ಬೆಂಗಳೂರು(ಡಿ.28): ಬೊಮ್ಮನಹಳ್ಳಿಯಲ್ಲಿ ಚಿನ್ನಾಭರಣಕ್ಕಾಗಿ ಹಾಡಹಗಲೇ ವೃದ್ಧೆಯನ್ನು ಹತ್ಯೆಗೈದಿದ್ದ ಪ್ರಕರಣ ಬೇಧಿಸಿರುವ ಪೊಲೀಸರು ಮಾದಕ ವ್ಯಸನಿಯೊಬ್ಬನನ್ನು ಬಲೆಗೆ ಬೀಳಿಸಿದ್ದಾರೆ. ಕೇರಳ ಮೂಲದ ಅನ್ಸಾರಿ ಅಲಿಯಾಸ್‌ ಶಾಹುಲ್‌ ಹಮೀದ್‌ (29) ಬಂಧಿತ. ಆರೋಪಿಯಿಂದ ಸುಮಾರು 2.5 ಲಕ್ಷ ರು. ಮೌಲ್ಯದ 48 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಡಿ.3ರಂದು ಆರೋಪಿ ಒಂಟಿ ವೃದ್ಧೆ ನಿರ್ಮಲಾ ಮೇರಿ (65) ಎಂಬುವರನ್ನು ಹತ್ಯೆ ಮಾಡಿದ್ದ.

ಏನಿದು ಪ್ರಕರಣ?

ಬೊಮ್ಮನಹಳ್ಳಿಯ ಮುನೇಶ್ವರ ಲೇಔಟ್‌ನ ನಿವಾಸಿ ನಿರ್ಮಲಾ ಮೇರಿ ಸ್ವಂತ ಕಟ್ಟಡದಲ್ಲಿ ವಾಸವಿದ್ದು, ಕೆಳ ಮಹಡಿಯಲ್ಲಿ ಅಂಗಡಿ ಇಟ್ಟುಕೊಂಡಿದ್ದರು. ಕಟ್ಟಡದ ಮೊದಲ ಮಹಡಿಯಲ್ಲಿ ಮನೆಗಳು ಖಾಲಿ ಇದ್ದವು. ನಿರ್ಮಲಾ ಅವರ ಪುತ್ರಿ ಮತ್ತು ಪುತ್ರ ಪ್ರತ್ಯೇಕವಾಗಿ ನೆಲೆಸಿದ್ದರು. ಡಿ.2ರಂದು ಅನ್ಸಾರಿ ಬಾಡಿಗೆಗೆ ಮನೆ ಬೇಕೆಂದು ವೃದ್ಧೆ ಬಳಿ ಮಾತನಾಡಿಕೊಂಡು ಹೋಗಿದ್ದ. ಈ ವೇಳೆ ವೃದ್ಧೆಯ ಮೈ ಮೇಲೆ ಚಿನ್ನಾಭರಣ ಇರುವುದನ್ನು ಆರೋಪಿ ಗಮನಿಸಿದ್ದ. ಮರುದಿನ ಬಂದಿದ್ದ ಅನ್ಸಾರಿ ಬಾಡಿಗೆ ಮನೆ ತೋರಿಸುವಂತೆ ವೃದ್ಧೆಯನ್ನು ಮೊದಲ ಮಹಡಿಗೆ ಕರೆದುಕೊಂಡು ಹೋಗಿ, ಚಿನ್ನಾಭರಣ ಕೊಡುವಂತೆ ಬೆದರಿಸಿದ್ದ. ವೃದ್ಧೆ ಚಿನ್ನಾಭರಣ ನೀಡಲು ನಿರಾಕರಿಸಿದಾಗ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿ, ಚಿನ್ನಾಭರಣ ಕದ್ದು ಪರಾರಿಯಾಗಿದ್ದ.

