*  ಸ್ಥಳೀಯ ಉದ್ಯೋಗ ಆಕಾಂಕ್ಷಿಗಳನ್ನು ಬಳಸಿಕೊಂಡು ನಿಯಂತ್ರಣ*  ಹಲವು ಹೆಸರಲ್ಲಿ ಕಂಪನಿ ನೋಂದಣಿ*  ಬಡ್ಡಿ ಕಟ್ಟದಿದ್ದರೆ ಕಿರುಕುಳ 

ಬೆಂಗಳೂರು(ನ.27): ಮೊಬೈಲ್‌ ಆ್ಯಪ್‌ನಲ್ಲಿ(Mobile App) ಸಾಲ ನೀಡಿ ಬಳಿಕ ಗ್ರಾಹಕರನ್ನು ಬೆದರಿಸಿ ದುಬಾರಿ ಶುಲ್ಕ ಹಾಗೂ ಬಡ್ಡಿ ವಸೂಲಿ ಮಾಡುತ್ತಿದ್ದ ಕಂಪನಿ ಮೇಲೆ ಕೇಂದ್ರ ಅಪರಾಧ ವಿಭಾಗ(CCB) ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮುನೇನಕೊಳಲು ಸಿಲ್ವರ್‌ ಸ್ಟ್ರಿಂಗ್‌ ಲೇಔಟ್‌ನ ‘ಲೈಕೋರೈಸ್‌ ಟೆಕ್ನಾಲಜಿ ಪ್ರೈ.ಲಿ.’ನ ಮಾನವ ಸಂಪನ್ಮೂಲ ಅಧಿಕಾರಿ ಕಾಮರಾಜ್‌ ಮೋರೆ (25) ಮತ್ತು ಟೀಂ ಲೀಡರ್‌ ದರ್ಶನ್‌ ಚವ್ಹಾಣ (21) ಬಂಧಿತರು. ಈ ದಂಧೆಯ ರೂವಾರಿ ಚೀನಾ(China) ಮೂಲದವನಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ. ದಾಳಿ ವೇಳೆ 83 ಕಂಪ್ಯೂಟರ್‌ ಮತ್ತು ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೋನ್ ಆ್ಯಪ್‌ಗಳಿಗೆ ಕಡಿವಾಣ: ಆರ್‌ಬಿಐನಿಂದ ಸಮಿತಿ ರಚನೆ

ಏನಿದು ದಂಧೆ

ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಚೀನಾ ಮೂಲದ ವ್ಯಕ್ತಿಗಳು ಕ್ಯಾಷ್‌ ಮಾಸ್ಟರ್‌, ಕ್ರೈಝಿ ರುಪೀಸ್‌ ಸೇರಿದಂತೆ ಹಲವು ಸಾಲದ ಆ್ಯಪ್‌(Loan App) ಅಭಿವೃದ್ಧಿಪಡಿಸಿದ್ದರು. ಬಳಿಕ ಉದ್ಯೋಗದ(Job) ಆಸೆ ತೋರಿಸಿ ಸ್ಥಳೀಯ ಉದ್ಯೋಗ ಆಕಾಂಕ್ಷಿಗಳಿಂದ ದಾಖಲೆಗಳನ್ನು ಪಡೆದು ಪ್ರತಿಯೊಬ್ಬರ ಹೆಸರಿನಲ್ಲಿ ಐದಾರು ಕಂಪನಿಯಂತೆ ಒಟ್ಟು 52 ನಕಲಿ ಕಂಪನಿಗಳನ್ನು ನೋಂದಣಿ(Registration) ಮಾಡಿಸಿದ್ದರು. ಲೈಕೋರೈಸ್‌ ಟೆಕ್ನಾಲೋಜಿ ಪ್ರೈ.ಲಿ. ಹೆಸರಿನಲ್ಲಿ ಮುನೇನಕೊಳಲು ಸಿಲ್ವರ್‌ ಸ್ಟ್ರಿಂಗ್‌ ಲೇಔಟ್‌ನಲ್ಲಿ ಕಚೇರಿ ತೆರೆದು ಕಾಲ್‌ ಸೆಂಟರ್‌ ತೆರೆದಿದ್ದರು. ಈ ಕಂಪನಿ ಹೆಸರಿನಲ್ಲಿ ಯೆಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಕೋಟೆಕ್‌ ಮಹೀಂದ್ರ ಬ್ಯಾಂಕ್‌ ಮತ್ತು ಐಡಿಎಫ್‌ಸಿ ಸೇರಿದಂತೆ ವಿವಿಧ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದಿದ್ದರು. ಈ ಕಂಪನಿಯ ನಿರ್ವಹಣೆ ಜವಾಬ್ದಾರಿಯನ್ನು ಬಂಧಿತ ಆರೋಪಗಳಿಗೆ ವಹಿಸಿದ್ದರು.

