*  ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿ ಬಳಿಕ ಫೋಟೋ ಕಳುಹಿಸಿ ವಿಕೃತಿ*  ಪುರುಷೋತ್ತಮ್‌ ಬಂಧಿತ ಆರೋಪಿ*  ಮೊಬೈಲ್‌ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು 

ಬೆಂಗಳೂರು(ಜೂ.02): ಫೇಸ್‌ಬುಕ್‌ನಲ್ಲಿ ಮಹಿಳೆಯರನ್ನು ಸ್ನೇಹ ಮಾಡಿಕೊಂಡು ಬಳಿಕ ಅವರಿಗೆ ಆಶ್ಲೀಲ ಫೋಟೋ ಹಾಗೂ ವಿಡಿಯೋ ಕಳುಹಿಸಿ ಕಿರುಕುಳ ನೀಡುತ್ತಿದ್ದ ವಿಕೃತ ಮನಸ್ಸಿನ ವ್ಯಕ್ತಿಯನ್ನು ಆಗ್ನೇಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮಡಿವಾಳದ ಜೈಭೀಮ್‌ ನಗರದ ಪುರುಷೋತ್ತಮ್‌ (40) ಬಂಧಿತನಾಗಿದ್ದು, ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೊಬೈಲ್‌ ಮೂಲಕ ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಚಿಕ್ಕೋಡಿ: ಎಂಟು ವರ್ಷದ ಮಗಳ ಜತೆ ತಾಯಿ ಆತ್ಮಹತ್ಯೆ

ತನ್ನ ಪತ್ನಿ ಮತ್ತು ಮಗನ ಜತೆ ನೆಲೆಸಿದ್ದ ಪುರುಷೋತ್ತಮ್‌, ಹಲವು ದಿನಗಳಿಂದ ಝೋಮ್ಯಾಟೋದಲ್ಲಿ ಫುಡ್‌ ಡೆಲವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ. ಫೇಸ್‌ಬುಕ್‌ನಲ್ಲಿ ಹೆಣ್ಣು ಮಕ್ಕಳಿಗೆ ಫ್ರೆಂಡ್‌ ರಿಕ್ವೆಸ್ಟ್‌ ತಾನೇ ಕಳುಹಿಸಿ ಸ್ನೇಹ ಮಾಡಿಕೊಳ್ಳುತ್ತಿದ್ದ ಆರೋಪಿ, ಬಳಿಕ ಅವರಿಗೆ ಮೆಸೇಂಜರ್‌ನಲ್ಲಿ ಆಶ್ಲೀಲ ವಿಡಿಯೋ ಹಾಗೂ ಫೋಟೋ ಕಳುಹಿಸಿ ಕಿರುಕುಳ ನೀಡುತ್ತಿದ್ದ. ಈ ಕಿರುಕುಳ ಸಹಿಲಾರದೆ ಕೆಲವು ಮಹಿಳೆಯರು, ಆನ್‌ಲೈನ್‌ ಮೂಲಕ ಕೇಂದ್ರ ಗೃಹ ಇಲಾಖೆಯ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಿದ್ದರು. ಆಗ್ನೇಯ ವಿಭಾಗದ ಸಿಇಎನ್‌ ಠಾಣೆಯ ಪೊಲೀಸರು ತನಿಖೆ ಆರಂಭಿಸಿದರು. 2021ರ ಸೆಪ್ಟೆಂಬರ್‌ನಲ್ಲೇ ಆರೋಪಿ ವಿರುದ್ಧ ಪ್ರಕರಣ ದಾಖಲಾಯಿತು. ಅಷ್ಟರಲ್ಲಿ ಮಡಿವಾಳ ತೊರೆದು ಹೊಸೂರು ರಸ್ತೆಯ ಬೇಗೂರು ಕಡೆಗೆ ಕುಟುಂಬ ಸಮೇತ ಆತ ವಾಸ್ತವ್ಯ ಬದಲಾಯಿಸಿದ್ದ. ಆದರೆ ಮೊಬೈಲ್‌ ಕರೆಗಳು ಹಾಗೂ ಫೇಸ್‌ಬುಕ್‌ ಮಾಹಿತಿ ಆಧರಿಸಿ ಆರೋಪಿಯನ್ನು ಮಡಿವಾಳ ಉಪ ವಿಭಾಗದ ಎಸಿಪಿ ಸುಧೀರ್‌ ಎಂ.ಹೆಗಡೆ ನೇತೃತ್ವದ ತಂಡ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.