Robbery Case: ತಾನೇ ಖಾರದ ಪುಡಿ ಎರಚಿಕೊಂಡು ದರೋಡೆ ಕಥೆ ಕಟ್ಟಿದ ಭೂಪ..!
* ಕಂಪನಿಯ ಹಣ ಮನೆಯಲ್ಲಿಟ್ಟು ಬಂದಿದ್ದ ನೌಕರ
* ದಾರಿ ಹೋಕರು ಹಣ ದೋಚಿದರು ಎಂದು ದೂರು ನೀಡಿದ್ದ ಆಟ್ಟಿಕಾ ನೌಕರ
* ಮೇಲ್ಸೇತುವೆ ಮೇಲೆ ಹೈಡ್ರಾಮಾ ಸೃಷ್ಟಿಸಿದ
ಬೆಂಗಳೂರು(ಜ.13): ತಾನೇ ಕಂಪನಿಯ ಹಣ ಕದ್ದು ಬಳಿಕ ಕಣ್ಣಿಗೆ ಖಾರದ ಪುಡಿ ಎರಚಿಕೊಂಡು ದರೋಡೆ(Robbery) ಸುಳ್ಳಿನ ನಾಟಕ ಹೆಣೆದು ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ನೌಕರನೊಬ್ಬ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ(Jail) ಸೇರುವಂತಾಗಿದೆ.
ಜೆ.ಪಿ.ನಗರದ 7ನೇ ಹಂತದ ನಿವಾಸಿ ಅರುಣ್ ಕುಮಾರ್ (29) ಬಂಧಿತನಾಗಿದ್ದು(Arrest), ಆರೋಪಿಯಿಂದ 4 ಲಕ್ಷ ನಗದು ಜಪ್ತಿ ಮಾಡಲಾಗಿದೆ. ತನ್ನ ಕಂಪನಿಯ ಪ್ರಧಾನ ಕಚೇರಿಯಿಂದ ಶಾಖಾ ಕಚೇರಿಗೆ ಬುಧವಾರ ಹಣ ಸಾಗಿಸುವಾಗ ಅರುಣ್, ಮೈಸೂರು ರಸ್ತೆಯ ನಾಯಂಡಹಳ್ಳಿ ಮೇಲ್ಸೇತುವೆಯಲ್ಲಿ ಈ ದರೋಡೆ ಕೃತ್ಯ ನಡೆದಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದ. ಆಗ ಆತ ನಡವಳಿಕೆ ಮೇಲೆ ಅನುಮಾನಗೊಂಡ ಬ್ಯಾಟರಾಯನಪುರ ಠಾಣೆ ಪೊಲೀಸರು(Police) ‘ತೀವ್ರ’ವಾಗಿ ಪ್ರಶ್ನಿಸಿದಾಗ ಸತ್ಯ ಬಯಲಾಗಿದೆ.
Bulli Bai App : ನಾನು ಮಾಡಿದ್ದು ಸರಿಯಾಗೇ ಇತ್ತು ಎಂದ ಬುಲ್ಲಿ ಬಾಯಿ ರೂವಾರಿ!
