‘ಮಾಸ್ತಿಗುಡಿ’ ಚಲನಚಿತ್ರದ ಸಾಹಸದೃಶ್ಯ ಚಿತ್ರೀಕರಣದ ಭಾಗವಾಗಿ 2016ರ ನ.7ರಂದು ಖಳ ನಟರಾದ ಉದಯ್ ಹಾಗೂ ಅನಿಲ್, ನಾಯಕ ನಟ ದುನಿಯಾ ವಿಜಯ್ ಜೊತೆಯಲ್ಲಿ ಹೆಲಿಕಾಪ್ಟರ್‌ನಿಂದ ತಿಪ್ಪಗೊಂಡನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ಧುಮುಕಿದ್ದರು. ಆದರೆ, ಈಜಿ ದಡ ಸೇರಲು ಸಾಧ್ಯವಾಗದೆ ಖಳನಟರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ಬೆಂಗಳೂರು(ಏ.28): ನಟ ದುನಿಯಾ ವಿಜಯ್ ಅಭಿನಯದ ‘ಮಾಸ್ತಿಗುಡಿ’ ಚಲನಚಿತ್ರದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಸಾವನಪ್ಪಿದ ಖಳ ನಟರಾದ ಉದಯ್ ಹಾಗೂ ಅನಿಲ್, ತಮ್ಮ ಸಿಕ್ಸ್ ಪ್ಯಾಕ್ ಪ್ರೇಕ್ಷಕರು ನೋಡಬೇಕೆಂದು ಬಯಸಿ ಸೇಫ್ಟಿ ಜಾಕೆಟ್ ಧರಿಸಲು ನಿರಾಕರಿಸಿದ್ದರು ಎಂಬ ಕುತೂಹಲಕಾರಿ ಅಂಶವನ್ನು ಸಾಹಸ ನಿರ್ದೇಶಕ ರವಿವರ್ಮ ಪರ ವಕೀಲರು ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಖಳ ನಟರಿಬ್ಬರ ಉದ್ದೇಶಪೂರ್ವಕವಲ್ಲದ ಕೊಲೆ ಸಂಬಂಧ ತಮ್ಮ ವಿರುದ್ಧದ ಆರೋಪವನ್ನು ಕೈಬಿಡುವಂತೆ ಕೋರಿ ಸಾಹಸ ನಿರ್ದೇಶಕ ರವಿವರ್ಮ ಸಲ್ಲಿಸಿದ್ದ ಅರ್ಜಿ ನಗರದ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್.ಶ್ರೀಧರ ಅವರ ಮುಂದೆ ವಿಚಾರಣೆಗೆ ಬಂದಿತ್ತು.
'ಮಾಸ್ತಿಗುಡಿ' ದುರಂತದಲ್ಲಿ ಸಾವಿಗೀಡಾದವರನ್ನು ನೆನೆದ ಅಂತಾರಾಷ್ಟ್ರೀಯ ವಾಹಿನಿ!
ವಿಚಾರಣೆ ವೇಳೆ ರವಿವರ್ಮ ಪರ ವಕೀಲ ಸಿ.ಎಚ್. ಹನುಮಂತರಾಯ ವಾದ ಮಂಡಿಸಿ, ಖಳ ನಟರಿಬ್ಬರ ಸಾವು ಆಕಸ್ಮಿಕವಾಗಿ ಜರುಗಿದೆ. ಹೆಲಿಕಾಫ್ಟರ್‌ನಿಂದ ಜಲಾಶಯದ ಹಿನ್ನೀರಿಗೆ ಧುಮುಕುವ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ತಮ್ಮ ದೇಹದ ಸಿಕ್ಸ್ ಪ್ಯಾಕ್ ಅನ್ನು ಪ್ರೇಕ್ಷಕರು ನೋಡಲು ಅನುವು ಮಾಡಿಕೊಳ್ಳುವಂತೆ ಕೇಳಿಕೊಂಡು ಸೇಫ್ಟಿಜಾಕೆಟ್ (ರಕ್ಷಾ ಕವಚ) ಧರಿಸಲು ಮೃತರು ಒಪ್ಪಿರಲಿಲ್ಲ. ಹಾಗೆಯೇ, ತಮಗೆ ಈಜು ಬರುವುದಾಗಿಯೂ ತಿಳಿಸಿದ್ದರು. ಅವರ ಒಪ್ಪಿಗೆ ಮೇರೆಗೆ ಚಿತ್ರೀಕರಣ ನಡೆಸಲಾಗಿತ್ತು. ಈ ಅಂಶ ಪೋಲಿಸರೇ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ ನ್ಯಾಯಾಲಯಕ್ಕೆ ವಿವರಿಸಿದರು.
ನ್ಯಾಯಾಲಯವು ಹೆಚ್ಚಿನ ವಾದ ಮಂಡನೆಗೆ ಮೇ 30ಕ್ಕೆ ವಿಚಾರಣೆ ನಿಗದಿಪಡಿಸಿತು.
ಪ್ರಕರಣದ ಹಿನ್ನೆಲೆ
‘ಮಾಸ್ತಿಗುಡಿ’ ಚಲನಚಿತ್ರದ ಸಾಹಸದೃಶ್ಯ ಚಿತ್ರೀಕರಣದ ಭಾಗವಾಗಿ 2016ರ ನ.7ರಂದು ಖಳ ನಟರಾದ ಉದಯ್ ಹಾಗೂ ಅನಿಲ್, ನಾಯಕ ನಟ ದುನಿಯಾ ವಿಜಯ್ ಜೊತೆಯಲ್ಲಿ ಹೆಲಿಕಾಪ್ಟರ್‌ನಿಂದ ತಿಪ್ಪಗೊಂಡನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ಧುಮುಕಿದ್ದರು. ಆದರೆ, ಈಜಿ ದಡ ಸೇರಲು ಸಾಧ್ಯವಾಗದೆ ಖಳನಟರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಪ್ರಕರಣದ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು. ತನಿಖೆ ನಡೆಸಿದ್ದ ತಾವರೆಕೆರೆ ಪೊಲೀಸರು, ಚಿತ್ರದ ಸಾಹಸ ನಿರ್ದೇಶಕ ರವಿವರ್ಮ ಹಾಗೂ ಇತರೆ ಐವರ ವಿರುದ್ಧ ಭಾರತ ದಂಡ ಸಂಹಿತೆ ಸೆಕ್ಷನ್ 304 ಅಡಿಯಲ್ಲಿ ದುಡುಕಿನ ಮತ್ತು ನಿರ್ಲಕ್ಷ್ಯ ಕ್ರಿಯೆಯಿಂದ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾದ ಪ್ರಕರಣದಡಿ (ಉದ್ದೇಶಪೂರ್ವಕವಲ್ಲದ ಕೊಲೆ) ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
