Asianet Suvarna News Asianet Suvarna News

ನಟಿ, ನಿರ್ದೇಶಕಿಗೆ Uber ಕ್ಯಾಬ್‌ ಡ್ರೈವರ್‌ನಿಂದ ಅನುಚಿತ ವರ್ತನೆ..!

ಉಬರ್ ಕ್ಯಾಬ್‌ ಚಾಲಕನೊಬ್ಬ ನಟಿ ಹಾಗೂ ನಿರ್ದೇಶಕಿ ಜತೆ ಅನುಚಿತವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಪೊಲೀಸರು ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ. 

actor claims uber cab driver misbehaved with her mumbai police responds ash
Author
First Published Oct 16, 2022, 3:10 PM IST

ಉಬರ್‌ (Uber) ಕ್ಯಾಬ್‌ ಚಾಲಕನೊಬ್ಬ ತನ್ನ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಟಿ (Actor) ಹಾಗೂ ನಿರ್ದೇಶಕಿಯೊಬ್ಬರು (Director) ಆರೋಪಿಸಿದ್ದಾರೆ. ಕ್ಯಾಬ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದ್ದು, ಉಬರ್ ಚಾಲಕ ತನ್ನ ಜತೆ ಅನುಚಿತವಾಗಿ ವರ್ತಿಸಿದ್ದು ಮಾತ್ರವಲ್ಲದೆ, ಆತ ತನ್ನ ಮೇಲೆ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ಆಕೆ ಹೇಳಿಕೊಂಡಿದ್ದಾರೆ. ಮುಂಬೈನಲ್ಲಿ ನಟಿ ಹಾಗೂ ನಿರ್ದೇಶಕಿಗೆ ಈ ಘಟನೆ ನಡೆದಿದ್ದು, ಈ ಸಂಬಂಧ ತನ್ನ ಫೇಸ್‌ಬುಕ್ ಅಕೌಂಟ್‌ನಲ್ಲಿ ಬರೆದುಕೊಂಡಿದ್ದಾರೆ. ಶನಿವಾರ ಸಂಜೆ ಈ ಘಟನೆ ನಡೆದಿದೆ ಎಂದೂ ಆಕೆ ಹೇಳಿಕೊಂಡಿದ್ದಾರೆ.

ಮರಾಠಿ (Marathi) ಹಾಗೂ ಹಿಂದಿ (Bollywood) ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ಮನವ ನಾಯಕ್‌ ಈ ಆರೋಪ ಮಾಡಿದ್ದಾರೆ. ಶನಿವಾರ ರಾತ್ರಿ ತನ್ನ ಅಧಿಕೃತ ಫೇಸ್‌ಬುಕ್‌ (Facebook) ಖಾತೆಯಲ್ಲಿ ನಟಿ ಈ ಬಗ್ಗೆ ಪೋಸ್ಟ್‌ ಮಾಡಿಕೊಂಡಿದ್ದಾರೆ. ಇನ್ನು, ಈ ಪೋಸ್ಟ್‌ಗೆ ಮುಂಬೈ (Mumbai) ಜಂಟಿ ಕಮೀಷನರ್‌ ಆಫ್‌ ಪೊಲೀಸ್ (ಕಾನೂನು ಮತ್ತು ಸುವ್ಯವಸ್ಥೆ) ವಿಶ್ವಾಸ್‌ ನಂಗ್ರೆ ಪಾಟೀಲ್‌ ಪ್ರತಿಕ್ರಿಯೆ ನೀಡಿದ್ದು, ಈ ಘಟನೆಯನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದು, ತಪ್ಪಿತಸ್ಥನ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. 

ಘಟನೆಯ ವಿವರ..
ಘಟನೆಯ ಬಗ್ಗೆ ನಟಿ ಮನವ ನಾಯಕ್‌ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬರೆದುಕೊಂಡಿರುವುದು ಹೀಗೆ.. ತಾನು ರಾತ್ರಿ 8.15ಕ್ಕೆ (ಮುಂಬೈನ) ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಿಂದ (Bandra Kurla Complex) ಮನೆಗೆ ಹೋಗಲು ಕ್ಯಾಬ್‌ ಹತ್ತಿದೆ. ಕ್ಯಾಬ್‌ನಲ್ಲಿ ತಾನು ಕುಳಿತುಕೊಂಡ ಬಳಿಕ ಡ್ರೈವರ್‌ ಕ್ಯಾಬ್‌ ಚಲಾಯಿಸುತ್ತಲೇ ಫೋನ್‌ನಲ್ಲಿ ಮಾತನಾಡಲು ಆರಂಭಿಸಿದ, ಇದನ್ನು ನಾನು ವಿರೋಧಿಸಿದೆ. 

ಅಲ್ಲದೆ, ಆ ಚಾಲಕ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಸಿಗ್ನಲ್‌ ಜಂಪ್ ಮಾಡಿ ಸಂಚಾರಿ ನಿಯಮಗಳನ್ನೂ ಉಲ್ಲಂಘಿಸಿದ. ಇದಕ್ಕೆ ಟ್ರಾಫಿಕ್‌ ಪೊಲೀಸರು ಕಾರು ತಡೆದು ಅದರ ಫೋಟೋ ತೆಗೆದರು ಎಂದೂ ನಟಿ ಹಾಗೂ ನಿರ್ದೇಶಕಿ ಮನವ ನಾಯಕ್ ಬರೆದುಕೊಂಡಿದ್ದಾರೆ. 

