* ಒಂದೇ ವಾಹನ ಬಳಸಿ ಇಬ್ಬರಿಗೆ ವಂಚಿಸುತ್ತಿದ್ದ ಆನ್‌ಲೈನ್ ಮಾಸ್ಟರ್* ಆನ್‌ಲೈನ್ ವಂಚನೆಯಲ್ಲಿ ಮಾಸ್ಟರ್* ಕನಕಪುರ ತಾಲೂಕಿನ ಕಡವೆ ಕೆರೆದೊಡ್ಡಿ ನಿವಾಸಿ ಎನ್.ಮಂಜುನಾಥ ಬಂಧಿತ ಆರೋಪಿ
ಬೆಂಗಳೂರು(ಜೂ.17): ಒಎಲ್‌ಎಕ್ಸ್ ಜಾಲತಾಣದಲ್ಲಿ ವಾಹನ ಮಾರಾಟ ಮತ್ತು ಖರೀದಿ ಸೋಗಿನಲ್ಲಿ ಮಾಲಿಕರನ್ನು ಸಂಪರ್ಕಿಸಿ ಹಣ ಪಡೆದು ವಂಚಿಸುತ್ತಿದ್ದ ಮೋಸಗಾರನೊಬ್ಬ ವಿದ್ಯಾರಣ್ಯಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ರಾಮನಗರ ಕನಕಪುರ ತಾಲೂಕಿನ ಕಡವೆ ಕೆರೆದೊಡ್ಡಿ ನಿವಾಸಿ ಎನ್.ಮಂಜುನಾಥ ಅಲಿಯಾಸ್ ಒಎಲ್‌ಎಕ್ಸ್ ಮಂಜ ಬಂಧಿತನಾಗಿದ್ದು, ಆರೋಪಿಯಿಂದ 3 ಕಾರು, 1 ದ್ವಿಚಕ್ರ ವಾಹನ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಐದು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.
ಆನ್‌ಲೈನ್ ವಂಚನೆಯಲ್ಲಿ ಮಾಸ್ಟರ್:
ಮಂಜುನಾಥ್ ಅಲಿಯಾಸ್ ಒಎಲ್‌ಎಕ್ಸ್ ಮಂಜ ವೃತ್ತಿಪರ ಆನ್‌ಲೈನ್ ವಂಚಕನಾಗಿದ್ದು, 2019ರಲ್ಲಿ ಆನ್‌ಲೈನ್ ವಂಚನೆ ಕೃತ್ಯದಲ್ಲಿ ಆತನನ್ನು ಮೊದಲ ಬಾರಿಗೆ ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದರು. ಆನಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಆತ, ಮತ್ತೆ ತನ್ನ ಚಾಳಿ ಮುಂದುವರೆಸಿದ್ದ. ಈಗ ಬಂಧನದಿಂದ 9 ಪ್ರಕರಣಗಳು ಪತ್ತೆಯಾಗಿವೆ. 10ನೇ ತರಗತಿ ಮಾತ್ರ ವಿದ್ಯಾರ್ಹತೆ ಹೊಂದಿರುವ ಮಂಜ, ಆಲ್‌ಲೈನ್ ವಂಚನೆಯಲ್ಲಿ ಭಾರಿ ನಿಷ್ಣಾತನಾಗಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
Chikkamagaluru: ತಮಿಳುನಾಡು ಮೂಲದ ಎಟಿಎಂ ವಂಚಕನ ಬಂಧಿಸಿದ ಮೂಡಿಗೆರೆ ಪೋಲೀಸರು
ತನ್ನೂರಿನಲ್ಲಿ ಸರಕು ಸಾಗಾಣೆ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಆತ, ತನ್ನ ಪತ್ನಿ, ಮಗು ಹಾಗೂ ತಾಯಿ ಜತೆ ನೆಲೆಸಿದ್ದಾನೆ. ಸುಲಭವಾಗಿ ಹಣ ಸಂಪಾದನೆಗೆ ಅಡ್ಡದಾರಿ ತುಳಿದು ಆಲ್‌ಲೈನ್ ವಂಚಿಸುವುದನ್ನೇ ವೃತ್ತಿಯಾಗಿಸಿಕೊಂಡಿದ್ದ. ಒಎಲ್‌ಎಕ್ಸ್‌ನಲ್ಲಿ ಬೈಕ್ ಹಾಗೂ ಕಾರುಗಳ ಮಾರಾಟದ ಜಾಹೀರಾತು ಪ್ರಕಟಿಸುವ ಸಾರ್ವಜನಿಕರನ್ನೇ ಗುರಿಯಾಗಿಸಿಕೊಂಡು ಆತ ಮೋಸ ಮಾಡುತ್ತಿದ್ದ.
