ಪತಿಯನ್ನು ಹನಿಮೂನ್​ಗೆ ಕರೆದೊಯ್ದು ಅಲ್ಲಿಯೇ ಆತನನ್ನು ಮುಗಿಸಿದ ಹಂತಕಿ 'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾದ ರೀತಿಯಲ್ಲಿಯೇ ಸಿಕ್ಕಿಬಿದ್ದಿದ್ದಾಳೆ! ಏನದು?

ವಿವೇಕ್- ಪ್ರೀತಿ ಲವ್​ ಸ್ಟೋರಿ ಕೊ*ಲೆಯಲ್ಲಿ ಅಂತ್ಯವಾದದ್ದು 1993ರಲ್ಲಿ ಬಿಡುಗಡೆಯಾಗಿದ್ದ ನಾಗತಿಹಳ್ಳಿ ಚಂದ್ರಶೇಖರ್​ ಅವರ ನಿರ್ದೇಶನದ ಬಾ ನಲ್ಲೆ ಮಧುಚಂದ್ರಕೆ ಚಿತ್ರದ ಕಥಾವಸ್ತು. ಹನಿಮೂನ್​ಗೆ ಪತ್ನಿಯನ್ನು ಕರೆದುಕೊಂಡು ಹೋಗುವ ವಿವೇಕ್​ ಬರುವಾಗ ಒಂಟಿಯಾಗಿರುತ್ತಾನೆ. ಅಲ್ಲಿ ಪ್ರೀತಿಯ ಸಾವಾಗಿರುತ್ತದೆ. ಆಕೆ ಹಿಮದಲ್ಲಿ ಜಾರಿ ಸಾಯುತ್ತಾಳೆ. ಪೊಲೀಸರು ತನಿಖೆ ಆರಂಭಿಸಿದಾಗ ಇದು ಆರಂಭದಲ್ಲಿ ಸ್ವಾಭಾವಿಕ ಸಾವೇ ಎನ್ನಿಸುತ್ತದೆ. ಆದರೆ ಪೊಲೀಸರಿಗೆ ಅದೇನೋ ಅನುಮಾನ ಬಂದು ಗಂಡನ ಮೇಲೆ ಡೌಟ್​ ಶುರುವಾಗಿ ತನಿಖೆ ಮಾಡಿದಾಗ ಕೊನೆಯಲ್ಲಿ ಸಿಕ್ಕಿಬೀಳುವುದು ಟ್ರೇನ್​ ಟಿಕೆಟ್​ನಿಂದಾಗಿ! ಹೋಗುವಾಗ ಎರಡು ಟಿಕೆಟ್​ ಮಾಡಿಸಿದ್ದ ವಿವೇಕ್​ ಬರುವಾಗ ಒಂದೇ ಮಾಡಿಸಿರುತ್ತಾನೆ. ಹೀಗೆ ಆತನೇ ಸಾಯಿಸಿರುವುದು ತಿಳಿಯುತ್ತದೆ. ಆಕೆಗೆ ಅಕ್ರಮ ಸಂಬಂಧ ಇರುವುದು ತಿಳಿದ ಕಾರಣ, ಈ ರೀತಿ ಮಾಡುತ್ತಾನೆ...

