Bank Theft Case: ಸಾಲ ತೀರಿಸಲು ಬ್ಯಾಂಕಿಗೇ ಕನ್ನ ಹಾಕಿದ್ದ ಖದೀಮನ ಬಂಧನ
* ಐಷಾರಾಮಿ ಜೀವನದತ್ತ ಆಕರ್ಷಿತನಾಗಿದ್ದ ಎಂಜಿನಿಯರ್
* ಸುಲಭವಾಗಿ ಹಣ ಗಳಿಕೆಗಾಗಿ ಆನ್‌ಲೈನ್ ಟ್ರೇಡಿಂಗ್ ಮೊರೆ
* 35 ಲಕ್ಷ ಸಾಲದ ಸುಳಿಗೆ ಸಿಲುಕಿದ್ದ ಆರೋಪಿ
ಬೆಂಗಳೂರು(ಜ.23): ಇತ್ತೀಚಿಗೆ ಮಡಿವಾಳ ಸಮೀಪ ಎಸ್‌ಬಿಐ ಬ್ಯಾಂಕ್(State Bank of India) ನುಗ್ಗಿ ಸಿಬ್ಬಂದಿಗೆ ಬೆದರಿಸಿ ಸುಮಾರು ಎರಡು ಕೆ.ಜಿ. ಚಿನ್ನ ಹಾಗೂ ಹಣ ದೋಚಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬನನ್ನು ಆಗ್ನೇಯ ವಿಭಾಗದ ಪೊಲೀಸರು(Police) ಬಂಧಿಸಿದ್ದಾರೆ(Arrest).
ಕಾಮಾಕ್ಷಿಪಾಳ್ಯದ ಎಸ್.ಧೀರಜ್ ಬಂಧಿತನಾಗಿದ್ದು, ಆರೋಪಿಯಿಂದ 1 ಕೆ.ಜಿ. 805 ಗ್ರಾಂ ಚಿನ್ನ, .6.5 ಲಕ್ಷ ನಗದು ಹಾಗೂ ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಜ.14 ಎಸ್‌ಬಿಐ ಬ್ಯಾಂಕ್ ಸಿಬ್ಬಂದಿ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳುವ ಹೊತ್ತಿನಲ್ಲಿ ಬ್ಯಾಂಕ್‌ಗೆ ನುಗ್ಗಿ ಆರೋಪಿ ಈ ಕಳ್ಳತನ(Theft) ಕೃತ್ಯ ಎಸಗಿದ್ದ. ಈ ಬಗ್ಗೆ ತನಿಖೆ ನಡೆಸಿದ ಮಡಿವಾಳ ಉಪ ವಿಭಾಗದ ಎಸಿಪಿ ಸುಧೀರ್ ಎಂ.ಹೆಗಡೆ ಹಾಗೂ ಮೈಕೋ ಲೇಔಟ್ ಉಪ ವಿಭಾಗದ ಎಸಿಪಿ ಕರಿಬಸವೇಗೌಡ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಮಹದೇವ ಶ್ರೀನಾಥ್ ಜೋಶಿ ತಿಳಿಸಿದ್ದಾರೆ.
Kidnap Case: ಮುನಿಸಿಕೊಂಡ ಪ್ರಿಯತಮೆ ಓಲೈಕೆಗೆ ಅಣ್ಣನ ಕಿಡ್ನಾಪ್: ಪಾಗಲ್ ಪ್ರೇಮಿ ಅಂದರ್
35 ಲಕ್ಷ ಸಾಲಕ್ಕೆ ಬ್ಯಾಂಕ್‌ನಲ್ಲಿ ಕಳ್ಳತನ:
ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ ಧೀರಜ್, ಇಂದಿರಾ ನಗರದ ಖಾಸಗಿ ಕಂಪನಿಯಲ್ಲಿ(Private Company) ಉದ್ಯೋಗದಲ್ಲಿದ್ದ. ಮಾಸಿಕ 30 ಸಾವಿರ ಸಂಬಳ ಪಡೆಯುತ್ತಿದ್ದ ಆತ, ತನ್ನ ಕುಟುಂಬದ ಜತೆ ಕಾಮಾಕ್ಷಿಪಾಳ್ಯದಲ್ಲಿ ನೆಲೆಸಿದ್ದ. ಐಷಾರಾಮಿ ಬದುಕಿನತ್ತ ವ್ಯಾಮೋಹಿತನಾಗಿದ್ದ ಆರೋಪಿ, ಆನ್‌ಲೈನ್ ಟ್ರೇಡಿಂಗ್ ಮೂಲಕ ಹಣ ಸಂಪಾದನೆಗೆ ಮುಂದಾಗಿದ್ದ. ಇತ್ತೀಚಿಗೆ ಅಮೆರಿಕಾ ಮೂಲದ ಟ್ರೇಡಿಂಗ್ ಕಂಪನಿಯಲ್ಲಿ ಸುಮಾರು .25 ಲಕ್ಷ ತೊಡಗಿಸಿದ್ದ ಆತನಿಗೆ ಆರ್ಥಿಕ ನಷ್ಟವಾಗಿತ್ತು. ಅಲ್ಲದೆ ಕ್ರೆಡಿಟ್ ಕಾರ್ಡ್, ಬಜಾಜ್ ಫೈನಾನ್ಸ್ ಹಾಗೂ ಸ್ನೇಹಿತರಿಂದ ಸಹ ಆತ ಸಾಲ ಮಾಡಿದ್ದು, ಹೀಗೆ ಒಟ್ಟು .35 ಲಕ್ಷ ಸಾಲದ ಸುಳಿಗೆ ಆರೋಪಿ ಸಿಲುಕಿದ್ದ. ಈ ಆರ್ಥಿಕ ಸಂಕಷ್ಟದಿಂದ ಪಾರಾಗಲು ಬ್ಯಾಂಕ್‌ಗಳಲ್ಲಿ ಕಳ್ಳತನಕ್ಕೆ ಧೀರಜ್ ಯೋಜಿಸಿದ್ದ.