ಸೆಕ್ಯೂರಿಟಿ ಗಾರ್ಡ್, ಕೂಲಿ ಕಾರ್ಮಿಕರು ಹಾಗೂ ನಿರುದ್ಯೋಗಿಗಳಿಗೆ ಕೆಲಸದ ಆಮಿಷ ಒಡ್ಡಿ ಅವರ ಆಧಾರ್ ಕಾರ್ಡ್ ಸಂಗ್ರಹಿಸುತ್ತಿದ್ದ ಆರೋಪಿ, ಬಳಿಕ ಅದನ್ನು ಬಳಸಿಕೊಂಡು ಹೊಸ ಸಿಮ್ ಖರೀದಿಸುತ್ತಿದ್ದ. ಈ ಸಿಮ್ ಬಳಸಿಕೊಂಡು ಒಎಲ್‌ಎಕ್ಸ್ ಆ್ಯಪ್ ಡೌನ್‌ಲೋಡ್ ಮಾಡುತ್ತಿದ್ದ. ಆಗ ಮಾರಾಟಕ್ಕಿಟ್ಟಿರುವ ವಾಹನ ಮಾಲಿಕರನ್ನು ಸಂಪರ್ಕಿಸಿ ವಾಹನ ಖರೀದಿಸುವುದಾಗಿ ನಂಬಿಸಿ ಟೆಸ್ಟ್ ಡ್ರೈವ್ ನೆಪದಲ್ಲಿ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದ. ಬಳಿಕ ವಾಹನದೊಂದಿಗೆ ಪರಾರಿ ಆಗುತ್ತಿದ್ದ. ಇನ್ನು ವಾಹನವನ್ನು ಬೇರೆಯವರಿಗೆ ಮಾರಿ ಅವರಿಗೂ ವಂಚಿಸುತ್ತಿದ್ದ. ಹೀಗೆ ಎರಡು ಮಾದರಿಯಲ್ಲಿ ಆತ ಮೋಸ ಮಾಡಿ ಹಣ ಮಾಡುತ್ತಿದ್ದ. ಇತ್ತೀಚಿಗೆ ವಿದ್ಯಾರಣ್ಯಪುರದ ದರ್ಶನ್ ಅವರಿಗೆ ಟೆಸ್ಟ್ ಡ್ರೈವ್ ನೆಪದಲ್ಲಿ ವಂಚಿಸಿ ಕದ್ದ ಬೈಕ್ ಅನ್ನು ಬೇರೆಯವರಿಗೆ ಆರೋಪಿ ಮಾರಾಟ ಮಾಡಿದ್ದ.
ಮಗುವಿಗೆ ಅನಾರೋಗ್ಯ
ತನ್ನ ಮಗುವಿಗೆ ಅನಾರೋಗ್ಯ ಸಮಸ್ಯೆ ಇದ್ದು, ವೈದ್ಯಕೀಯ ಖರ್ಚು ವೆಚ್ಚಾಗಿ ವಂಚನೆ ಕೃತ್ಯ ಎಸಗಿದ್ದಾಗಿ ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಆದರೆ ಆರೋಪಿ ವೃತ್ತಿಪರ ಕ್ರಿಮಿನಲ್ ಆಗಿರುವುದರಿಂದ ಈಗ ಮಗುವಿನ ಆರೋಗ್ಯ ವಿಚಾರವು ನೆಪ ಅಷ್ಟೇ ಎಂದು ಪೊಲೀಸರು ಹೇಳಿದ್ದಾರೆ.
