ಉದ್ಯಮಿಗಳಿಂದ ಸ್ನೇಹಿತೆ ಮನೆಗೇ ಕನ್ನ: ಇಬ್ಬರ ಬಂಧನ
ರಿಯಲ್ ಎಸ್ಟೇಟ್ ಉದ್ಯಮಿಯ ಸ್ನೇಹಿತೆ ಕುಟುಂಬ ಊರಿಗೆ, ಅಣ್ಣ ಆಸ್ಪತ್ರೆಗೆ| ಫ್ಲ್ಯಾಟ್ ಕೀ ಕದ್ದು ನಕಲಿ ಮಾಡಿಸಿದ ಉದ್ಯಮಿ| ಮತ್ತೊಬ್ಬ ಸ್ನೇಹಿತನ ಮೂಲಕ ಮನೆಯಲ್ಲಿದ್ದ ಚಿನ್ನ, ದ್ವಿಚಕ್ರ ವಾಹನ, ವಿದೇಶಿ ಕರೆನ್ಸಿ ಸೇರಿ 1 ಕೋಟಿ ಮೌಲ್ಯದ ವಸ್ತು ದೋಚಿದ|
ಬೆಂಗಳೂರು(ಫೆ.21): ತಮ್ಮ ವ್ಯವಹಾರದಲ್ಲಿ ಉಂಟಾದ ನಷ್ಟದ ಹಿನ್ನೆಲೆಯಲ್ಲಿ ಸ್ನೇಹಿತೆಯ ಮನೆಯಲ್ಲಿ ವಿದೇಶಿ ಕರೆನ್ಸಿ ಸೇರಿದಂತೆ ಚಿನ್ನಾಭರಣ ಹಾಗೂ ಹಣ ಕಳವು ಮಾಡಿದ್ದ ಇಬ್ಬರು ರಿಯಲ್ ಎಸ್ಟೇಟ್ ಏಜೆಂಟರು ಪುಲಿಕೇಶಿ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಲಕ್ಕಸಂದ್ರದ ನಜೀಂ ಶರೀಫ್ ಶಾಹೀದ್ (41) ಹಾಗೂ ಗುರಪ್ಪನಪಾಳ್ಯದ ಮೊಹಮ್ಮದ್ ಶಫೀವುಲ್ಲಾ (42) ಬಂಧಿತರು. ಆರೋಪಿಗಳಿಂದ 38.64 ಲಕ್ಷ ಮತ್ತು 5.79 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ, 1 ಕಾರು, 2 ಮೊಬೈಲ್, 45 ಗ್ರಾಂ ಆಭರಣ ಸೇರಿ 1 ಕೋಟಿ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಕಾಕ್ಸ್‌ಟೌನ್‌ನ ಜ್ಯೋತಿ ಜ್ವಾಲ ಎಂಬುವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಕೃತ್ಯದ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್ ಎಸ್.ಎಡ್ವಿನ್ ಪ್ರದೀಪ್ ನೇತೃತ್ವದ ತಂಡ, ಸಿಸಿಟಿವಿ ಕ್ಯಾಮೆರಾಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಎಸ್.ಡಿ.ಶರಣಪ್ಪ ಸುದ್ದಿಗಾರರಿಗೆ ಶನಿವಾರ ತಿಳಿಸಿದರು.
ನಂಬಿಕೆ ದ್ರೋಹ:
ಕಾಕ್ಸ್‌ಟೌನ್‌ನಲ್ಲಿ ಜ್ಯೋತಿ ಜ್ವಾಲ ಅವರು, ತಮ್ಮ ತಾಯಿ, ಅಣ್ಣ ಹಾಗೂ ಅತ್ತಿಗೆ ಜತೆ ನೆಲೆಸಿದ್ದಾರೆ. ಹಲವು ವರ್ಷಗಳಿಂದ ಈ ಕುಟುಂಬಕ್ಕೆ ನಜೀಂ ಪರಿಚಯವಿತ್ತು. ಜನವರಿಯಲ್ಲಿ ಜ್ಯೋತಿ ಕುಟುಂಬ ಹುಟ್ಟೂರಿಗೆ ಹೋಗಿದ್ದರು. ಕೆಲ ದಿನಗಳ ಹಿಂದೆ ಅಣ್ಣ-ತಂಗಿ ಮಾತ್ರ ನಗರಕ್ಕೆ ಮರಳಿದ್ದರು. ಹೀಗಿರುವಾಗ ಜ್ಯೋತಿ ಅವರ ಸೋದರ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿದರು.
