ಹೈದರಾಬಾದ್‌(ಜ.24): ಆನ್‌ಲೈನ್‌ ಲೋನ್‌ ಆ್ಯಪ್‌ಗಳ ಮೂಲಕ ಸಾಲ ನೀಡಿ, ಕಿರುಕುಳ ನೀಡಿ ಸುಸ್ತಿದಾರರೊಬ್ಬರ ಆತ್ಮಹತ್ಯೆಗೆ ಕಾರಣವಾದ ಪ್ರಕರಣ ಸಂಬಂಧ ಹೈದರಾಬಾದ್‌ ಪೊಲೀಸರು ಶುಕ್ರವಾರ ಬೆಂಗಳೂರು ಮೂಲದ ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಫ್ಲಾಶ್‌ ಕಾರ್ಡ್‌ ಪ್ರೈವೇಟ್‌ ಲಿಮಿಡೆಟ್‌ ನಿರ್ದೇಶಕ ಹೇಮಂತ್‌ ಕುಮಾರ್‌, ಬೆಂಗಳೂರಿನ ಜೆಸ್‌ ಐಟಿ ಟೆಕ್ನಾಲಜಿಯ ಎಚ್‌ಆರ್‌ ಮ್ಯಾನೇಜರ್‌ ವಿ. ಮಂಜುನಾಥ್‌, ಟಿಜಿಎಚ್‌ವೈ ಟ್ರಸ್ಟ್‌ ರಾಕ್‌ ಪ್ರೈ.ಲಿ. ಮ್ಯಾನೇಜರ್‌ ಅಬ್ದುಲ್‌ ಲೂಕ್‌ ಎಂದು ಗುರುತಿಸಲಾಗಿದೆ.

ಇವರುಗಳು ರುಪೀ ಪಲ್ಸ್‌, ಕುಶ್‌ ಕ್ಯಾಶ್‌, ಮನಿ ಮೋರ್‌ ಮತ್ತು ಕ್ಯಾಶ್‌ ಮ್ಯಾಪ್‌ ಎಂಬ 4 ಲೋನ್‌ ಆ್ಯಪ್‌ಗಳ ನಿರ್ವಹಣೆ ಮಾಡುತ್ತಿದ್ದರು. ಈ ಆ್ಯಪ್‌ಗಳು ಚೀನಾ ಮತ್ತು ಭೂತಾನ್‌ನೊಂದಿಗೆ ಸಂಪರ್ಕ ಹೊಂದಿವೆ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಗಳಿಂದ ಪೊಲೀಸರು ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

36 ವರ್ಷ ಚಂದ್ರಮೋಹನ್‌ ಎಂಬವರು ಲೋನ್‌ ಆ್ಯಪ್‌ ಬಳಸಿ 80,000 ರು. ಸಾಲ ಪಡೆದಿದ್ದರು. ಅದು ಬಡ್ಡಿ ಮತ್ತು ದಂಡ ಸೇರಿ 2 ಲಕ್ಷಕ್ಕೆ ತಲುಪಿತ್ತು. ಸಾಲ ತೀರಿಸಲಾಗದೆ ಅವರು ಆತ್ಮಹತ್ಯೆಗೆ ಶರಣಾಗಿದ್ದರು.