Asianet Suvarna News Asianet Suvarna News

ಬೆಂಗಳೂರು: ಎಂಜಿನಿಯರ್‌ ಸೋಗಲ್ಲಿ ಸಿಎಂ ಗೃಹಕಚೇರಿಗೆ ಎಂಟ್ರಿ, ಬಂಧನ

ತಾನೊಬ್ಬ ಸರ್ಕಾರಿ ನೌಕರರ ಎಂದು ಬಿಂಬಿಸಿಕೊಂಡು ಅಮಾಯಕರನ್ನು ಟಾರ್ಗೆಟ್‌ ಮಾಡಿ ಸರ್ಕಾರಿ ಕೆಲಸ ಕೊಡುವುದಾಗಿ ಹಣ ಪಡೆದು ವಂಚಿಸಿದ ಆರೋಪಿ

Accused Arrested For Who Enter CM Home Office in Bengaluru grg
Author
Bengaluru, First Published Aug 20, 2022, 11:40 AM IST

ಬೆಂಗಳೂರು(ಆ.20):  ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಸೋಗಿನಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ‘ಕೃಷ್ಣಾ’ ಪ್ರವೇಶಿಸಿದ್ದ ವ್ಯಕ್ತಿಯನ್ನು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಮೂಲದ ಪರಮೇಶ್ವರ್‌ (30) ಬಂಧಿತ. ಕಳೆದ ಬುಧವಾರ ಬೆಳಗ್ಗೆ 11.30ರ ಸುಮಾರಿಗೆ ಆರೋಪಿ ಪರಮೇಶ್ವರ್‌ ‘ನಾನು ಬಿಬಿಎಂಪಿ ಎಇಇ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಅವರ ಆಪ್ತ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಇರುವುದರಿಂದ ಬಂದಿರುವುದಾಗಿ ಕೃಷ್ಣಾದ ಗೇಟ್‌ನಲ್ಲಿ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್‌ ಸಿಬ್ಬಂದಿಗೆ ಹೇಳಿ ಒಳಗೆ ಬಂದಿದ್ದಾನೆ.

ಸ್ಪೈ ಕ್ಯಾಮರಾ ಬಳಸಿ ಮಹಿಳೆಯರ ವಿಡಿಯೋ ಚಿತ್ರೀಕರಿಸ್ತಿದ್ದ ಕಾಮುಕ ಅರೆಸ್ಟ್‌

ಈ ವೇಳೆ ಈತನ ವರ್ತನೆ ಕಂಡು ಅನುಮಾನಗೊಂಡ ಭದ್ರತಾ ಸಿಬ್ಬಂದಿ, ಈತನನ್ನು ತಡೆದು ವಿಚಾರಿಸಿದ್ದಾರೆ. ಈ ವೇಳೆ ಆತ ಬಿಬಿಎಂಪಿ ಗುರುತಿನ ಚೀಟಿ ತೋರಿಸಿದ್ದಾನೆ. ಬಳಿಕ ಆತನ ಡ್ರೈವಿಂಗ್‌ ಲೈಸೆನ್ಸ್‌ ಪಡೆದು ಪರಿಶೀಲಿಸಿದಾಗ ಎರಡೂ ದಾಖಲೆಗಳಲ್ಲಿ ವಿಳಾಸ ಬೇರೆ ಬೇರೆ ಇರುವುದು ಗೊತ್ತಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಆರೋಪಿ ಪರಮೇಶ್ವರ್‌ ಸಮರ್ಪಕ ಉತ್ತರ ನೀಡಿಲ್ಲ. ಬಳಿಕ ಪೊಲೀಸರು, ಬಿಬಿಎಂಪಿ ಹಾಗೂ ಗೃಹಕಚೇರಿ ಕೃಷ್ಣಾದಲ್ಲಿ ಕೆಲಸ ಮಾಡುವ ಅಧಿಕಾರಿಗಳನ್ನು ಸಂಪರ್ಕಿಸಿ ಆರೋಪಿಯ ಬಗ್ಗೆ ವಿಚಾರಿಸಿದ್ದಾರೆ. ಈತ ಯಾರೆಂಬುದೇ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ. ಹೀಗಾಗಿ ಆತನನ್ನು ವಶಕ್ಕೆ ಪಡೆದು ಹೈಗ್ರೌಂಡ್ಸ್‌ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಪರಮೇಶ್ವರ್‌ ಬಿಬಿಎಂಪಿ ಇಂಜಿನಿಯರ್‌ ಎಂದು ನಕಲಿ ಐಡಿ ಕಾರ್ಡ್‌ ಸೃಷ್ಟಿಸಿ ತಾನೊಬ್ಬ ಸರ್ಕಾರಿ ನೌಕರರ ಎಂದು ಬಿಂಬಿಸಿಕೊಂಡು ಅಮಾಯಕರನ್ನು ಟಾರ್ಗೆಟ್‌ ಮಾಡಿ ಸರ್ಕಾರಿ ಕೆಲಸ ಕೊಡುವುದಾಗಿ ಹಣ ಪಡೆದು ವಂಚಿಸಿದ್ದಾನೆ ಎನ್ನಲಾಗಿದೆ. ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
 

Follow Us:
Download App:
  • android
  • ios