ಹಣಕಾಸು ಸಮಸ್ಯೆಯಿಂದ ಕಳ್ಳತನ:
ಜೆ.ಪಿ.ನಗರದಲ್ಲಿ ತನ್ನ ತಾಯಿ ಜತೆ ನೆಲೆಸಿರುವ ಅರುಣ್, ತಿಂಗಳ ಹಿಂದಷ್ಟೇ ಅಟ್ಟಿಕಾ ಗೋಲ್ಡ್ ಕಂಪನಿಗೆ ಉದ್ಯೋಗಕ್ಕೆ ಸೇರಿದ್ದ. ಕೆಲ ದಿನಗಳ ಹಿಂದೆ ಸಾಲ ಮಾಡಿ ತನ್ನ ತಂಗಿ ಮದುವೆ ಮಾಡಿ ಆತ ಹಣಕಾಸು ಸಂಕಷ್ಟಕ್ಕೆ ಸಿಲುಕಿದ್ದ. ಈ ಹಿನ್ನೆಲೆಯಲ್ಲಿ ತನ್ನ ಕಂಪನಿಯಲ್ಲಿ ಹಣ ದೋಚಲು ಆರೋಪಿ(Accused) ಯೋಜಿಸಿದ್ದಾನೆ. ನಗರದ ಕ್ವಿನ್ಸ್ ರಸ್ತೆಯಲ್ಲಿರುವ ಅಟ್ಟಿಕಾ ಗೋಲ್ಡ್ ಕಂಪನಿಯ ಪ್ರಧಾನ ಕಚೇರಿಯಿಂದ ಪ್ರತಿದಿನ ಬೆಳಗ್ಗೆ ಶಾಖಾ ಕಚೇರಿಗಳಿಗೆ ಹಣ ಸಾಗಿಸುವ ಕೆಲಸಕ್ಕೆ ಅರುಣ್ ನಿಯೋಜಿತನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಅಂತೆಯೇ ಬುಧವಾರ ಬೆಳಗ್ಗೆ ಕೆಲಸಕ್ಕೆ ಬಂದ ಅರುಣ್, ಕಂಪನಿಯ ಪ್ರಧಾನ ಕಚೇರಿಯಲ್ಲಿ 8 ಲಕ್ಷ ತೆಗೆದುಕೊಂಡು ಬಾಪೂಜಿ ನಗರ ಹಾಗೂ ಕೆಂಗೇರಿ ಶಾಖಾ ಕಚೇರಿಗಳಿಗೆ ಹಣ ಪೂರೈಸಬೇಕಿತ್ತು. ಆದರೆ ಶಾಖಾ ಕಚೇರಿಗಳಿಗೆ ತೆರಳದೆ ಆತ, ತನ್ನ ಮನೆಗೆ ಹೋಗಿ .8 ಲಕ್ಷ ಪೈಕಿ .4 ಲಕ್ಷ ಅಲ್ಲಿಟ್ಟು ಬಳಿಕ ಬಾಪೂಜಿ ನಗರ ಕಚೇರಿಗೆ ಇನ್ನುಳಿದ .4 ಲಕ್ಷ ನೀಡಿದ್ದ. ಪೂರ್ವ ನಿಗದಿಯಂತೆ ಆತ ಕೆಂಗೇರಿ ಕಚೇರಿಗೆ ಹಣ ಪೂರೈಸಲು ಹೋಗಬೇಕಿತ್ತು. ಆದರೆ ಮಾರ್ಗ ಮಧ್ಯೆ ನಾಯಂಡಹಳ್ಳಿ ಮೇಲ್ಸೇತುವೆಯಲ್ಲಿ ತನ್ನ ಕಣ್ಣಿಗೆ ಖಾರದ ಪುಡಿ ಎರಚಿ ಕಿಡಿಗೇಡಿಗಳು ದರೋಡೆ ಮಾಡಿರುವುದಾಗಿ ಹುಸಿ ನಾಟಕ ಮಾಡಿದ್ದ ಅಧಿಕಾರಿಗಳು ತಿಳಿಸಿದ್ದಾರೆ.
Mangaluru Police Suspend: ಕರ್ತವ್ಯ ಲೋಪ ಮಾಡಿದ 6 ಸಿಬ್ಬಂದಿ ಸಸ್ಪೆಂಡ್, ಮಹಿಳೆಯರದ್ದೇ ಸಿಂಹಪಾಲು!
