಆವರಣದಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ ನ್ಯಾಯವಾದಿಗಳು ಆಗ್ರಹಿಸಿದ್ದಾರೆ.