ಇದು ಸಿನಿಮಾ ಕಥೆಯಾದ್ರೆ, ಇದೀಗ ಅದಕ್ಕಿಂತ ಸ್ವಲ್ಪ ಭಿನ್ನವಾದರೂ ಅದನ್ನೇ ಹೋಲುವ ಪಾರ್ಟ್​-2 ಕಥೆ ಇಂದೋರ್​ನ ಹನಿಮೂನ್​ ಮರ್ಡ*ರ್​ ಸ್ಟೋರಿ! ಮಧ್ಯಪ್ರದೇಶದ ಇಂದೋರ್‌ನ ದಂಪತಿ ರಾಜಾ ರಘುವಂಶಿ ಮತ್ತು ಸೋನಮ್ ರಘುವಂಶಿ ಅವರು ಮೇಘಾಲಯಕ್ಕೆ ಹನಿಮೂನ್​ಗೆ ಹೋದ ಸಂದರ್ಭದಲ್ಲಿ ಇಬ್ಬರೂ ನಿಗೂಢರಾಗಿ ಕಾಣೆಯಾಗಿದ್ದರು. ಮೇ 23 ರಂದು ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾ ಪ್ರದೇಶದಲ್ಲಿ ರಜೆಗೆ ಹೋಗಿದ್ದ ರಾಜಾ ರಘುವಂಶಿ ಮತ್ತು ಅವರ ಪತ್ನಿ ಸೋನಮ್ ನಾಪತ್ತೆಯಾಗಿದ್ದರು. ಕೆಲ ದಿನಗಳ ಬಳಿಕ ಅವರಿಬ್ಬರೂ ಫೋನ್​ಗೆ ಸಿಗದಾಗ ಕುಟುಂಬಸ್ಥರು ಪೊಲೀಸರಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಸಂದರ್ಭದಲ್ಲಿ ಡ್ರೋನ್​ ಬಳಸಲಾಗಿತ್ತು. ಅಲ್ಲಿ ತಿರುಗಾಡಲು ದಂಪತಿ ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸಿಕ್ಕಿದ್ದು, ತೀವ್ರ ಹುಡುಕಾಟದ ಬಳಿಕ, ಪತಿಯ ಶವ ಕಣಿವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪತ್ನಿ ಸೋನಮ್​ಳನ್ನು ಬಾಂಗ್ಲಾದೇಶದ ಗಡಿಯಾಗಿದ್ದ ಹಿನ್ನೆಲೆಯಲ್ಲಿ, ಬಾಂಗ್ಲಾಕ್ಕೆ ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿತ್ತು.

ಆದರೆ, ಥೇಟ್​ ಇದೇ ಸಿನಿಮಾವನ್ನು ಹೋಲುವ ರೀತಿಯಲ್ಲಿ ಈ ಕಥೆ ನಡೆದಿದೆ. ಪೊಲೀಸರು ತೀವ್ರ ತನಿಖೆ ನಡೆಸಿದಾಗ ಅವರಿಗೆ, ಸುಪಾರಿ ಹಂತಕರನ್ನು ಬಿಟ್ಟು ಪತ್ನಿಯೇ ಕೊ*ಲೆ ಮಾಡಿಸಿರುವ ಶಂಕೆ ಉಂಟಾಗಿದ್ದು, ಆಕೆಯನ್ನು ಬಂಧಿಸಲಾಗಿದೆ. ಅವಳಿಗೆ ಅಕ್ರಮ ಸಂಬಂಧ ಇದ್ದ ಹಿನ್ನೆಲೆಯಲ್ಲಿ ಈ ರೀತಿ ಮಾಡಿರುವುದಾಗಿ ತಿಳಿಸಲಾಗಿದ್ದು, ಆಕೆಯ ಬಾಯ್​ಫ್ರೆಂಡ್ ಅನ್ನೂ ವಶಕ್ಕೆ ಪಡೆಯಲಾಗಿದೆ. ಅಷ್ಟಕ್ಕೂ ಸಿನಿಮೀಯ ರೀತಿಯಲ್ಲಿಯೇ ಇಲ್ಲಿಯೂ ಘಟನೆ ನಡೆದಿದೆ. ಹನಿಮೂನ್​ ಪ್ಲ್ಯಾನ್​ ಸಂಪೂರ್ಣವಾಗಿಯೂ ಅವಳದ್ದೇ ಆಗಿತ್ತು. ಎಲ್ಲಾ ಕಡೆ ಅವಳೇ ಬುಕಿಂಗ್​ ಮಾಡಿದ್ದಳು. ಎಲ್ಲೆಲ್ಲಿ ಹೋಗಬೇಕು ಎನ್ನುವ ನಕ್ಷೆಯನ್ನೂ ಸೋನಂ ಸಿದ್ಧಪಡಿಸಿದ್ದಳು. ಆದರೆ ಕುತೂಹಲದ ವಿಷಯ ಏನೆಂದರೆ, ಹೋಗುವಾಗ ವಿಮಾನದ ಟಿಕೆಟ್​ ಬುಕ್​ ಮಾಡಿದ್ದ ಅವಳು, ಬರುವಾಗಿನ ಟಿಕೆಟ್​ ಬುಕ್​ ಮಾಡಿಸಿಯೇ ಇರಲಿಲ್ಲ! ಇದು ಕೂಡ ಅವಳೇ ಕೊ*ಲೆ ಮಾಡಿಸಿದ್ದಾಳೆ ಎನ್ನುವುದಕ್ಕೆ ಬಲವಾದ ಸಾಕ್ಷಿಯಾಗಿದೆ. ಅಷ್ಟೇ ಅಲ್ಲದೇ ಈ ಸಂದರ್ಭದಲ್ಲಿ ಸೋನಂ ಒಂದೇ ಒಂದು ಫೋಟೋ ಕೂಡ ಕ್ಲಿಕ್ಕಿಸಿಕೊಳ್ಳಲಿಲ್ಲ!