ಮೇಲ್ಸೇತುವೆ ಮೇಲೆ ಹೈಡ್ರಾಮಾ ಸೃಷ್ಟಿಸಿದ
ಮೇಲ್ಸೇತುವೆಯಲ್ಲಿ ಬೆಳಗ್ಗೆ 10.45ರ ವೇಳೆ ಬೈಕ್ ನಿಲ್ಲಿಸಿ ಮೈ ಮೇಲೆ ಖಾರದ ಪುಡಿ ಎರಚಿಕೊಂಡ ಆರೋಪಿ, ಬಳಿಕ ತನ್ನಿಂದ ಹಣ ಕಸಿದುಕೊಂಡು ದುಷ್ಕರ್ಮಿಗಳು ಪರಾರಿಯಾದರು ಎಂದು ಚೀರಾಡಿದ್ದಾನೆ. ಆಗ ಜಮಾಯಿಸಿದ ಸಾರ್ವಜನಿಕರಿಗೆ ತನ್ನ ಮೊಬೈಲ್ ಕೊಟ್ಟು ಆತ, ಖಾರದ ಪುಡಿ ಎರಚಿದ ಮುಖವನ್ನು ತೊಳೆದುಕೊಂಡಿದ್ದಾನೆ. ಬಳಿಕ 11.48ಕ್ಕೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕಿಡಿಗೇಡಿಗಳು ಹಣ ದೋಚಿದ್ದಾರೆ ಎಂದು ಮಾಹಿತಿ ನೀಡಿದ್ದ. ಇದಕ್ಕೂ ಹದಿನೈದು ನಿಮಿಷಗಳ ಮುನ್ನ ತನ್ನ ಕಂಪನಿಯ ಹಿರಿಯ ಅಧಿಕಾರಿಗಳಿಗೂ ದರೋಡೆ ವಿಚಾರ ತಿಳಿಸಿದ್ದ.
ಈ ಬಗ್ಗೆ ಮಾಹಿತಿ ಪಡೆದ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ತಂಡ, ಘಟನಾ ಸ್ಥಳಕ್ಕೆ ತೆರಳಿ ಅರುಣ್‌ನನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದೆ. ಆಗ ಆತ ನಡವಳಿಕೆಯಿಂದ ಇನ್‌ಸ್ಪೆಕ್ಟರ್ ಶಂಕಿತರಾಗಿದ್ದಾರೆ. ದರೋಡೆ ಕೃತ್ಯ ನಡೆದು ಒಂದು ತಾಸಿನ ಬಳಿಕ ಪೊಲೀಸರು ಹಾಗೂ ಅಟ್ಟಿಕಾ ಕಂಪನಿಗೆ ಆತ ತಿಳಿಸಿದ್ದು ಗೊತ್ತಾಗಿದೆ. ಅಲ್ಲದೆ, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾಗ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಕಳ್ಳತನ ಮಾಡಿದರು ಎಂದಿದ್ದ. ಸಾಮಾನ್ಯವಾಗಿ ಮೇಲ್ಸೇತುವೆಯಲ್ಲಿ ನಡೆದುಕೊಂಡು ಯಾರೂ ಹೋಗುವುದಿಲ್ಲ. ಇದರಿಂದ ಆತನ ಮೇಲೆ ಮತ್ತಷ್ಟು ಅನುಮಾನ ಮೂಡಿತು. ಬಳಿಕ ಖಾಸಗಿ ಆಸ್ಪತ್ರೆಗೆ ಆತನನ್ನು ಕರೆದೊಯ್ದು ಪರೀಕ್ಷೆ ನಡೆಸಿದಾಗ ಕಣ್ಣಿಗೆ ಖಾರದ ಪುಡಿ ಬಿದ್ದಿಲ್ಲವೆಂದು ವೈದ್ಯರು(Doctors) ಸ್ಪಷ್ಟಪಡಿಸಿದರು. ಬಳಿಕ ಆರೋಪಿಯನ್ನು ತೀವ್ರವಾಗಿ ಪ್ರಶ್ನಿಸಿದಾಗ ಕೊನೆಗೆ ಸತ್ಯ ಬಾಯ್ಬಿಟ್ಟ ಎಂದು ಅಧಿಕಾರಿಗಳು ಹೇಳಿದ್ದಾರೆ.