ಹಾಗೂ, ತನ್ನದೇ ತಪ್ಪಿದ್ದರೂ, ಟ್ರಾಫಿಕ್‌ ಪೊಲೀಸ್‌ ಜತೆಗೆ ಆತ ವಾದ ಮಾಡಿದ. ನಂತರ, ಈಗಾಗಲೇ ಫೋಟೋ ತೆಗೆದಿರುವುದರಿಂದ ವಾಹನವನ್ನು ಚಲಿಸಲು ಅವಕಾಶ ಮಾಡಿಕೊಡಿ ಎಂದು ಟ್ರಾಫಿಕ್‌ ಪೊಲೀಸರನ್ನು ಕೇಳಿಕೊಂಡಿದ್ದಾಗಿಯೂ ನಟಿ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕ್ಯಾಬ್‌ ಚಾಲಕ, 500 ರೂ. ದಂಡವನ್ನು ನೀವು ಕೊಡುತ್ತೀರಾ ಎಂದು ತನ್ನತ್ತಲೇ ಕೂಗಾಡಿದ ಹಾಗೂ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆತ ಬೆದರಿಕೆ ಹಾಕಿದ ಎಂದೂ ನಟಿ ಮನವಿ ನಾಯಕ್ ಬರೆದುಕೊಂಡಿದ್ದಾರೆ. 

ಅಲ್ಲದೆ, ಈ ವಾದದ ನಡುವೆ ಪೊಲೀಸ್‌ ಠಾಣೆಗೆ ಕ್ಯಾಬ್‌ ಅನ್ನು ತೆಗೆದುಕೊಂಡು ಹೋಗು ಎಂದು ತಾನು ಹೇಳಿದೆ, ಆದರೆ ಆತ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಕತ್ತಲಾಗಿದ್ದ ಸ್ಥಳದಲ್ಲಿ ವಾಹನ ನಿಲ್ಲಿಸಿದ. ನಂತರ, ವಾಹನವನ್ನು ವೇಗವಾಗಿ ಚಲಾಯಿಸಿ ಛುನಾಬಟ್ಟಿ ರಸ್ತೆ ಹಾಗೂ ಪ್ರಿಯದರ್ಶಿನಿ ಪಾರ್ಕ್‌ ಮಾರ್ಗಕ್ಕೆ ಕರೆದುಕೊಂಡು ಹೋದ ಎಂದೂ ನಟಿ, ನಿರ್ದೇಶಕಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 

ನಂತರ, ಕ್ಯಾಬ್‌ ಚಾಲಕನ ವಿರುದ್ಧ ದೂರು ನೀಡಲು ಉಬರ್ ಸುರಕ್ಷತಾ ಸಹಾಯವಾಣಿಗೆ ಕರೆ ಮಾಡಿದೆ. ತಾನು ಸಹಾಯವಾಣಿಯ ಎಕ್ಸಿಕ್ಯುಟಿವ್ ಒಬ್ಬರ ಜತೆ ಮಾತನಾಡುತ್ತಿದ್ದ ವೇಳೆ, ಚಾಲಕ ಮತ್ತೆ ಕ್ಯಾಬ್‌ ವೇಗವನ್ನು ಹೆಚ್ಚಿಸಿದ ಎಂದೂ ಮನವಿ ಮಾಯಕ್ ಬರೆದುಕೊಂಡಿದ್ದಾರೆ. 

ಬಳಿಕ, ಕ್ಯಾಬ್‌ ನಿಲ್ಲಿಸುವಂತೆ ತಾನು ಡ್ರೈವರ್‌ ಅನ್ನು ಕೇಳಿದರೂ, ಆತ ನಿಲ್ಲಿಸಲಿಲ್ಲ ಹಾಗೂ ಯಾವುದೋ ವ್ಯಕ್ತಿಗೆ ಕರೆ ಮಾಡಿದ. ನಂತರ, ತಾನು ಹೆದರಿಕೊಂಡು ಸಹಾಯಕ್ಕಾಗಿ ಕೂಗಿಕೊಂಡೆ ಎಂದೂ ನಟಿ ಬರೆದುಕೊಂಡಿದ್ದಾರೆ.  ತಾನು ಕೂಗಿಕೊಂಡ ನಂತರ, ಮೋಟರ್‌ಬೈಕ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳು ಹಾಗೂ ಆಟೋ ಚಾಲಕರೊಬ್ಬರು ಕ್ಯಾಬ್‌ ಚಾಲಕನನ್ನು ತಡೆದು ವಾಹನ ನಿಲ್ಲಿಸಿದರು ಎಂದೂ ನಟಿ ಹೇಳಿದ್ದಾರೆ. 

ಇದನ್ನು ಓದಿ: ರೇಪ್‌ನಿಂದ ಚಾಲಕರ ಮೇಲಿನ ದೌರ್ಜನ್ಯದವರೆಗೆ, ಸೋರಿಕೆಯಾದ ದಾಖಲೆಯಿಂದ ಉಬರ್‌ ರಹಸ್ಯ ಬಯಲು

ನಾನು ಸುರಕ್ಷಿತವಾಗಿದ್ದೇನೆ, ಆದರೆ ತುಂಬಾ ಹೆದರಿಕೊಂಡಿದ್ದೇನೆ ಎಂದೂ ಸಹ ತನ್ನ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಮನವಿ ನಾಯಕ್‌ ಬರೆದುಕೊಂಡಿದ್ದಾರೆ. ಈ ಘಟನೆಯ ಸಂಬಂಧ ಉಬರ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಇದನ್ನೂ ಓದಿ: ನಮ್ಮ ಕುಟುಂಬವನ್ನು ಹೆದ್ದಾರಿಯಲ್ಲಿಯೇ ಬಿಟ್ಟ ಓಲಾ ಕ್ಯಾಬ್, ಪ್ರಯಾಣದ ಕಹಿ ಅನುಭವ ಹಂಚಿಕೊಂಡ ಬೆಂಗಳೂರು ವ್ಯಕ್ತಿ!

Follow Us:
Download App:
  • android
  • ios