ಬೆಂಗಳೂರು(ಫೆ.26): ನಗರದಲ್ಲಿ ನಾಗರಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಹಾಗೂ ಹಣ ದೋಚುತ್ತಿದ್ದ ತಮಿಳುನಾಡು ಮೂಲದ ಕುಖ್ಯಾತ ಓಜಿ ಕುಪ್ಪಂ ತಂಡದ ಸದಸ್ಯನೊಬ್ಬ ಬಾಗಲಗುಂಟೆ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ರಾಮಮೂರ್ತಿನಗರದ ರತ್ನಕುಮಾರ್‌ ಅಲಿಯಾಸ್‌ ರತ್ನಂ (40) ಬಂಧಿತನಾಗಿದ್ದು, ಆರೋಪಿಯಿಂದ 10.25 ಲಕ್ಷ ಹಾಗೂ ಮೂರು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ರತ್ನನ ಸಹಚರರಾದ ರಿಷಿ, ಗೋಪಿ, ಹನುಮಂತು ಹಾಗೂ ಬಾಲಾಜಿ ಪತ್ತೆಗೆ ಬಲೆ ಬೀಸಲಾಗಿದೆ. ಹೆಸರುಘಟ್ಟಮುಖ್ಯರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್‌ ಬಳಿ ಕಳ್ಳತನಕ್ಕೆ ಓಜಿ ಕುಪ್ಪಂ ಗ್ಯಾಂಗ್‌ ಹೊಂಚು ಹಾಕಿತ್ತು. ಆಗ ಶಂಕೆ ಮೇರೆಗೆ ಮಫ್ತಿ ಪೊಲೀಸರು ಒಬ್ಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ.

ಹೇಗೆ ಕೃತ್ಯ:

ತಮಿಳುನಾಡಿನ ತಿರುವೆಟ್ಟೂರು ಮೂಲದ ರತ್ನ ಕುಮಾರ್‌ ನೇತೃತ್ವದ ತಂಡ, ಐದು ತಿಂಗಳ ಹಿಂದೆ ನಗರಕ್ಕೆ ಬಂದು ರಾಮಮೂರ್ತಿನಗರ ಹಾಗೂ ಮಾರತ್ತಹಳ್ಳಿ ವ್ಯಾಪ್ತಿಯಲ್ಲಿ ನೆಲೆಸಿತ್ತು. ಈ ತಂಡ ಜನರ ಗಮನ ಬೇರೆಡೆ ಸೆಳೆದು ಹಣ ದೋಚಿ ಪರಾರಿಯಾಗುತ್ತಿತ್ತು. ಚಿನ್ನಾಭರಣ ಅಂಗಡಿ ಹಾಗೂ ಬ್ಯಾಂಕ್‌ಗಳ ಮುಂದೆ ಓಜಿ ಕುಪ್ಪಂ ತಂಡದ ಸದಸ್ಯರು, ಹಣ ಹಾಗೂ ಆಭರಣ ಖರೀದಿಗೆ ಬರುವ ಜನರಿಗೆ ಗಾಳ ಹಾಕಲು ಹೊಂಚು ಹಾಕುತ್ತಿದ್ದರು.

ಉದ್ಯಮಿಗಳಿಂದ ಸ್ನೇಹಿತೆ ಮನೆಗೇ ಕನ್ನ: ಇಬ್ಬರ ಬಂಧನ

ಹಣ ಡ್ರಾ ಮಾಡುವ ಮತ್ತು ಚಿನ್ನಾಭರಣ ಖರೀದಿಸುವ ಗ್ರಾಹಕರನ್ನು ಗುರುತಿಸಿ ಅವರು ಹಿಂಬಾಲಿಸುತ್ತಿದ್ದರು. ಹಣ ಅಥವಾ ಆಭರಣ ಇರುವ ಬ್ಯಾಗನ್ನು ಕಾರು ಅಥವಾ ಬೈಕ್‌ಗಳಲ್ಲಿಟ್ಟು ಸಂತ್ರಸ್ತರು ಹೊರಟರೆ ಬ್ಯಾಗ್‌ ದೋಚುತ್ತಿದ್ದರು. ಕೆಲವು ಬಾರಿ ಕಾರಿನ ಮೇಲೆ ಏನಾದರೂ ಎಸೆದು, ಪಂಕ್ಚರ್‌ ಆಗಿದೆ ಎಂದು ಹೇಳಿ ವಾಹನ ನಿಲ್ಲಿಸಿ ಮಾಲಿಕರ ಗಮನ ಬೇರೆಡೆ ಸೆಳೆದು ಬ್ಯಾಗ್‌ ಕಳವು ಮಾಡುತ್ತಿದ್ದರು. ಇದೇ ರೀತಿ ಜಾಲಹಳ್ಳಿ ಕ್ರಾಸ್‌ನ ನೇತಾಜಿನಗರದ ಬಿ.ಸಿ.ರಾಘವೇಂದ್ರ ಎಂಬುವರಿಗೆ ಆರೋಪಿಗಳು ಯಾಮಾರಿಸಿದ್ದರು.