ಕಾವಲುಗಾರರಿಲ್ಲದ ಬ್ಯಾಂಕ್ ಟಾರ್ಗೆಟ್:
ನಗರ ಸುತ್ತಾಟ ನಡೆಸಿ ಆರೋಪಿ, ಕಾವಲುಗಾರರಿಲ್ಲದ ಬ್ಯಾಂಕ್‌ಗಳಲ್ಲಿ ಸಿಬ್ಬಂದಿಗೆ ಬೆದರಿಸಿ ಹಣ ದೋಚಲು ಸಂಚು ರೂಪಿಸಿದ್ದ. ಆಗ ಆತನ ಕಣ್ಣಿಗೆ ಮಡಿವಾಳದ ಎಸ್‌ಬಿಐ ಬ್ಯಾಂಕ್‌ನ ಶಾಖೆ ಬಿದ್ದಿದೆ. ಅಂತೆಯೇ ಜ.14ರಂದು ಸಂಜೆ 5.30ರ ಸುಮಾರಿಗೆ ಮನೆಗೆ ಹೊರಡಲು ಬ್ಯಾಂಕ್ ಸಿಬ್ಬಂದಿ ಅಣಿಯಾಗುತ್ತಿರುವ ಹೊತ್ತಿಗೆ ಆರೋಪಿ ನುಗ್ಗಿದ್ದಾನೆ. ಆಗ ಬ್ಯಾಂಕ್ ನೌಕರನೊಬ್ಬನ ಕುತ್ತಿಗೆಗೆ ಚಾಕು ಹಿಡಿದು ಜೀವ ಬೆದರಿಕೆ ಹಾಕಿದ ಆರೋಪಿ, ಬಳಿಕ ಬ್ಯಾಂಕ್ ಸ್ಟ್ರಾಂಗ್ ರೂಮ್‌ನಲ್ಲಿ ತಿಜೋರಿ ಬೀಗ ತೆಗೆಸಿ 1.805 ಕೆ.ಜಿ ಚಿನ್ನ ಹಾಗೂ .3.76 ಲಕ್ಷ ಹಣ ದೋಚಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Woman Murder: ಬಡ್ಡಿಗೆ ದುಡ್ಡು ಕೊಟ್ಟಿದ್ದಾಕೆಯ ಕೊಂದು ಒಡವೆ ಲೂಟಿ
ಬ್ಯಾಂಕ್‌ನಲ್ಲಿ ದೋಚಿದ ಚಿನ್ನದ ಪೈಕಿ 250 ಗ್ರಾಂ ಅನ್ನು ಮಾರಾಟ ಮಾಡಿ ಹಣ(Money) ಪಡೆದಿದ್ದ. ಈಗ ಆ ಚಿನ್ನ ಮತ್ತು ಹಣ ಜಪ್ತಿ ಮಾಡಿದ್ದೇವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಮೂರು ದಿನ ಕಾದು ಕಳ್ಳತನ
ಈ ಕೃತ್ಯದ ಆರೋಪಿ ಪತ್ತೆಗೆ ಇಬ್ಬರು ಎಸಿಪಿಗಳ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ ಜೋಶಿ ರಚಿಸಿದ್ದರು. ತನಿಖೆಗಿಳಿದ(Investigation) ವಿಶೇಷ ತಂಡಗಳು, ಘಟನಾ ಸ್ಥಳದ ಸುತ್ತಮುತ್ತ ಸಿಸಿಟಿವಿ ಹಾಗೂ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಆರೋಪಿ ಜಾಡು ಸಿಕ್ಕಿದೆ. ಮೂರು ದಿನಗಳು ಆ ಬ್ಯಾಂಕ್ ಸರಹದ್ದಿನಲ್ಲಿ ಓಡಾಡಿ ಆರೋಪಿ, ಬ್ಯಾಂಕ್ ಸಿಬ್ಬಂದಿಯ ಚಲನವಲನ ಹಾಗೂ ಭದ್ರತೆ ಬಗ್ಗೆ ಮಾಹಿತಿ ಕಲೆ ಹಾಕಿ ಕೃತ್ಯ ಎಸಗಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.