ಹಿಂದು ಅಪ್ರಾಪ್ತೆಯನ್ನು ಅಪಹರಿಸಿದ ಪಾಕ್ ಪೊಲೀಸ್: ಮತಾಂತರಕ್ಕೆ ಕಿರುಕುಳ
ಆಗ ತನ್ನ ಸ್ನೇಹಿತೆಯ ಫ್ಲ್ಯಾಟ್‌ಗೆ ಹೋಗಿದ್ದಾಗ ಅವರಿಗೆ ತಿಳಿಯದಂತೆ ಬೀಗ ಕೀಯನ್ನು ಎಗರಿಸಿದ ನಜೀಂ, ಬಳಿಕ ಅದನ್ನು ನಕಲಿ ಮಾಡಿಕೊಂಡಿದ್ದ. ಅದನ್ನು ತನ್ನ ಸ್ನೇಹಿತ ಮೊಹಮ್ಮದ್‌ಗೆ ಕೊಟ್ಟಿದ್ದ. ನಜೀಂ, ಜ.12ರಂದು ಆಸ್ಪತ್ರೆಯಲ್ಲಿದ್ದ ಜ್ಯೋತಿ ಸೋದರನ ಯೋಗಕ್ಷೇಮ ವಿಚಾರಕ್ಕೆ ತೆರಳಿದ್ದ. ಆ ವೇಳೆ ಜ್ಯೋತಿ ಇದ್ದಳು. ಈ ಸಮಯದಲ್ಲಿ ತನ್ನ ಸಹಚರನಿಗೆ ಸ್ನೇಹಿತೆ ಮನೆಗೆ ತೆರಳಿ ಕಳ್ಳತನ ಮಾಡುವಂತೆ ಸೂಚಿಸಿದ್ದ. ಅದರನ್ವಯ ಮೊಹಮ್ಮದ್, ನಕಲಿ ಕೀ ಬಳಸಿ ಜ್ಯೋತಿ ಫ್ಲ್ಯಾಟ್‌ಗೆ ತೆರಳಿ ಸೇಫ್ ಲಾಕರ್, ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನ ಕದ್ದು ಪರಾರಿಯಾಗಿದ್ದ. ಆಸ್ಪತ್ರೆಯಿಂದ ಜ್ಯೋತಿ ವಾಪಸ್ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿತ್ತು.
ಇನ್ನು ತಮ್ಮ ಬಗ್ಗೆ ಸುಳಿವು ಸಿಗದಂತೆ ಮನೆಯಲ್ಲಿ ಖಾರದ ಪುಡಿ ಎರಚಿದ್ದ. ಈ ಕುರಿತು ತನಿಖೆ ಆರಂಭಿಸಿದ ಪೊಲೀಸರಿಗೆ ಬೀಗ ಮುರಿಯದೆ ಕೀ ಬಳಸಿಯೇ ಫ್ಲ್ಯಾಟ್ ಪ್ರವೇಶಿಸಿದ್ದರಿಂದ ಕೃತ್ಯದಲ್ಲಿ ಪರಿಚಿತರ ಕೈವಾಡದ ಬಗ್ಗೆ ಶಂಕೆ ಮೂಡಿತ್ತು ಎಂದು ಡಿಸಿಪಿ ತಿಳಿಸಿದ್ದಾರೆ.
270 ಸಿಸಿ ಕ್ಯಾಮೆರಾ ಪರಿಶೀಲನೆ
ಈ ಕೃತ್ಯದಲ್ಲಿ ಕಳ್ಳರ ಜಾಡು ಪತ್ತೆಗೆ ಪೊಲೀಸರು 270ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಕಳ್ಳತನ ಎಸಗಿದ ಬಳಿಕ ಆರೋಪಿ, ಕದ್ದ ಬೈಕ್‌ನಲ್ಲಿ ಹಲಸೂರು ಕೆರೆ ಬಳಿಗೆ ಬಂದು ಅಲ್ಲಿಂದ ಆಟೋದಲ್ಲಿ ಎಂ.ಜಿ.ರಸ್ತೆ ತಲುಪಿದ್ದ. ಹೀಗೆ ಮೂರು ಬಾರಿ ಆಟೋ ಬದಲಾಯಿಸಿ ಕೊನೆಗೆ ಲಕ್ಕಸಂದ್ರದ 3ನೇ ಅಡ್ಡರಸ್ತೆ ಸೇರುವವರೆಗೆ ಮಾತ್ರ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಸಿಕ್ಕಿದ್ದವು. ಆದರೆ ಆಟೋ ಇಳಿದ ನಂತರ ಎಲ್ಲಿ ಹೋದ ಎಂಬುದು ಗೊತ್ತಾಗಲಿಲ್ಲ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯಲ್ಲಿದ್ದ ಆರೋಪಿ ಭಾವಚಿತ್ರ ತೆಗೆದು ಸ್ಥಳೀಯರನ್ನು ವಿಚಾರಿಸಿದಾಗ ಮೊಹಮ್ಮದ್ ಬಗ್ಗೆ ಸುಳಿವು ಲಭಿಸಿತು. ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ನಜೀಂ ಸೆರೆಯಾದ. ಕೊನೆಗೆ ಇಬ್ಬರು ತಪ್ಪೊಪ್ಪಿಕೊಂಡರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಉದ್ಯಮ ನಷ್ಟ ತಂದ ಸಂಕಷ್ಟ
ರಿಯಲ್ ಎಸ್ಟೇಟ್‌ನಲ್ಲಿ ನಜೀಂ ಹಾಗೂ ಗ್ರಾನೈಟ್ ವ್ಯಾಪಾರದಲ್ಲಿ ಮೊಹಮ್ಮದ್ ಕೈ ಸುಟ್ಟುಕೊಂಡಿದ್ದರು. ಇದರಿಂದ ಆರ್ಥಿಕ ಸಂಷ್ಟಕ್ಕೀಡಾಗಿದ್ದ ಅವರು, ಗೆಳತಿ ಮನೆಯಲ್ಲಿ ಕಳ್ಳತನಕ್ಕೆ ಸಂಚು ರೂಪಿಸಿದ್ದರು. ಆಕೆಯ ಮನೆಯಲ್ಲಿ ಹಣಕಾಸು ವ್ಯವಹಾರ ಬಗ್ಗೆ ನಜೀಂ ತಿಳಿದಿತ್ತು. ಕೃತ್ಯ ಸಂಬಂಧ ಠಾಣೆಗೆ ದೂರು ಕೊಡಲು ಜ್ಯೋತಿ ಜತೆ ನಜೀಂ ಸಹ ತೆರಳಿದ್ದ. ಹೀಗಾಗಿ ಆರಂಭದಲ್ಲಿ ಆತನ ಮೇಲೆ ಅನುಮಾನ ಬಂದಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.