 

ಈ ಕುರಿತು ರಾಜಾ ಅವರ ತಾಯಿ ಆರೋಪಿಸಿದ್ದಾರೆ. ಹನಿಮೂನ್‌ಗಾಗಿ ಸೋನಂ ಎಲ್ಲಾ ಬುಕಿಂಗ್‌ಗಳನ್ನು ಮಾಡಿದ್ದಳು, ಆಕೆ ರಿಟರ್ನ್ ಟಿಕೆಟ್‌ಗಳನ್ನು ಬುಕ್ ಮಾಡಿಲ್ಲ ಎಂದು ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ, ದಂಪತಿ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಧರಿಸಿ ಹನಿಮೂನ್​ಗೆ ಹೋಗಿದ್ದರು. ಸೋನಮ್ ತನ್ನ ಹೆತ್ತವರ ಮನೆಯಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಹೋದರೆ, ರಾಜಾ ತನ್ನ ಮನೆಯಿಂದ 10 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ಧರಿಸಿ ಹೋಗಿದ್ದರು. ಅದರಲ್ಲಿ ವಜ್ರದ ಉಂಗುರ, ಸರ ಮತ್ತು ಬಳೆ ಎಲ್ಲವೂ ಸೇರಿತ್ತು. ಇದು ಕೂಡ ಆಕೆಯದ್ದೇ ಪ್ಲ್ಯಾನ್​ ಆಗಿತ್ತು. ಕೆಲಸ ಮುಗಿಸಿ ಎಲ್ಲಾ ಆಭರಣಗಳೊಂದಿಗೆ ಬಾಯ್​ಫ್ರೆಂಡ್​​ ಪರಾರಿಯಾಗುವ ಯೋಚನೆ ಮಾಡಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಮೇಘಾಲಯ ಪೊಲೀಸರ ಪ್ರಕಾರ, ಸೋನಮ್ 21 ವರ್ಷದ ರಾಜ್ ಕುಶ್ವಾಹ ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಮತ್ತು ಅವರ ಪತಿಯನ್ನು ಕೊಲ್ಲಲು ಪ್ರಿಯತಮನೊಂದಿಗೆ ಸಂಚು ರೂಪಿಸಿದ್ದರು. ಹೀಗಾಗಿ ಇಬ್ಬರನ್ನೂ ಬಂಧಿಸಲಾಗಿದೆ. ಸೋನಮ್, ಇಂದೋರ್‌ನಲ್ಲಿ ತನ್ನ ಮಾಜಿ ಉದ್ಯೋಗಿಯಾಗಿದ್ದ ರಾಜ್ ಮತ್ತು ಇತರ ಮೂವರು - ವಿಶಾಲ್ ಸಿಂಗ್ ಚೌಹಾಣ್ (22), ಆಕಾಶ್ ರಜಪೂತ್ (19) ಮತ್ತು ಆನಂದ್ ಸಿಂಗ್ ಕುರ್ಮಿ​​(23) ಸಹಾಯದಿಂದ ಕೊಲೆಗೆ ಸಂಚು ರೂಪಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದು, ಈ ನಾಲ್ವರನ್ನು ಬಂಧಿಸಲಾಗಿದೆ. ಸೋನಮ್ ಅವರ ತಂದೆ, ತನ್ನ ಮಗಳ ವಿರುದ್ಧ ಕೊಲೆ ಆರೋಪವನ್ನು ತಿರಸ್ಕರಿಸಿದ್ದಾರೆ ಮತ್ತು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಮೇಘಾಲಯ ಪೊಲೀಸರು ತಮ್ಮ ಮಗಳ ವಿರುದ್ಧ ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.