ಫೆ.10ರಂದು ಬ್ಯಾಂಕ್‌ನಲ್ಲಿ 2 ಲಕ್ಷ ಡ್ರಾ ಮಾಡಿಕೊಂಡು ರಾಘವೇಂದ್ರ ಅವರು, ತಮ್ಮ ಸ್ನೇಹಿತನ ಟಾಟಾ ಇಂಡಿಕಾ ಕಾರಿನ ಡ್ಯಾಶ್‌ ಬೋರ್ಡ್‌ ಮೇಲಿಟ್ಟಿದ್ದರು. ಸಂಜೆ 4.20ಕ್ಕೆ ಟಿ.ದಾಸರಹಳ್ಳಿ ಮೆಟ್ರೋ ನಿಲ್ದಾಣ ಹತ್ತಿರ ಹೋಟೆಲ್‌ ಮುಂಭಾಗ ಕಾರು ನಿಲ್ಲಿಸಿ ಊಟಕ್ಕೆ ಹೋಗಿದ್ದರು. ಆ ವೇಳೆ ಕಾರಿನ ಎಡ ಹಿಂಭಾಗದ ಗ್ಲಾಸ್‌ ಒಡೆದು ಕಿಡಿಗೇಡಿ ಹಣ ದೋಚಿದ್ದರು. ಈ ಕುರಿತು ರಾಘವೇಂದ್ರ ನೀಡಿದ ದೂರಿನ ಮೇರೆಗೆ ಇನ್‌ಸ್ಪೆಕ್ಟರ್‌ ಎಚ್‌.ಬಿ.ಸುನೀಲ್‌ ನೇತೃತ್ವದ ತಂಡ, ಆರೋಪಿಗಳ ಬಂಧನಕ್ಕೆ ಹುಡುಕಾಟ ನಡೆಸಿತ್ತು. ಕೊನೆಗೆ ಹೆಸರುಘಟ್ಟಮುಖ್ಯರಸ್ತೆ ಕರ್ನಾಟಕ ಬ್ಯಾಂಕ್‌ ಗ್ರಾಹಕರ ಹಣ ದೋಚಲು ಕಾಯುತ್ತಿದ್ದ ವೇಳೆ ರತ್ನಕುಮಾರ್‌ ತನಿಖಾ ತಂಡದ ಬಲೆಗೆ ಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫಾರಿನ್‌ ಟ್ರಿಪ್‌, ಮೋಜಿನ ಜೀವನ

ಕುಖ್ಯಾತ ಓಜಿ ಕುಪ್ಪಂ ತಂಡ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೃತ್ಯ ಎಸಗಿದೆ. ಹೀಗೆ ಸಂಪಾದಿಸಿದ ಹಣದಲ್ಲಿ ಅವರು ಐಷಾರಾಮಿ ಜೀವನ ನಡೆಸುತ್ತಿದ್ದರು. ತಮ್ಮ ಪತ್ನಿ, ಪ್ರಿಯತಮೆ ಜತೆ ಥೈಲ್ಯಾಂಡ್‌, ಸಿಂಗಾಪೂರ್‌, ಮಲೇಷಿಯಾ, ದುಬೈ, ಶ್ರೀಲಂಕಾಗೆ ಹೋಗಿ ಮೋಜು ಮಾಡುತ್ತಿದ್ದರು. ಐದು ತಿಂಗಳಿಂದ ನಗರದಲ್ಲಿ ಬೀಡು ಬಿಟ್ಟಿದ್ದ ರತ್ನಕುಮಾರ್‌ ತಂಡದಿಂದ 13 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.