ಅಂಗಡಿ ಬಾಗಿಲು ಅರ್ಧಕ್ಕೆ ತೆರೆದಿದ್ದು, ಸಂಜೆಯಾದರೂ ನಿರ್ಮಲಾರ ಸುಳಿವು ಇರಲಿಲ್ಲ. ಇದರಿಂದ ಅನುಮಾನಗೊಂಡ ನೆರೆ ಮನೆಯ ಮಹಿಳೆಯೊಬ್ಬರು ಮೊದಲ ಮಹಡಿಗೆ ಹೋಗಿ ನೋಡಿದಾಗ ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಬೊಮ್ಮನಹಳ್ಳಿ ಇನ್ಸ್‌ಪೆಕ್ಟರ್‌ ರವಿಶಂಕರ್‌ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

ನಶೆಯಲ್ಲಿ ಕೊಂದ್ಬಿಟ್ಟೆ!

ಆರೋಪಿ ಮೇಲೆ ಕೇರಳದಲ್ಲಿ ಮನೆ ಕಳ್ಳತನ, ದ್ವಿಚಕ್ರ ವಾಹನ ಕಳವು ಹಾಗೂ ಮಾದಕ ವಸ್ತು ಪೂರೈಕೆ ಸೇರಿದಂತೆ 20ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಿವೆ. ಚಿಕ್ಕ ವಯಸ್ಸಿನಿಂದಲೇ ಅಪರಾಧ ಕೃತ್ಯದಲ್ಲಿ ತೊಡಗಿರುವ ಆರೋಪಿ, ಜೀವನದ ಅರ್ಧ ಭಾಗ ಜೈಲಿನಲ್ಲಿಯೇ ಕಳೆದಿದ್ದಾನೆ. ‘ಕಳ್ಳತನ ಮಾಡುವುದಷ್ಟೇ ನನ್ನ ಉದ್ದೇಶವಾಗಿತ್ತು. ವೃದ್ಧೆ ಚೀರಾಡಿದ್ದರಿಂದ ಡ್ರಗ್ಸ್‌ ನಶೆಯಲ್ಲಿ ಆಕೆಯನ್ನು ಹತ್ಯೆ ಮಾಡಿದೆ’ ಎಂದು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಟ್ರಾವೆಲ್ಸ್‌ ಏಜೆನ್ಸಿ ಸೋಗಲ್ಲಿ ಡ್ರಗ್ಸ್‌ ಮಾಫಿಯಾ: 32 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ

ಸುಳಿವು ಕೊಟ್ಟಬೈಕ್‌, ಚಪ್ಪಲಿ

ಆರೋಪಿ ಕೃತ್ಯದ ಹಿಂದಿನ ದಿನ ವೃದ್ಧೆಗೆ ಕರೆ ಮಾಡಿ ಮನೆ ಬಗ್ಗೆ ವಿಚಾರಿಸಿದ್ದ ಮಾಡಿದ್ದ. ವೃದ್ಧೆಯ ಕರೆಗಳ ಪರಿಶೀಲನೆ ನಡೆಸಿದ್ದ ಪೊಲೀಸರು, ಅನುಮಾನದ ಮೇರೆಗೆ ಆರೋಪಿಯ ಮೊಬೈಲ್‌ ಸಂಖ್ಯೆಯ ಜಾಡು ಹಿಡಿದು ಹೊರಟಿದ್ದರು. ಮೈಕೋ ಲೇಔಟ್‌ ಎಸಿಪಿ ಸುಧೀರ್‌ ಹೆಗಡೆ ಮತ್ತು ಇನ್ಸ್‌ಪೆಕ್ಟರ್‌ ಎಂ.ಎನ್‌.ರವಿಶಂಕರ್‌ ಅವರ ತಂಡ ಆರೋಪಿ ಬಂಧನಕ್ಕೆ ಬಲೆ ಬೀಸಿತ್ತು. ಬೇಗೂರು ಸಮೀಪ ಅನ್ಸಾರಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತಾದರೂ ಆತನ ಚಹರೆ ಗೊತ್ತಿಲ್ಲದಿರುವುದು ತಲೆ ನೋವಾಗಿ ಪರಿಣಮಿಸಿತ್ತು.