ಜಾಲತಾಣದಲ್ಲಿ ಗ್ರಾಹಕರಿಗೆ ಬಲೆ:

ಆರೋಪಿಗಳು(Accused) ಸಾಮಾಜಿಕ ಜಾಲತಾಣದಲ್ಲಿ(Social Media) ಕೆಲವೇ ಕ್ಷಣಗಳಲ್ಲಿ ಸಾಲ ನೀಡುವುದಾಗಿ ಜಾಹೀರಾತು ನೀಡಿ ಗ್ರಾಹಕರನ್ನು ಸೆಳೆಯುತಿದ್ದರು. ಸಾಲದ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಬ್ಯಾಂಕ್‌ ಖಾತೆ ಮಾಹಿತಿ ಸೇರಿದಂತೆ ಕೆಲವೊಂದು ಮಾಹಿತಿ ದಾಖಲಿಸಿದ ಬಳಿಕ .10 ಸಾವಿರದಿಂದ .1 ಲಕ್ಷವರೆಗೂ ಸಾಲ ನೀಡುತ್ತಿದ್ದರು. ಈ ವೇಳೆ ಪ್ರೊಸೆಸಿಂಗ್‌ ಶುಲ್ಕವೆಂದು ದುಬಾರಿ ಹಣ ಕಡಿತ ಮಾಡುತ್ತಿದ್ದರು. ಒಂದು ವಾರ ಕಳೆದ ಬಳಿಕ ಬಡ್ಡಿ ವಸೂಲಿಗೆ ಗ್ರಾಹಕರಿಗೆ ಕರೆ ಮಾಡುತ್ತಿದ್ದರು. ಬಡ್ಡಿ ಪಾವತಿಸಲು ನಿರಾಕರಿಸಿದರೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಸಿಬಿಲ್‌ ಸ್ಕೋರ್‌(Cibil Score) ಮೇಲೆ ಪರಿಣಾಮ ಬೀರಲಿದೆ ಎಂದು ಹೆದರಿಸುತ್ತಿದ್ದರು. ಇವರ ಕಾಟಕ್ಕೆ ಬೇಸತ್ತು ಗ್ರಾಹಕರು ಬಡ್ಡಿ ಪಾವತಿಸಿದರೂ ಹೆಚ್ಚುವರಿ ಬಡ್ಡಿ ನೀಡುವಂತೆ ಪದೇ ಪದೇ ಕರೆ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಹಲವು ದೂರುಗಳು ಬಂದಿದ್ದರಿಂದ ಕಚೇರಿ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಹೈಟೆಕ್‌ ನಿಯಂತ್ರಣ

ದಂಧೆಯ ರೂವಾರಿಗಳು ಹಾಗೂ ಬಂಧಿತ(Arrest) ಆರೋಪಿಗಳು ಮುಖಾಮುಖಿ ಭೇಟಿಯೇ ಆಗಿಲ್ಲ. ಅಜ್ಞಾತ ಸ್ಥಳದಲ್ಲಿ ಕುಳಿತು ಸ್ಥಳೀಯ ಉದ್ಯೋಗಾಕಾಂಕ್ಷಿಗಳನ್ನು ವಾಟ್ಸಾಪ್‌, ಇಂಟರ್‌ನೆಟ್‌ ಕಾಲ್‌ ಮೂಲಕ ಸಂಪರ್ಕ ಮಾಡಿ ಕಂಪನಿ ಆರಂಭಿಸಿದ್ದರು. ಈ ಮೂಲಕವೇ ಸಾಲ ನೀಡಲು ಹಾಗೂ ಸಾಲ ಮತ್ತು ಬಡ್ಡಿ ವಸೂಲಿಗೆ ಹೊರಗುತ್ತಿಗೆ ನೀಡಿದ್ದರು. ಗಮನಾರ್ಹ ಅಂಶವೆಂದರೆ, ಸಾಲದ ಆ್ಯಪ್‌ಗಳ ಸರ್ವರ್‌ಗಳನ್ನು ತಮ್ಮ ಬಳಿಯೇ ಇರಿಸಿಕೊಂಡು ದಂಧೆ ನಿಯಂತ್ರಿಸುತ್ತಿದ್ದರು. ಉತ್ತರ ಭಾರತದಲ್ಲಿ(North India) ಸಾಲ ಪಡೆದ ಗ್ರಾಹಕರ ಮಾಹಿತಿಯನ್ನು ಕರ್ನಾಟಕದ ಹೊರಗುತ್ತಿಗೆ ಕಂಪನಿಗೆ ಹಾಗೂ ಕರ್ನಾಟಕದ(Karnataka) ಗ್ರಾಹಕರ ಮಾಹಿತಿಯನ್ನು ಉತ್ತರ ಭಾರತದ ಗುತ್ತಿಗೆ ಕಂಪನಿ ನೀಡಿ ಸಾಲ ವಸೂಲಿ ಮಾಡಿಸುತ್ತಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

