ಬೆಂಗಳೂರು, [ಜ.19]: ಕಾರಿನಲ್ಲಿ ಯುವಕನೊಬ್ಬನನ್ನು ಶಿವಾಜಿನಗರದಿಂದ  ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬಾಗಲೂರಿನ ಬಳಿ ಶನಿವಾರ ರಾತ್ರಿ ನಡೆದಿದೆ.

ಕಮರ್ಷಿಯಲ್ ಸ್ಟ್ರೀಟ್‌ನ ಜ್ಯುವೆಲರಿ ಬಡಾವಣೆಯ ಅಬ್ದುಲ್ ಮತೀನ್‌(26) ಹತ್ಯೆಯಾದವ ಎಂದು ಗುರುತಿಸಲಾಗಿದೆ. ಮಸಿನ್‌ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ಬೈಲಹೊಂಗಲ: ಒಂದೇ ಕುಟುಂಬದ ಮೂವರ ಬರ್ಬರ ಹತ್ಯೆ, ಬೆಚ್ಚಿಬಿದ್ದ ಜನತೆ

ಶಿವಾಜಿನಗರದಿಂದ  ಶನಿವಾರ ರಾತ್ರಿ ಅಬ್ದುಲ್ ಮತೀನ್‌ನನ್ನು ಕಾರಿನಲ್ಲಿ  ಕರೆದುಕೊಂಡು ಹೋದ ನಾಲ್ಕೈದು ಜನರ ತಂಡ ಬಾಗಲೂರು ಬಳಿ  ನಿರ್ಜನ ಪ್ರದೇಶವೊಂದರಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. 

ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಕೃತ್ಯವೆಸಗಲಾಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆದರೆ ಇನ್ನೂ ಈ ಬಗ್ಗೆ ಪೊಲೀಸರು ಖಚಿತಪಡಿಸಿಲ್ಲ.

ರಿಜ್ವಾನ್ ಎಂಬಾತನ ಅತ್ತಿಗೆ ಜತೆ ಅಬ್ದುಲ್ ಮತೀನ್‌ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದ್ದು, ಇದರಿಂದ ಆಕ್ರೋಶಗೊಂಡ ರಿಜ್ವಾನ್ ತನ್ನ ಸ್ನೇಹಿತರ ಜತೆ ಸೇರಿಕೊಂಡು ಈ ಕೃತ್ಯವೆಸಗಿದ್ದಾನೆ.

ಮಾತನಾಡುವ ನೆಪದಲ್ಲಿ ಅಬ್ದುಲ್ ಮತೀನ್‌ನನ್ನು ಕಾರಿನಲ್ಲಿ ಕರೆದೊಯ್ದು ಈ ಕೃತ್ಯ ಎಸಗಲಾಗಿದೆ. ಅಲ್ಲಿಂದ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.