7 ಲಕ್ಷ ಕದ್ದೊಯ್ದು ಪ್ರೇಯಸಿಯೊಂದಿಗೆ ಎಂಜಾಯ್ ಮಾಡ್ತಿದ್ದ ಭೂಪನ ಬಂಧನ..!
ಗದಗ ನಗರದ ಜೈನ್ ಟ್ರೇಡರ್ಸ್‌ನಲ್ಲಿ ಕೆಲಸಕ್ಕಿದ್ದ ರಾಜಸ್ಥಾನದ ರಾಮಸಿಂಗ್| ಮಾಲೀಕರು ಬ್ಯಾಂಕ್‌ಗೆ ಕಟ್ಟಲು ಕೊಟ್ಟಿದ್ದ ಹಣದೊಂದಿಗೆ ಪರಾರಿ| ಪ್ರಿಯತಮೆ ಜತೆಗೆ ಪಾರ್ಕ್ ಸೇರಿದಂತೆ ಎಲ್ಲೆಡೆ ಸುತ್ತಾಡುತ್ತಾ ಐಶಾರಾಮಿ ಜೀವನ ನಡೆಸುತ್ತಿದ್ದ ಆರೋಪಿ|
ಗದಗ(ಫೆ.27): ತನಗೆ ಕೆಲಸ ನೀಡಿದ್ದ ಮಾಲೀಕನ ಹಣವನ್ನೇ ಕದ್ದೊಯ್ದು ದೂರದ ರಾಜಸ್ಥಾನದಲ್ಲಿ ತನ್ನ ಪ್ರೇಯಸಿಯೊಂದಿಗೆ ಐಶಾರಾಮಿ ಜೀವನ ನಡೆಸುತ್ತಿದ್ದ ವ್ಯಕ್ತಿಯನ್ನು ಎರಡು ದಿನಗಳ ಹಿಂದೆ ಬಂಧಿಸುವಲ್ಲಿ ಗದಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು.. ಉಂಡ ಮನೆಗೆ ಕನ್ನ ಹಾಕಿದ ರಾಮಸಿಂಗ್ ರಜಪೂತ ಎಂಬುವ ಮಾಲೀಕರ ವಿಶ್ವಾಸ ಗಳಿಸಿ ಲಕ್ಷಾಂತರ ರುಪಾಯಿ ದೋಚಿಕೊಂಡು ಹೋಗಿದ್ದ. ಹಣ ಕದ್ದೊಯ್ದು ತನ್ನ ಪ್ರಿಯತಮೆಯೊಂದಿಗೆ ಐಷಾರಾಮಿಯಾಗಿ ಕಾಲ ಕಳೆಯುತ್ತಿದ್ದ. ಆತನನ್ನು ಈಗ ಗದಗ ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ:
ಗದಗ ನಗರದ ಜೈನ್ ಟ್ರೇಡರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ರಾಮಸಿಂಗ್ ರಜಪೂತ ಜ. 19ರಂದು ಮಾಲೀಕ ವಿಕಾಸ್ ಜೈನ್ ಅವರ 7 ಲಕ್ಷ ಹಣ ತೆಗೆದುಕೊಂಡು ಪರಾರಿಯಾಗಿದ್ದನು. ಸಾಕಷ್ಟು ವಿಶ್ವಾಸ ಗಳಿಸಿದ್ದ ಆತನಿಗೆ ಮಾಲೀಕರು ಬೈಕ್ ಕೊಟ್ಟು ಗದಗ ನಗರದ ಏಕ್ಸಿಸ್ ಬ್ಯಾಂಕಿಗೆ ಹಣ ಕಟ್ಟಲು ಕಳಿಸಿದ್ದರು. ಆದರೆ ರಾಮಸಿಂಗ್, ಹಣದೊಂದಿಗೆ ನಾಪತ್ತೆಯಾಗಿದ್ದ. ಈ ಕುರಿತು ಮಾಲೀಕರು ಗದಗ ಬಡಾವಣಾ ಪೊಲೀಸ್ ಠಾಣೆಯನ್ನು ದೂರು ದಾಖಲಿಸಿದ್ದರು.
ಕೌನ್ ಬನೇಗಾ ಕರೋಡ್ ಪತಿ ಹೆಸರಲ್ಲಿ ಲಕ್ಷಾಂತರ ರು ವಂಚನೆ
ಆರೋಪಿಯನ್ನು ಬಂಧಿಸಿದ ಪೊಲೀಸರು:
ರಾಮಸಿಂಗ್ ಮೂಲತಃ ರಾಜಸ್ಥಾನದವನು. ಹಣದೊಂದಿಗೆ ನೇರವಾಗಿ ರಾಜಸ್ಥಾನಕ್ಕೆ ತೆರಳಿದ್ದಾನೆ. ಆದರೆ ತನ್ನೂರಿಗೆ ಹೋಗಿಲ್ಲ. ಇನ್ನೊಂದು ಗ್ರಾಮದಲ್ಲಿ ಅವನ ಪ್ರಿಯತಮೆ ಜತೆಗೆ ಪಾರ್ಕ್ ಸೇರಿದಂತೆ ಎಲ್ಲೆಡೆ ಸುತ್ತಾಡುತ್ತಾ ಐಶಾರಾಮಿ ಜೀವನ ನಡೆಸುತ್ತಿದ್ದ. ಗದಗ ಪೊಲೀಸರು ಈತನ ಫೋನ್ ಕರೆಯ ಮಾಹಿತಿಯನ್ನು ಪಡೆದುಕೊಂಡು ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ದು, ಕೊನೆಗೆ ರಾಜಸ್ಥಾನದಲ್ಲಿ ಈತ ಇರುವ ಮಾಹಿತಿ ಪಡೆದು ಅಲ್ಲಿಂದ ಬಂಧಿಸಿ ಕರೆದುಕೊಂಡು ಬಂದಿದ್ದಾರೆ.
ಅತಿಯಾದ ನಂಬಿಕೆಯಿಂದ ನನಗೆ ಭಾರಿ ಮೋಸವಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿ ನನಗೆ ಹಣ ವಾಪಸ್ ಕೊಡಿಸಿದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಪೊಲೀಸರ ಮೇಲೆ ವಿಶ್ವಾಸ, ನಂಬಿಕೆ ಇರಬೇಕು ಎಂದು ಜೈನ್ ಟ್ರೇಡರ್ಸ್ ಮಾಲೀಕ ವಿಕಾಸ್ ಜೈನ್ ತಿಳಿಸಿದ್ದಾರೆ.
ಜೈನ್ ಟ್ರೇಡರ್ಸ್ ಮಾಲೀಕರಿಂದ ದೂರು ಪಡೆದು ತನಿಖೆ ಪ್ರಾರಂಭಿಸಲಾಗಿ, ಆರೋಪಿಯ ಕಾಲ್ ಡಿಟೇಲ್ಸ್ ಇನ್ನಿತರ ಮಾಹಿತಿ ಕಲೆ ಹಾಕಿ, ಕಾರ್ಯಾಚರಣೆ ನಡೆಸಿದ್ದು, ಸದ್ಯ ಆರೋಪಿಯನ್ನು ಬಂಧಿಸಿ, ರಾಜಸ್ಥಾನದಿಂದ ಕರೆದುಕೊಂಡು ಬರಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್ ಹೇಳಿದ್ದಾರೆ.