ಆರೋಪಿ ಮಹಿಳೆ ಜತೆ ಸಂಪರ್ಕ ಹೊಂದಿದ್ದನ್ನು ತಿಳಿದಿದ್ದ ಪೊಲೀಸರು, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಮಹಿಳೆ, ಅನ್ಸಾರಿ ಬಳಿ ಅಪಾಚಿ ಬೈಕ್‌ ಹಾಗೂ ಫ್ಯಾಷನ್‌ ಆಗಿರುವ ಚಪ್ಪಲಿ ಬಳಕೆ ಮಾಡುತ್ತಾನೆ ಎಂದು ಮಾಹಿತಿ ನೀಡಿದ್ದಳು. ಇದನ್ನು ಆಧಾರಿಸಿ ಪೊಲೀಸರು ಮಧ್ಯರಾತ್ರಿ ಬೇಗೂರಿನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು. ಪೊಲೀಸರಿಗೆ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಅಪಾಚಿ ಬೈಕ್‌ ಇರುವ ಮನೆಯೊಂದು ಪತ್ತೆಯಾಗಿತ್ತು. ಮನೆ ಮುಂದೆ ಡಿಸೈನ್‌್ಡ ಚಪ್ಪಲಿ ಇರುವುದನ್ನು ಪತ್ತೆ ಹಚ್ಚಿ, ಠಾಣೆಯಲ್ಲಿರುವ ಸಿಬ್ಬಂದಿಗೆ ಇದರ ಫೋಟೋ ಕಳುಹಿಸಿ, ಮಹಿಳೆಯ ಬಳಿ ಆರೋಪಿ ಈತನೇ ಎಂದು ಖಚಿತ ಪಡಿಸಿಕೊಳ್ಳಲಾಯಿತು. ಬಳಿಕ ಮನೆಗೆ ನುಗ್ಗಿ ಆರೋಪಿಯನ್ನು ಬಂಧಿಸಲಾಯಿತು. ಈ ವೇಳೆ ಮೂವರು ಯುವಕರು ಮನೆಯಲ್ಲಿದ್ದರು. ಅನ್ಸಾರಿ ಯಾರಿಗೂ ಅನುಮಾನಬಾರದಂತೆ ತಲೆ ಬೊಳಿಸಿಕೊಂಡಿದ್ದ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಖೋಟಾ ನೋಟು ಪ್ರಕರಣದ ಬಯಲಿಗೆ

ಕೊಲೆ ಪ್ರಕರಣದಲ್ಲಿ ಆರೋಪಿ ಅನ್ಸಾರಿ ಬಂಧಿಸಿದ ಪೊಲೀಸರಿಗೆ, ಆತ ಕೇರಳದ ಮತ್ತೊಬ್ಬನ ಜತೆ ಸೇರಿ ಖೋಟಾ ನೋಟು ದಂಧೆ ನಡೆಸುತ್ತಿದ್ದ ಸಂಗತಿಯು ವಿಚಾರಣೆ ವೇಳೆ ತಿಳಿದುಬಂದಿದೆ. ಈ ಸಂಬಂಧ ಪ್ರದೀಪ್‌ ಎಂಬಾತನನ್ನು ಬಂಧಿಸಿದ್ದಾರೆ.

ನಗರದಲ್ಲಿ ಕಳೆದ ನಾಲ್ಕು ತಿಂಗಳಿಂದ ಖೋಟಾ ನೋಟು ಮುದ್ರಣ ಮಾಡಿ ಆರೋಪಿಗಳು ಚಲಾವಣೆ ಮಾಡುತ್ತಿದ್ದರು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಆರೋಪಿ ಕದ್ದ ಚಿನ್ನಾಭರಣವನ್ನು ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ನೆರವಿನೊಂದಿಗೆ ಚಿನ್ನಾಭರಣ ಮಳಿಗೆಯಲ್ಲಿ ಅಡವಿಟ್ಟಿದ್ದ. ಈ ಹಣದಲ್ಲಿ ಮಹಿಳೆಗೆ .25 ಸಾವಿರ ಕೊಟ್ಟಿದ್ದ ಎಂದು ತಿಳಿಸಿದ್ದಾರೆ.