ಬೆಂಗಳೂರು(ಫೆ.07): ಇಂದಿರಾನಗರ ಕ್ಲಬ್‌ ಸದಸ್ಯನ ದಾಂಧಲೆ ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ ಬಿ ವರದಿ ಸಲ್ಲಿಸಲು 10 ಲಕ್ಷ ಲಂಚ ಪಡೆದ ಆರೋಪದ ಮೇರೆಗೆ ಇಂದಿರಾನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಬಿ.ರಾಮಮೂರ್ತಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಕರಣ ದಾಖಲಿಸಿಕೊಂಡಿದೆ.

ಇಂದಿರಾನಗರ ಕ್ಲಬ್‌ನ ಕಾರ್ಯದರ್ಶಿ ನಾಗೇಂದ್ರ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆದೇಶ ಜಾರಿ ಮಾಡಲಾಗಿತ್ತು. ಈ ವೇಳೆ ಇಂದಿರಾನಗರ ಕ್ಲಬ್‌ ಸದಸ್ಯ ರಾಮ್‌ಮೋಹನ್‌ ಮೆನನ್‌ 2020ರ ಏ.5ರಿಂದ ಜೂ.19ರ ಅವಧಿಯಲ್ಲಿ ಜಾರಿಯಲ್ಲಿದ್ದ ಲಾಕ್‌ಡೌನ್‌ ಆದೇಶವನ್ನು ಉಲ್ಲಂಘಿಸಿ ಕ್ಲಬ್‌ ಸೆಕ್ಯೂರಿಟಿ ಗಾರ್ಡ್‌ನನ್ನು ಬೆದರಿಸಿ ಕ್ಲಬ್‌ ಒಳಗೆ ಅತಿಕ್ರಮವಾಗಿ ಪ್ರವೇಶಿಸಿದ್ದರು. ಅಲ್ಲದೇ, ಕರ್ತವ್ಯನಿರತ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಕ್ಲಬ್‌ನ ಸಿಸಿ ಕ್ಯಾಮೆರಾದಲ್ಲಿ ರಾಮ್‌ಮೋಹನ್‌ ಕೃತ್ಯಗಳು ಸೆರೆಯಾಗಿದ್ದವು. ರಾಮ್‌ಮೋಹನ್‌ ದಾಂಧಲೆ ನಡೆಸಿದ ಕಾರಣಕ್ಕಾಗಿ ನಾಗೇಂದ್ರ ಅವರು ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ದರು.

ಎಸಿಬಿ ಬಲೆಗೆ ಬಿದ್ದ ಟೌನ್‌ ಪ್ಲಾನಿಂಗ್ ಅಧಿಕಾರಿ; ಕಂತೆ ಕಂತೆ ಹಣ

ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾದ ವಿಚಾರ ತಿಳಿಯುತ್ತಿದ್ದಂತೆ ರಾಮ್‌ಮೋಹನ್‌ ತನ್ನ ಸಹಚರರೊಂದಿಗೆ ಇನ್‌ಸ್ಪೆಕ್ಟರ್‌ ರಾಮಮೂರ್ತಿ ಮತ್ತು ಪಿಎಸ್‌ಐ ಚಿದಾನಂದ್‌ ಜತೆ ಚರ್ಚಿಸಿ ನ್ಯಾಯಾಲಯಕ್ಕೆ ಬಿ ವರದಿ ಸಲ್ಲಿಸಿದರೆ .10 ಲಕ್ಷ ನೀಡುವುದಾಗಿ ತಿಳಿಸಿದ್ದರು. ಲಂಚದ ಆಮಿಷಕ್ಕೊಳಗಾದ ಇನ್‌ಸ್ಪೆಕ್ಟರ್‌ ಬಿ ವರದಿ ಸಲ್ಲಿಸಲು ಒಪ್ಪಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಇನ್‌ಸ್ಪೆಕ್ಟರ್‌ಗೆ ಮೊದಲು ರಾಮ್‌ಮೋಹನ್‌ 2.95 ಲಕ್ಷ ಚೆಕ್‌ ನೀಡಿದ್ದರು. ಉಳಿದ ಹಣವನ್ನು ನಗದು ರೂಪದಲ್ಲಿ ಪಡೆದುಕೊಂಡಿದ್ದರು. ಈ ವಿಚಾರ ನಾಗೇಂದ್ರ ಅವರಿಗೆ ತಿಳಿದ ಬಳಿಕ ಎಸಿಬಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಎಫ್‌ಐಆರ್‌ ದಾಖಲಿಸಿಕೊಳ್ಳಲು ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಸರ್ಕಾರವು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೇ ವೇಳೆ ಪಿಎಸ್‌ಐ ಚಿದಾನಂದ್‌ ವಿರುದ್ಧ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ತನಿಖೆ ನಡೆಸುವಂತೆ ಸರ್ಕಾರ ತಿಳಿಸಿದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.