60 ನೌಕರರ ನೇಮಕ

ಸಾಲ ನೀಡಲು ಹಾಗೂ ವಸೂಲಿ ಮಾಡಲು ಹೊರಗುತ್ತಿಗೆ ಪಡೆದಿದ್ದ ಸ್ಥಳೀಯ ವ್ಯಕ್ತಿಗಳು, ಲೈಕೋರೈಸ್‌ ಟೆಕ್ನಾಲೋಜಿ ಪ್ರೈ.ಲಿ. ಹೆಸರಿನಲ್ಲಿ ನಗರದಲ್ಲಿ ಕಚೇರಿ ತೆರೆದು 60 ನೌಕರರನ್ನು ನೇಮಿಸಿಕೊಂಡಿದ್ದರು. ಬಳಿಕ ನೌಕರರನ್ನು ಗುಂಪುಗಳಾಗಿ ವಿಂಗಡಿಸಿ, ಗ್ರಾಹಕರನ್ನು ಸೆಳೆಯುವಾಗ ಮತ್ತು ಸಾಲ ವಸೂಲಿ ಮಾಡುವಾಗ ಯಾವ ರೀತಿ ಸಂಭಾಷಣೆ ಮಾಡಬೇಕು ಎಂಬ ಬಗ್ಗೆ ತರಬೇತಿ ಸಹ ನೀಡಿದ್ದರು. ಹೀಗಾಗಿ ಬಹಳ ವ್ಯವಸ್ಥಿತವಾಗಿ ಈ ದಂಧೆಯನ್ನು ನಿರ್ವಹಿಸುತ್ತಿದ್ದರು ಎಂಬುದು ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಆ್ಯಪ್‌ ಲೋನ್‌: ಬೆಂಗ್ಳೂರಿನ ಮೂವರ ಬಂಧನ!

ಗ್ರಾಹಕರ ಮೊಬೈಲ್‌ ಡೇಟಾ ಕಳವು

ಗ್ರಾಹಕರು ಸಾಲದ ಮೊಬೈಲ್‌ ಆ್ಯಪ್‌ ಡೌನ್‌ಲೋಡ್‌ ಮಾಡುತ್ತಿದ್ದಂತೆ ಮೊಬೈಲ್‌ನಲ್ಲಿರುವ ಫೋನ್‌ ನಂಬರ್‌ಗಳು, ಫೋಟೋಗಳು ಸೇರಿದಂತೆ ಇತರೆ ಡೇಟಾವನ್ನು ಕಳವು ಮಾಡುತ್ತಿದ್ದರು. ದುಬಾರಿ ಬಡ್ಡಿ ಪಾವತಿಸಲು ಗ್ರಾಹಕರು ಹಿಂದೇಟು ಹಾಕಿದಾಗ, ಗ್ರಾಹಕರ ಆಪ್ತರು ಹಾಗೂ ಸಂಬಂಧಿಕರಿಗೆ ಕರೆ ಮಾಡಿ ಗ್ರಾಹಕನ ಬಗ್ಗೆ ಕೆಟ್ಟದಾಗಿ ಹೇಳುತ್ತಿದ್ದರು. ಆ ಡೇಟಾದಲ್ಲಿ ಖಾಸಗಿ ಫೋಟೋ ಅಥವಾ ವಿಡಿಯೋಗಳು ಸಿಕ್ಕರೆ, ಅವುಗಳನ್ನು ಬಳಸಿಕೊಂಡು ಮತ್ತಷ್ಟು ಕಿರುಕುಳ(Harassment) ನೀಡುತಿದ್ದರು ಎಂಬುದು ತಿಳಿದು ಬಂದಿದೆ.

ಹೂಡಿಕೆ ಹೆಸರಿನಲ್ಲಿ ವಂಚನೆ!

ಚೀನಾ ಮೂಲದ ಸೈಬರ್‌ ಕಳ್ಳರು(Cyber Thieves) ಸಾಲದ ಆ್ಯಪ್‌ಗಳ ಜತೆಗೆ ಹೂಡಿಕೆ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದಿಸುವ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ಬಳಿಕ ಸರ್ವರ್‌ ಡೌನ್‌ ಮಾಡಿ ಸಂಪರ್ಕ ಕಡಿತಗೊಳಿಸಿ ವಂಚಿಸಿರುವ ಬಗ್ಗೆಯೂ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.